ದಕ್ಷಿಣ ಕನ್ನಡ

ಅಪಘಾತ: ಮೂವರ ಸಾವು

Published On :

ಮುಧೋಳ: ಲಾರಿ ಮತ್ತು ಕಾರ್ ನಡುವೆ ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮುಧೋಳ ಸಮೀಪದ ಜೀರಗಾಳ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ. ಮುಧೋಳದಿಂದ ಲೋಕಾಪೂರಕ್ಕೆ ಹೊರಟಿದ್ದ ಲಾರಿ ಮತ್ತು ಲೋಕಾಪುರದಿಂದ ಮುಧೋಳಕ್ಕೆ ಬರುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದು ಈ ಅನಾಹುತ ನಡೆದಿದೆ. ಕಾರ್ ಚಾಲಕ ಮತ್ತು ಮುಂಭಾಗದಲ್ಲಿ ಕುಳಿತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರ್ ಚಾಲಕನ ಹಿಂಬದಿಯಲ್ಲಿ ಕುಳಿತ್ತಿದ್ದ ನಾಲ್ವರು ಯುವಕರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪಿಎಸ್‌ಐ ಐ.ಆರ್. ಪಟ್ಟಣಶೆಟ್ಟಿ ತಿಳಿಸಿದ್ದಾರೆ. ಮುಧೋಳದ ಸದ್ದಾಂ ದಾವಲಸಾಬ ಕೌಜಲಗಿ(24), ಫಯಾಜ್ ಇಮಾಮಬೇಗ್ ಜಮಾದಾರ(24), ಮಹ್ಮದಗೌಸ್ ಬಾಷಾಸಾಹೇಬ ಮೋಕಾಶಿ(22) ಮೃತಪಟ್ಟವರು. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭ್ಯರ್ಥಿ ಬದಲು  ಸುದ್ದಿ ವಿರೋಧಿಗಳ ತಂತ್ರ: ಬಿಜೆಪಿ
ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಹೆಸರನ್ನು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಅಂತಿಮಗೊಳಿಸಿದೆ. ಇದೀಗ ಅಭ್ಯರ್ಥಿ ಬದಲಾವಣೆ ವಿಚಾರದಲ್ಲಿ ಹರಡಿರುವ ಸುದ್ದಿ ವಿರೋಧಿಗಳ ಹತಾಶೆಯ ಕೃತ್ಯ ಎಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ತಿಳಿಸಿದ್ದಾರೆ. ನರೇಂದ್ರ ಮೋದಿಯ ಭಾರತ ಗೆಲ್ಲಿಸಿ ಸಮಾವೇಶದಿಂದ ಕಂಗೆಟ್ಟ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಸೋಲು ಖಚಿತವಾಗಿದೆ. ಬಿಜೆಪಿ ಈಗಾಗಲೇ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುತ್ತಿದ್ದು, ಗೆಲವಿನ ತಂತ್ರಗಾರಿಕೆ ನಡೆಸುತ್ತಿದೆ. ಹೀಗಿರುವಾಗ ಸುಳ್ಳು ತಂತ್ರಗಳಿಂದ ವಿಚಲಿತರಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುಳ್ಯ: ಬಸ್ ತಡೆದು ರು. 4 ಲಕ್ಷ ದರೋಡೆ
ಸುಳ್ಯ: ಮಂಗಳೂರಿನಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ತಡೆದು ನಿಲ್ಲಿಸಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಬಳಿ ಇದ್ದ 4 ಲಕ್ಷ ನಗದು ದರೋಡೆ ಮಾಡಿದ ಘಟನೆ ಸುಳ್ಯ ಸಮೀಪದ ಓಡಬಾಯಿ ಎಂಬಲ್ಲಿ ಬುಧವಾರ ರಾತ್ರಿ 11ರ ವೇಳೆಗೆ ನಡೆದಿದೆ. ಎರಡು ಒಮ್ನಿ ಹಾಗೂ ಒಂದು ಸ್ಕಾರ್ಪಿಯೋದಲ್ಲಿ ಬಂದ ತಂಡ ವೋಲ್ವೋ ಬಸ್ಸನ್ನು ತಡೆದು ನಿಲ್ಲಿಸಿ ದರೋಡೆ ಮಾಡಿ ಪರಾರಿಯಾಗಿದೆ. ಸುಳ್ಯ ಗಾಂಧಿನಗರದ ಅಡಕೆ ಅಂಗಡಿಯೊಂದರ ನೌಕರ ಮಹಮ್ಮದ್ ಕಬೀರ್(24) ಎಂಬವರು 4 ಲಕ್ಷ ನಗದಿನೊಂದಿಗೆ ಮಂಗಳೂರಿನಿಂದ ಬಸ್ ಏರಿದ್ದರು. ಸುಳ್ಯ ಪಟ್ಟಣಕ್ಕೆ 1 ಕಿ.ಮೀ. ದೂರವಿರುವಾಗ ದುಷ್ಕರ್ಮಿಗಳ ತಂಡ ಅವರನ್ನು ಬಸ್‌ನಿಂದ ಎಳೆದು ಹಾಕಿ ಹಲ್ಲೆ ನಡೆಸಿ ನಗದು ದರೋಡೆ ಮಾಡಿ ಪರಾರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.