ಬೊಜ್ಜು ಕರಗಿಸಲು ಪಿಲಿಕುಳ ಸೇರಿದ 'ಮಹಾಲಕ್ಷ್ಮಿ'
ಮಂಗಳೂರು: ಕಟೀಲಿನ ಆನೆ ಮಹಾಲಕ್ಷ್ಮಿ ಬೊಜ್ಜು ಕಳೆದುಕೊಂಡು ಸುಂದರವಾಗಲು ಕೊನೆಗೂ ಪಿಲಿಕುಳ ನಿಸರ್ಗಧಾಮಕ್ಕೆ ಕಾಲಿಟ್ಟಿದ್ದಾಳೆ. ಕಟೀಲು ದೇವಸ್ಥಾನದಿಂದ ಬೆಳಗ್ಗೆ 4 ಗಂಟೆಗೆ ಹೊರಟ ಆನೆ ಕೈಕಂಬ ಮಾರ್ಗವಾಗಿ 20 ಕಿ.ಮೀ. ದೂರ ಕ್ರಮಿಸಿ ಪಿಲಿಕುಳ ನಿಸರ್ಗಧಾಮ ಮುಟ್ಟುವಾಗ ಮಧ್ಯಾಹ್ನ 2ಕ್ಕೆ ಗಂಟೆ.
'ಮಹಾಲಕ್ಷ್ಮಿಗೆ ಬೇಕಂತೆ ಉರ್ದು ಬಲ್ಲ ಮಾವುತ' ಎಂಬ ಆನೆಯ ತುಮುಲಗಳ, ಬೊಜ್ಜು, ಆರೋಗ್ಯ ಸಮಸ್ಯೆಗಳ ಕುರಿತ ವಿಶೇಷ ವರದಿ ಡಿ.10ರಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು.
ಇದೀಗ ಬೊಜ್ಜು ಕರಗಿಸಿಕೊಂಡು ಸ್ಲಿಮ್ ಮತ್ತು ಚೂಟಿಯಾಗಲು ಬಳಿಕ ಗಂಡಾನೆ ಜತೆ ಸೇರಲು ಮಹಾಲಕ್ಷ್ಮಿಗೆ ಚಿಕಿತ್ಸೆ ಶುಕ್ರವಾರದಿಂದ ಆರಂಭವಾಗಲಿದೆ.
ಬೊಜ್ಜು ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಣೆ ಮತ್ತು ಗರ್ಭಧಾರಣೆ ಪೂರ್ವಭಾವಿಯಾಗಿ ಪಿಲಿಕುಳದಲ್ಲಿ ಆರೋಗ್ಯ ಚಿಕಿತ್ಸೆಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಣಯ ಕೈಗೊಂಡಿತ್ತು. ಅದರಂತೆ ಗುರುವಾರ ಬೆಳಗ್ಗೆ 4 ಗಂಟೆಗೆ ಆನೆ ಜತೆಯಲ್ಲಿ ಇಬ್ಬರು ಮಾವುತರು ಮತ್ತು ಬ್ಯಾಟರಿ ದೀಪಗಳನ್ನು ಹಿಡಿಯಲು ಮೂರು ಮಂದಿ ಪಿಲಿಕುಳದತ್ತ ತೆರಳಿದ್ದರು.
ದೀಪದ ಬೆಂಗಾವಲು ಪಡೆ: ಆನೆ ನಡೆದದ್ದೇ ದಾರಿ ಎಂದು ಹೇಳಿದ್ದರೂ ಬೆಳಗ್ಗಿನ ಜಾವ ಕಪ್ಪಾಗಿರುವ ಆನೆ ಇತರ ವಾಹನಗಳಿಗೆ ಪಕ್ಕನೆ ಕಾಣಿಸುವುದಿಲ್ಲ. ಆನೆಗೂ ದಾರಿ ಸರಿಯಾಗಿ ಕಾಣಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಆನೆಗೆ ಬೆಂಗಾವಲಾಗಿ ಮೂವರು ಬ್ಯಾಟರಿ ಹಿಡಿಯುವವರನ್ನು ನಿಯೋಜಿಸಲಾಗಿತ್ತು.
