ದಕ್ಷಿಣ ಕನ್ನಡ

ಬಂಟ್ವಾಳ: ಗ್ಯಾಸ್ ಪೈಪ್‌ಲೇನ್ ಸಭೆ ಬಹಿಷ್ಕರಿಸಿದ ರೈತರು

Published On :

ಬಂಟ್ವಾಳ: ಎಚ್ಪಿಸಿಎಲ್ ಗ್ಯಾಸ್ ಪೈಪ್‌ಲೈನ್‌ಗೆ ಬಂಟ್ವಾಳದಲ್ಲೂ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ರೋಡಿನ ಸ್ತ್ರೀಶಕ್ತಿ ಸಭಾಭವನದಲ್ಲಿ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕರೆದಿದ್ದ ಮಂಗಳೂರು, ಹಾಸನ, ಮೈಸೂರು, ಸೋಲೂರು ಎಚ್ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಸಂತ್ರಸ್ತರ ಸಭೆಯಲ್ಲಿ ಭಾಗವಹಿಸಿದ್ದ ರೈತರು ಕಂಪೆನಿಯ ನಿಲುವು ಬಹಿಷ್ಕರಿಸಿ ಹೊರನಡೆದಿದ್ದಾರೆ.
ಏನಾಯಿತು..: ನಿಗದಿಯಂತೆ ಸಭೆ ಪೂರ್ವಾಹ್ನ 10 ಗಂಟೆಗೆ ಆರಂಭಗೊಂಡಿತು.  ತಾಲೂಕಿನ 11 ಗ್ರಾಮಗಳ ರೈತರು, ಭೂಮಾಲೀಕರು ಭಾಗವಹಿಸಿದ್ದರು. ಎಚ್ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು, ಕಾವಳಮೂಡೂರು, ಕಾವಳಪಡೂರು, ಮೂಡುಪಡುಕೋಡಿ, ಕಾಡಬೆಟ್ಟು, ಮೂಡನಡುಗೋಡು, ಪಂಜಿಕಲ್ಲು, ಅರಳ, ತೆಂಕಬೆಳ್ಳೂರು, ಬಡಗಬೆಳ್ಳೂರು, ಕರಿಯಂಗಳ ಪರಿಸರದ ರೈತರ ಭೂಮಿಯಲ್ಲಿ ಹಾದು ಹೋಗಲಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ಸರ್ಕಾರ ಯಾವುದೇ ಭೂಮಾಲೀಕರನ್ನು ಕೈ ಬಿಡುವುದಿಲ್ಲ, ಎಲ್ಲರ ಹಿತರಕ್ಷಣೆಗೆ ಜಿಲ್ಲಾಡಳಿತ ಸಿದ್ಧವಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಸಭೆಯಲ್ಲಿ ಸಂಚಲನ ಕಂಡುಬಂತು.
ಸಂತ್ರಸ್ತರ ಹೋರಾಟ ಸಮಿತಿ ಪ್ರಧಾನ ಸಂಚಾಲಕ ರವಿಕಿರಣ್ ಪುಣಚ ಮಾತನಾಡಿ, ಜಿಲ್ಲಾಧಿಕಾರಿಯನ್ನು ಕಂಪೆನಿ ದಿಕ್ಕು ತಪ್ಪಿಸುತ್ತಿದೆಯೇ ಅಥವಾ ಜಿಲ್ಲಾಧಿಕಾರಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಗ್ಯಾಸ್ ಪೈಪ್‌ಲೈನ್‌ನಿಂದ ಇಲ್ಲಿನ ಫಲವತ್ತಾದ ಕೃಷಿ ಭೂಮಿಗಳು ಬರಡಾಗಲಿವೆ. ಈ ಭೂಮಿಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಕೇವಲ ಸರ್ಕಾರಕ್ಕೆ ತೆರಿಗೆ ಪವತಿಸಲು ಮಾತ್ರ ಸೀಮಿತವಾಗಲಿದೆ. ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಿಡಲಾರೆವು ಎಂದರು.
ಸಭೆ ಬಹಿಷ್ಕಾರ: ಸಂತ್ರಸ್ತ ಭೂ ಮಾಲೀಕರ ನಿಲುವನ್ನು ಸರ್ಕಾರಕ್ಕೆ ತಿಳಿಸಿ ಯೋಜನೆಯನ್ನು ಕೈಬಿಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಗಿದ್ದರೂ ಬಲವಂತವಾಗಿ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ ರವಿಕಿರಣ್ ಸಭೆ ಬಹಿಷ್ಕರಿಸಿದರು. ಈ ವೇಳೆ ಎಲ್ಲ ರೈತರೂ ಪೈಪ್‌ಲೈನ್‌ಗೆ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರ ತೆರಳಿದರು.
ಈ ಸಂದರ್ಭ ವಿಶೇಷ ಭೂ ಸ್ವಾಧೀನಾಧಿಕಾರಿಗಳಾದ ಕೃಷ್ಣಮೂರ್ತಿ, ನಾಗಾರಾಜ ಹಾಗೂ ತಹಸೀಲ್ದಾರ್ ಮಲ್ಲೇಸ್ವಾಮೀ, ಎಚ್ಪಿಸಿಎಲ್ ಸಂಸ್ಥೆಯ ಮುಖ್ಯಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.