ಹೊಸ ಉದ್ದಿಮೆ ಪರವಾನಗಿ ಬಗ್ಗೆ ಶೀಘ್ರ ಸಭೆ; ಕೆಸಿಸಿಐ ಸಂವಾದದಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಉದ್ದಿಮೆ ಪರವಾನಗಿ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಸಂಸ್ಥೆ ಪದಾಧಿಕಾರಿಗಳ ಜತೆ ಪಾಲಿಕೆ ಚರ್ಚೆ ನಡೆಸಲಿದ್ದು, ಶೀಘ್ರವೇ ಸಭೆ ಕರೆಯಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಇಬ್ರಾಹಿಂ ಹೇಳಿದ್ದಾರೆ.
ದ.ಕ.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ(ಕೆಸಿಸಿಐ)ದಲ್ಲಿ ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚದರ ಅಡಿ ವಿಸ್ತೀರ್ಣಕ್ಕೆ ಉದ್ದಿಮೆ ಪರವಾನಗಿ ಶುಲ್ಕ ಏರಿಕೆಯಾಗಿದ್ದು, ಇದರಿಂದ ಸಾಮಾನ್ಯ ಉದ್ದಿಮೆದಾರರಿಗೆ ಉದ್ದಿಮೆ ನಡೆಸಲು ತೊಂದರೆಯಾಗಿದೆ. ಈಗ ಪಾಲಿಕೆ ಪ್ರತಿನಿಧಿಗಳು ಆಯ್ಕೆಯಾಗಿದ್ದರೂ ಮೇಯರ್, ಉಪಮೇಯರ್ ಇನ್ನೂ ಆಯ್ಕೆಯಾಗದಿರುವುದರಿಂದ ಈ ಬಿಕ್ಕಟ್ಟನ್ನು ಬಗೆಹರಿಸಲು ಪಾಲಿಕೆ ಪ್ರತಿನಿಧಿಗಳಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಏ.1ರಿಂದ ಅನ್ವಯವಾಗುವಂತೆ ಹೊಸ ಉದ್ದಿಮೆ ಪರವಾನಗಿ ನೀತಿಯನ್ನು ಜಾರಿಗೆ ತರಬೇಕು ಎಂದು ಕೆಸಿಸಿಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿತ್ತು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿ ಇಬ್ರಾಹಿಂ, ತಾನು ಈಗಾಗಲೇ ಆಯುಕ್ತರ ಜತೆ ಮಾತನಾಡಿದ್ದು, ಈ ಬಗ್ಗೆ ಇನ್ನೊಂದು ಸಭೆ ನಡೆಸುವ ಭರವಸೆ ನೀಡಿದರು. ಎತ್ತಿನಹೊಳೆ ಯೋಜನೆ ಜಾರಿಗೊಳಿಸಬಾರದು ಎನ್ನುವ ಕೆಸಿಸಿಐ ವಿರೋಧಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಇಬ್ರಾಹಿಂ, ನದಿ ತಿರುವು ಯೋಜನೆಗೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಸಂಘ ಸಂಸ್ಥೆಗಳು ಈಗಷ್ಟೇ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದರು.
ಎಂಎಸ್ಇಝಡ್ನ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು. ಪಡೀಲು ಮತ್ತು ಜೆಪ್ಪುವಿನಲ್ಲಿ ಸೀಮಿತ ಅವಧಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಂಗಳೂರನ್ನು ನರ್ಮ್ ಯೋಜನೆಯಲ್ಲಿ ಸೇರಿಸುವ ಬಗ್ಗೆ ಕೇಂದ್ರದಿಂದ ಕೆಲವೇ ದಿನಗಳಲ್ಲಿ ಆದೇಶ ಹೊರಬೀಳಲಿದೆ.
ಬಳಿಕ ತಲಪಾಡಿಯಿಂದ ಮೂಲ್ಕಿ ವರೆಗೆ ಪಾಲಿಕೆ ವ್ಯಾಪ್ತಿ ವಿಸ್ತರಣೆಯಾಗಲಿದೆ. ಮೊದಲು ಹಾಲಿ ಪಾಲಿಕೆ ಪ್ರದೇಶ ಅಭಿವೃದ್ಧಿಗೆ ಆದ್ಯತೆ ನೀಡಿ ನಂತರ ವಿಸ್ತರಿತ ಪ್ರದೇಶ ಅಭಿವೃದ್ಧಿಪಡಿಸಲಾಗುವುದು. ಮಲಿನ ನೀರನ್ನು ಸಂಸ್ಕರಿಸಿ ಎಸ್ಇಝಡ್ ಬಳಕೆಗೆ ಪೂರೈಸಲು ನಿರ್ಧರಿಸಲಾಗಿದೆ. ಜಾಗ ಮತ್ತು ಕಟ್ಟಡ ಮೌಲ್ಯಮಾಪನ ಕುರಿತ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಕೆಸಿಸಿಐ ಅಧ್ಯಕ್ಷ ಮೊಹಮ್ಮದ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಿಗಮ್ ಬಿ ವಸಾನಿ, ಗೌರವ ಕಾರ್ಯದರ್ಶಿ ಜೀವನ್ ಸಲ್ದಾನ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

