ದಕ್ಷಿಣ ಕನ್ನಡ

ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ದರ 422 ಆಧಾರ್ ಲಿಂಕ್ ಮಾಡಿದವರಿಗೆ ದುಪಟ್ಟು!

Published On :

ಮಂಗಳೂರು:  ಎಲ್‌ಪಿಜಿ ಸಿಲಿಂಡರ್‌ಗೆ ರು. 422, ಆಧಾರ ಕಾರ್ಡ್ ಲಿಂಕ್ ಮಾಡಿದ ಗ್ರಾಹಕರಿಗೆ ಸಬ್ಸಿಡಿ ನೀಡಿದ ಬಳಿಕ 799! ಇದು ಕೇಂದ್ರ ಸರ್ಕಾರದ ಬಗ್ಗಿದವನಿಗೆ ಗುದ್ದು ನೀತಿ. ಆಮ್ ಆದ್ಮಿ ಕಿಸೆಗೆ ಯುಪಿಎ ತೂತು ಕೊರೆಯುತ್ತಿದೆ, ಈ ತೂತಿನಲ್ಲೂ ತಾರತಮ್ಯ!
ಕೇಂದ್ರದಲ್ಲಿ ಯುಪಿಎ ಕಾಂಗ್ರೆಸ್ ಸರ್ಕಾರ ರಚನೆಯಾದಾಗ 300 ಆಸುಪಾಸಿನಲ್ಲಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಈಗ ಬರೊಬ್ಬರಿ ಸಬ್ಸಿಡಿ ಸಹಿತ 799ಕ್ಕೆ ತಲುಪಿದೆ. ಈಗ ಎಲ್‌ಪಿಜಿ ಅಡುಗೆ ಅನಿಲ ದರ 1234,  ಗ್ರಾಹಕರ ಖಾತೆಗೆ ಸರ್ವಿಸ್ ಟ್ಯಾಕ್ಸ್ 140 ಕಡಿತವಾಗಿ ಸಬ್ಸಿಡಿ ಬಂದದ್ದು 435.
ಆದರೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಗ್ರಾಹಕರಿಗೆ 422ಕ್ಕೆ ಅದೇ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ.
ವರ್ಷಕ್ಕೆ 9 ಸಿಲಿಂಡರ್ ಗ್ಯಾಸ್ ಸಬ್ಸಿಡಿಯಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. 5 ವರ್ಷದ ಹಿಂದೆ 900ಕ್ಕೆ ಮೂರು ಸಿಲಿಂಡರ್ ಬರುತ್ತಿತ್ತು. ಈಗ ಬೆಲೆ ಏರಿಕೆಯಿಂದ ಬಡ ಗ್ರಾಹಕರು ವರ್ಷಕ್ಕೆ 9 ಗ್ಯಾಸ್ ಖರೀದಿಸುವುದೇ ಸಾಹಸ ಎಂಬ ಪರಿಸ್ಥಿತಿ ಉಂಟಾಗಿದೆ.
 ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಜನವರಿ ತಿಂಗಳಿಂದ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ ಆಧಾರ ಕಾರ್ಡ್ ಕಡ್ಡಾಯ ಎಂದು ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ವೇಳೆ ತುಳಸಿಮದ್ದಿನೇನಿ ಹೇಳಿದ್ದರು. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶಿಸ್ತು ಮತ್ತು ಪ್ರಾಮಾಣಿಕ ನಾಗರಿಕರು ಆಧಾರ ಕಾರ್ಡ್‌ಗೆ ಲಿಂಕ್ ಮಾಡಿ ಖಾತೆ ಮಾಡಿಸಿದ್ದರು.
 ಶಿಸ್ತು ಪ್ರಾಮಾಣಿಕತೆಗೆ ಪ್ರತಿಯಾಗಿ ಹೆಚ್ಚುವರಿ ಹಣ ದಂಡ ರೂಪದಲ್ಲಿ ಕಕ್ಕುವ ಸ್ಥಿತಿ. ಏಪ್ರಿಲ್ ತಿಂಗಳ ಬಳಿಕವೇ ಆಧಾರ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್ ಹೇಳಿಕೆ ನೀಡಿರುವುದರಿಂದ ಇನ್ನು ಮೂರು ತಿಂಗಳ ಕಾಲ ಗ್ರಾಹಕರು 422 ದರದಲ್ಲಿಯೇ ಸಿಲಿಂಡರ್ ಖರೀದಿಸುವ ಅವಕಾಶ ಪಡೆದಿದ್ದಾರೆ.
 'ಮಂಗಳೂರಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ 422 ಆದರೆ, 432 ತೆಗೆದುಕೊಳ್ಳುತ್ತಾರೆ. ನಾನು ಇಂದು ಒಂದು ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಗ್ಯಾಸ್ ಏಜೆನ್ಸಿಯವರು 1234 ಪಡೆದರು. ನನಗೆ 435 ಸಬ್ಸಿಡಿ ಬಂದಿದೆ. ನಾನು ಸಾಮಾನ್ಯ ಗ್ರಾಹಕರಿಗಿಂತ ದುಪ್ಪಟ್ಟು ಹಣ ನೀಡಬೇಕಾಗಿದೆ' ಎಂದು ಕದ್ರಿಯ ಲ್ಯಾನ್ಸಿ ಡಿಸಿಲ್ವ ಹೇಳುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯ ಜನವರಿಯಿಂದ ಆರಂಭವಾಗಿದೆ.
 ಗ್ಯಾಸ್ ಕಂಪೆನಿಗಳು ಮಾರ್ಚ್ ಕೊನೆ ವರೆಗೆ ತೊಂದರೆ ಇಲ್ಲ ಎಂದು ಹೇಳುತ್ತಿವೆ. ಬೇರೆಯವರಿಗೆ 432 ಸಿಲಿಂಡರ್ ನೀಡುವಾಗ ನಮ್ಮಿಂದ ಹೆಚ್ಚು ತೆಗೆದುಕೊಳ್ಳುವುದು ಹಗಲು ದರೋಡೆ ಅಲ್ಲವೇ ಎನ್ನುತ್ತಾರೆ ಲ್ಯಾನ್ಸಿ.
ಆಧಾರ್ ಕಾರ್ಡ್ ಸಂಖ್ಯೆ ಆನ್‌ಲೈನ್‌ನಲ್ಲೂ ಸಿಗುತ್ತದೆ. ದೇಶಾದ್ಯಂತ ಎಲ್ಲರಿಗೂ ಆಧಾರ್ ಕಾರ್ಡ್ ಏಕಕಾಲದಲ್ಲಿ ವಿತರಣೆ ಆಸಾಧ್ಯ. ಆದ್ದರಿಂದ ಅಂತರ್ಜಾಲದಲ್ಲಿ ಇಆಧಾರ್ ಮೂಲಕ ಕಾರ್ಡ್ ಡೌನ್ ಲೋಡ್ ಮಾಡಿ ಕಾಪಿ ಮಾಡಿ ಗ್ಯಾಸ್ ಏಜೆನ್ಸಿಗಳಿಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
 ಆದರೆ ವಸ್ತುಸ್ಥಿತಿ ಹಾಗಿಲ್ಲ. 'ಗ್ಯಾಸ್ ವಿತರಿಸುವ ಸಹ್ಯಾದ್ರಿ ಗ್ಯಾಸ್ ಏಜೆನ್ಸಿಗೆ ಹೋದಾಗ ಅವರು ಒರಿಜಿನಲ್ ಆಧಾರ್ ಕಾರ್ಡ್ ತರುವಂತೆ ಒತ್ತಾಯಿಸುತ್ತಾರೆ. ಮೂರು ತಿಂಗಳು ಕಳೆದ ಬಳಿಕ ನಾವು 1,234 ಅಥವಾ ಅದಕ್ಕಿಂತ ಹೆಚ್ಚೇ ಹಣ ನೀಡಬೇಕಾದ ಪರಿಸ್ಥಿತಿ ಬರಬಹುದು. ಒಟ್ಟಾರೆ ಆಮ್ ಆದ್ಮಿ ಕಾಲ ಎನ್ನುತ್ತಾ ಜನಸಾಮಾನ್ಯರನ್ನೂ ಲೂಟಿ ಮಾಡುವ ಪರಿಸ್ಥಿತಿ ಬಂದಿದೆ' ಎಂದು ಗೃಹಿಣಿ ಸಂಧ್ಯಾ ಭಟ್ ಹೇಳುತ್ತಾರೆ.
 ದರ ವ್ಯತ್ಯಾಸದಿಂದ ಗ್ರಾಹಕರಿಗೆ ಗೊಂದಲವಾಗಿದೆ. ಅನೇಕ ಮಂದಿ ಗ್ಯಾಸ್ ಏಜೆನ್ಸಿಗಳ ಮುಂದೆ ಗಲಾಟೆ ಕೂಡಾ ಮಾಡಿದ್ದಾರೆ. ಆದರೆ ನಾವು ನಿಯಮ ಮುಂದಿಡುತ್ತಿವೆ. ಮೂರು ತಿಂಗಳ ಬಳಿಕ ಆಧಾರ ಕಾರ್ಡ್ ಲಿಂಕ್ ಮಾಡದವರಿಗೆ ಸಬ್ಸಿಡಿಯೇ ಇಲ್ಲ ಎಂದು ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗ್ಯಾಸ್ ಏಜೆನ್ಸಿ ಪ್ರತಿನಿಧಿ ಹೇಳುತ್ತಾರೆ.
-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.