ಫೋನ್ನಲ್ಲೇ ಭವಿಷ್ಯ ನುಡಿಯುವ ನಕಲಿ ಜ್ಯೋತಿಷಿ ಸೆರೆ
ಉಪ್ಪಿನಂಗಡಿ: ಗಂಟೆಯೊಳಗಡೆ ಜೀವನದ ಎಲ್ಲ ಸಮಸ್ಯೆಗಳಿಗೂ ಶೇ. 100ರಷ್ಟು ಪರಿಹಾರ ಒದಗಿಸುವುದಾಗಿ ನೀಡಲಾದ ಜಾಹೀರಾತು ನಂಬಿ ಫೋನಾಯಿಸಿದ ವ್ಯಕ್ತಿಯಿಂದ 43 ಗ್ರಾಂ ಚಿನ್ನ ಹಾಗೂ ರು. 68 ಸಾವಿರ ಹಣ ದೋಚಿದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ. ಪೊಲೀಸರ ನೆರವಿನಿಂದ ವಂಚಕನಿಂದ ಹುಬ್ಬಳ್ಳಿಯಲ್ಲಿ ಸೊತ್ತು ವಾಪಸ್ ಪಡೆಯಲಾಗಿದೆ.
ಘಟನೆ ವಿವರ: ಮದುವೆ ನಿಗದಿಯಾಗಿದ್ದ ಉಪ್ಪಿನಂಗಡಿ ಪರಿಸರದ ಪ್ರತಿಷ್ಠಿತ ಕುಟುಂಬದ ಯುವಕ ಪತ್ರಿಕಾ ಜಾಹೀರಾತು ನಂಬಿ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಜ್ಯೋತಿಷಿಯ ಮೊಬೈಲ್ನ್ನು ಸಂಪರ್ಕಿಸಿದ್ದರು. ಈ ವೇಳೆ ಜ್ಯೋತಿಷಿ, 'ನಿನಗೆ ಮತ್ತು ನಿನ್ನ ಮನೆಯವರಿಗೆ ಪ್ರಾಣ ಹೋಗುವ ಕಂಟಕ ಎದುರಾಗಿದೆ. ಕೂಡಲೇ ಅಗತ್ಯ ಪೂಜೆ ನಡೆಸದಿದ್ದರೆ ನೀನೂ ಸೇರಿದಂತೆ ನಿನ್ನ ಮನೆಯವರೆಲ್ಲರೂ ಮದುವೆಯ ಮೊದಲೇ ಜೀವ ಕಳೆದುಕೊಳ್ಳುತ್ತಾರೆ' ಎಂದು ಹೆದರಿಸಿದ್ದ.
ಕಂಗಾಲಾದ ಯುವಕ ಅಗತ್ಯ ಪೂಜೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡ. ಪೂಜೆಗಾಗಿ, ತಾನು ಮದುವೆಗೆಂದು ಸಿದ್ಧ ಪಡಿಸಿದ್ದ ಚಿನ್ನಾಭರಣ ಹಾಗೂ ಹಣವನ್ನು ಇರಿಸಬೇಕಾಗಿದ್ದು, ಮದುವೆಯ ಮೊದಲು ಅವೆಲ್ಲವನ್ನೂ ಕಳುಹಿಸುವಂತೆ ಜ್ಯೋತಿಷಿ ಫೋನ್ನಲ್ಲೇ ತಿಳಿಸಿದ್ದ.
ಇದರಂತೆ, ಬರೋಬ್ಬರಿ ರು. 68 ಸಾವಿರವನ್ನು ಜ್ಯೋತಿಷಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಜ್ಯೋತಿಷಿಯ ಶಿಷ್ಯನೆಂದು ಹೇಳಲಾದ ವ್ಯಕ್ತಿ ಬಂದು ನಾಲ್ಕು ಬಳೆ ಹಾಗೂ ಚಿನ್ನದ ಚೈನ್ ಸಹಿತ 43 ಗ್ರಾಂ. ತೂಕದ ಚಿನ್ನಾಭರಣವನ್ನು ಪಡೆದುಕೊಂಡು ಹೋಗಿದ್ದ. ಪೂಜೆ ಮುಗಿಸಿ ಮದುವೆಯ ಮುನ್ನಾ ದಿನ ಚಿನ್ನಾಭರಣ ಹಾಗೂ ಹಣ ಹಿಂತಿರುಗಿಸಲಾಗುತ್ತದೆ. ಪೂಜೆಯ ಫಲ ಕಂಡ ಬಳಿಕವೇ ಕಾಣಿಕೆಯ ರೂಪದಲ್ಲಿ ಸಂಭಾವನೆಯ ಹಣ ನೀಡಬಹುದು ಎಂದು ಜ್ಯೋತಿಷಿ ನಂಬಿಸಿದ್ದ.
ಜ್ಯೋತಿಷಿ ತನ್ನ ಪಾಲಿನ ದೇವರೆಂದು ತಿಳಿದು ಮದುಮಗ ಸುಮ್ಮನಾದರೆ, ಇತ್ತ ಮದುವೆಗೆ ಮುನ್ನ ಮದುವೆ ಮಂಟಪಕ್ಕೆ ಹೋಗುವ ಸಿದ್ಧತೆ ನಡೆಸಿ ಚಿನ್ನಾಭರಣ ನಾಪತ್ತೆಯಾದ ಬಗ್ಗೆ ಮನೆಯವರಿಗೆ ತಿಳಿಯಿತು.
