ಗ್ಯಾಸ್ಪೈಪ್ ಲೇನ್: ಜನರಿಗೆ ಬದುಕು ಕಳೆದುಕೊಳ್ಳುವ ಭೀತಿ
ಮಂಗಳೂರು: ಹಾಸನ -ಮೈಸೂರು- ಸೋಲೂರು ಗ್ಯಾಸ್ ಪೈಪ್ ಲೇನ್ ಮಂಗಳೂರಿನ ಗ್ರಾಮಗಳಲ್ಲಿ ಹಾದುಹೋಗುವುದರಿಂದ 700ಕ್ಕೂ ಹೆಚ್ಚು ಕುಟುಂಬಗಳು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ಎಲ್ಪಿಜಿ ಅನಿಲ ಸಾಗಿಸುವ ಉದ್ದೇಶಕ್ಕೆ ಕಾಮಗಾರಿ ಆರಂಭಿಸಲು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆ ಯೋಜನೆ ರೂಪಿಸಿದೆ.
ಮಂಗಳೂರಿನ ಮೊಗರು, ಬಡಗಉಳಿಪಾಡಿ, ತೆಂಕಉಳಿಪಾಡಿ, ಕಂದಾವರ, ಅದ್ಯಪಾಡಿ, ಮರವೂರು ನಿವಾಸಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. 25 ವರ್ಷಗಳ ಹಿಂದೆ 2 ಅಡಿ ಮಾತ್ರ ಪಡೆಯುವುದಾಗಿ ಹೇಳಿ 66 ಅಡಿವರೆಗೆ ಯಾವುದೇ ಕೃಷಿ ಮಾಡದಂತೆ ತಡೆ ಹಿಡಿದಿದ್ದಾರೆ. ಇದೀಗ ಮತ್ತೊಂದು ಗ್ಯಾಸ್ ಪೈಪ್ಲೇನ್ ಹಾಕಲು ಸಿದ್ಧತೆ ನಡೆಸಿದ್ದಾರೆ.
ಇಲ್ಲಿ ಸಣ್ಣ ಹಿಡುವಳಿದಾರರೇ ಇರುವುದರಿಂದ ನಿರ್ವಸಿತರಾಗುವು ಭೀತಿ ಇದೆ. ಎರಡು ಅಡಿ ಮಾತ್ರ ಎಂದರೂ 66 ಅಡಿ ಜಾಗ ಕಬಳಿಸಿದ್ದಾರೆ. ಜಾಗದ ಸರ್ಕಾರಿ ಮೌಲ್ಯದ ಶೇ.10 ಮಾತ್ರ ಜಾಗದ ಮಾಲೀಕರಿಗೆ ಪಾವತಿಸುತ್ತಾರೆ. ಬಳಿಕ ಸ್ವಂತ ಜಾಗಕ್ಕೆ ಜೆಸಿಬಿ ತಂದರೂ ಬಂದು ಸೀಝ್ ಮಾಡುತ್ತಾರೆ. ಇದನ್ನು ವಿರೋಧಿಸಿ ಜ.7ರಂದು ಕೈಕಂಬದಿಂದ ನಾಡಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಗ್ಯಾಸ್ಪೈಪ್ ಲೈನ್ ಹೋರಾಟ ಸಮಿತಿ ಸಂಚಾಲಕ ಎಂ.ಇಬ್ರಾಹಿಂ ಮಳಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫಲವತ್ತಾದ ಭೂಮಿ ಬರಡಾಗಿ ಬರಗಾಲ ಬರುವ ಸಾಧ್ಯತೆ ಇದೆ. ಈ ಯೋಜನೆಯಿಂದ ರೈತರು ಮನೆ, ಮಠ ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಜನವಸತಿ ಪ್ರದೇಶದಲ್ಲಿಯೇ ಅಪಾರ ಪ್ರಮಾಣದ ಗ್ಯಾಸ್ ಸಾಗಿಸುತ್ತಿರುವುದರಿಂದ ಸುರಕ್ಷತೆಯ ಭೀತಿ ಎದುರಾಗಿದೆ. ಇವರು ಹೊಸ ಭೂಸ್ವಾಧೀನ ಕಾಯ್ದೆಯಂತೆ ಮಾರುಕಟ್ಟೆ ದರ ನೀಡಿದರೆ ನಾವು ಊರು ಬಿಟ್ಟು ಹೋಗಲು ಸಿದ್ಧ. ಆದರೆ ಪರಿಹಾರವನ್ನೂ ನೀಡದೆ, ಜಾಗವನ್ನು ಅನುಭೋಗಿಸಲು ಬಿಡದೆ ಸಂಕಷ್ಟದಲ್ಲಿ ಸಿಲುಕಿದ್ದೇವೆ ಎಂದು ಗೋಳು ತೋಡಿಕೊಂಡರು.
ಇದೇ ಜಾಗದಲ್ಲಿ ಕೆಪಿಟಿಸಿಎಲ್ನವರು ಬೃಹತ್ ಟವರ್ ನಿರ್ಮಿಸಿ ಹೈಟೆನ್ಶನ್ ವಿದ್ಯುತ್ ಹಾಯಿಸುತ್ತಿದ್ದಾರೆ. ಬಡಗುಳಿಪಾಡಿ ಮತ್ತು ಮೊಗರು ಗ್ರಾಮದ 500 ಎಕರೆ ಕೃಷಿ ಭೂಮಿಯನ್ನು ಸೆಂಟ್ಸ್ಗೆ 4 ಸಾವಿರದಂತೆ ಪಡೆದ ಕೆಐಡಿಬಿ ಇದೀಗ 80 ಸಾವಿರಕ್ಕೆ ಕೈಗಾರಿಕೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದಲ್ಲಿ ಊರಿನವರೇ ಆದ ಇಂಧನ ಸಚಿವ ವೀರಪ್ಪ ಮೊಯ್ಲಿ ಬಳಿ ಸಮಸ್ಯೆ ಹೇಳಿಕೊಳ್ಳಬಹುದಲ್ಲ ಎಂಬ ಪತ್ರಕರ್ತರ ಪ್ರಶ್ನೆಗ ಉತ್ತರಿಸಿದ ಹೋರಾಟ ಸಮಿತಿಯವರು, ನಮ್ಮವರೇ ಇದ್ದ ಕಾರಣಕ್ಕೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಕರ ಕೆ.ಶೆಟ್ಟಿ, ಕೃಷ್ಣಪ್ರಸಾದ್ ರೈ, ಬಾಬು ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