ಕಂಗಾಲಾದ ಮನೆಯವರು ಪೊಲೀಸರಿಗೆ ದೂರು ನೀಡಿದರು. ಸತತ ಯತ್ನದ ಬಳಿಕ ದೂರವಾಣಿ ಸಂಪರ್ಕಕ್ಕೆ ದೊರೆತ ಜ್ಯೋತಿಷಿ ಪೂಜೆಗೆ ಇರಿಸಲಾದ ಚಿನ್ನಾಭರಣಗಳನ್ನು ನನ್ನ ಶಿಷ್ಯರು ಶ್ರೀ ದೇವಿಗೆ ಕಣ್ಣು, ಕಿವಿ, ಮೂಗು ಮಾಡಿ ತೊಡಿಸಿದ್ದಾರೆ. ಶ್ರೀ ದೇವಿಯ ಕೃಪೆಯಿಂದ ಮದುವೆ ಸಾಂಗವಾಗಿ ನೆರವೇರುತ್ತದೆ ಹಾಗೂ ಸಂಭವನೀಯ ಪ್ರಾಣ ಕಂಟಕ ದೂರೀಕರಿಸಲಾಗಿದೆ ಎಂದು ಅಭಯ ನೀಡಿದ.
ಮದುವೆ ಕಳಿಯಿತು: ನೋವಿನ ನಡುವೆಯೇ ಮದುವೆ ಕಾರ್ಯ ಮುಗಿಸಿ, ಪೊಲೀಸರ ನೆರವಿನಿಂದ ಜ್ಯೋತಿಷಿಯ ಮೊಬೈಲ್ ನಂಬರ್ನ ಚಲನವಲನವನ್ನು ಪತ್ತೆಹಚ್ಚಿದಾಗ ಅದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿದೆ ಎಂದು ತಿಳಿದು ಬಂತು. ಹೊನ್ನಾವರಕ್ಕೆ ಹೋಗಿ ವಿಚಾರಿಸಿದಾಗ ಅಲ್ಲಿ ಇರುವುದು ಖಚಿತ ಪಟ್ಟರೂ ಆತ ಹುಬ್ಬಳಿಗೆ ಹೋಗಿರುವ ವಿಚಾರ ತಿಳಿದು ಬಂತು.
ಹುಬ್ಬಳಿಗೆ ಹೋಗಿ ಜಾಲಾಡಿದಾಗ 21 ರ ತರುಣ ಜ್ಯೋತಿಷಿ ವಂಚಕನೆಂದು ತಿಳಿದು ಬಂದು, ಆತ ತನ್ನ ತಪ್ಪನ್ನು ಒಪ್ಪಿಕೊಂಡು ಪಡೆದುಕೊಂಡ ಹಣ ಮತ್ತು ಚಿನ್ನಾಭರಣ ಯಥಾ ರೂಪದಲ್ಲಿ ಹಿಂತಿರುಗಿಸಿದ.
ಬಿಕಾಂ ವಿದ್ಯಾರ್ಥಿ ಜ್ಯೋತಿಷಿಯಾದ ಬಗೆ..
ಹುಬ್ಬಳಿ ವಿದ್ಯಾನಗರದ ಲೋಕಮಾನ್ಯ ತಿಲಕ್ ರಸ್ತೆಯಲ್ಲಿನ ಫಕೀರಪ್ಪ ಸಿಂಧೆ ಎಂಬ ಗಿಳಿ ಲಕ್ಷಣ ಜ್ಯೋತಿಷ್ಯ ನುಡಿಯುವ ಕಾಯಕದ ವ್ಯಕ್ತಿಯ ಮಗ ವಿನಾಯಕ ಫಕೀರ ಸಿಂಧೆ ಈ ವಂಚಕ. ಈತ, ತನ್ನ ಹೆಸರನ್ನು ವಿನಾಯಕ ಜೋಷಿ ಎಂದು, ಪತ್ರಿಕೆಯಲ್ಲಿ ವೇಣುಗೋಪಾಲ ಗುರೂಜಿ ಎಂದೂ ಉಲ್ಲೇಖಿಸುತ್ತಾ ವ್ಯವಹರಿಸುತ್ತಿರುವುದು ಕಂಡುಬಂದಿದೆ.
ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಈತ ಜನರ ಮುಗ್ಧತೆಯಿಂದ ಸುಲಭವಾಗಿ ಹಣಗಳಿಸಲು ಈ ವಂಚನೆಯ ಹಾದಿ ತುಳಿದಿದ್ದಾನೆ. ಈತನ ಬ್ಯಾಂಕ್ ಖಾತೆಗೆ ನಿತ್ಯ ನಿರಂತರ ಹಣ ಜಮೆಯಾಗುತ್ತಿತ್ತು. ಈತನನ್ನು ವಶಕ್ಕೆ ತೆಗೆದುಕೊಂಡಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಉಡುಪಿ ಜಿಲ್ಲೆಯಲ್ಲೂ ಇಂತಹದೇ ಹಲವು ಪ್ರಕರಣಗಳನ್ನು ನಡೆಸಿದ್ದಾನೆ ಎಂಬ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಲಕ್ಷಾಂತರ ರುಪಾಯಿ ಹಣ ಕಬಳಿಸುವ ವಿನಾಯಕನಂತಹ ನಕಲಿ ಜ್ಯೋತಿಷಿಗಳಿಂದಾಗಿ ಅಗಣಿತ ಸಂಖ್ಯೆಯ ಜನತೆ ಈಗಲೂ ಆತನ ಬ್ಯಾಂಕ್ ಖಾತೆಗೆ ರು. 10 ಸಾವಿರ , ರು. 5 ಸಾವಿರದಂತೆ ಹಣವನ್ನು ಪಾವತಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