ಲಾರಿ ಏರಿಲ್ಲ: ಆನೆಗಳನ್ನು ಹೆಚ್ಚಾಗಿ ಲಾರಿ ಮುಂತಾದ ದೊಡ್ಡ ವಾಹನದಲ್ಲಿ ಒಯ್ಯುತ್ತಾರೆ. ಆದರೆ ಈ ಆನೆಗೆ ಬೊಜ್ಜು ಹೆಚ್ಚಿರುವುದರಿಂದ ಲಾರಿ ಹತ್ತಲು ಆಗುತ್ತಿಲ್ಲ. ಎಳವೆಯಲ್ಲಿಯೂ ಈ ಆನೆ ಲಾರಿಯನ್ನು ಕಂಡರೆ ಮೇಲೆ ಹತ್ತದೆ ಹಿಂದೆ ಸರಿಯುತ್ತಿತ್ತು. ಆದ್ದರಿಂದ ಕಟೀಲಿಂದ ಪಿಲಿಕುಳ ವರೆಗೆ ಆನೆಯನ್ನು ನಡೆಸಿಕೊಂಡೇ ಹೋಗಲು ನಿರ್ಧರಿಸಲಾಗಿತ್ತು. ಅದೂ ಅಲ್ಲದೆ ಆನೆ ಬೊಜ್ಜು ಕರಗಿಸುವುದಕ್ಕಾಗಿಯೇ ಅಲ್ಲಿಗೆ ಒಯ್ಯುತ್ತಿರುವುದರಿಂದ ಸಮಸ್ಯೆ ಆಗದು ಎಂದು ಆಡಳಿತ ಮಂಡಳಿ ನಿರ್ಧರಿಸಿತ್ತು. ಪಿಲಿಕುಳ ನಿಸರ್ಗ ಧಾಮದಲ್ಲಿ ಆನೆಗೆ ವಸತಿ ಕಲ್ಪಿಸಲಾಗಿದೆ. ಜತೆಯಲ್ಲಿ ಇಬ್ಬರು ಮಾವುತರಿಗೆ ವಸತಿಗೃಹದಲ್ಲಿ ಎರಡು ಕೋಣೆ ಕಾಯ್ದಿರಿಸಲಾಗಿದೆ.
'ಪಿಲಿಕುಳದಲ್ಲಿ ತಜ್ಞ ವೈದ್ಯರಿದ್ದಾರೆ, ಆನೆ ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ, ವೈದ್ಯರು ನೀಡುವ ಸಲಹೆಯನ್ನು ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ' ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತಾಧಿಕಾರಿ ಕೃಷ್ಣ ಮೂರ್ತಿ ತಿಳಿಸಿದ್ದಾರೆ.
'ಬಾಳೆಹಣ್ಣು, ತೆಂಗಿನಕಾಯಿ ತಿಂದ ಪರಿಣಾಮ ಆರೋಗ್ಯ ಹಾಳಾಗಿದೆ, ಜನರಲ್ ಚೆಕಪ್ ಮಾಡುವಂತೆ ಕಟೀಲು ಆಡಳಿತಾಧಿಕಾರಿ ವಿನಂತಿಸಿದ್ದರು. ಆನೆಗೆ ನಿಸರ್ಗಧಾಮಕ್ಕೆ ಬಂದಿದೆ. ಶುಕ್ರವಾರದಿಂದ ರಕ್ತಪರೀಕ್ಷೆ ಸಹಿತ ಎಲ್ಲ ಪರೀಕ್ಷೆ ನಡೆಸಲಿದ್ದೇವೆ' ಎಂದು ಪಿಲಿಕುಳ ನಿಸರ್ಗಧಾಮದ ಮುಖ್ಯಸ್ಥ ಜೆ.ಪಿ.ಭಂಡಾರಿ ತಿಳಿಸಿದ್ದಾರೆ.
ಹಿಂದೊಮ್ಮೆ ಮಹಾಲಕ್ಷ್ಮಿಯನ್ನು ಕಳುಹಿಸಿದ್ದರು. ಬೆದರಿದ ಹೆಣ್ಣಾನೆ ನಮ್ಮ ಗಂಡಾನೆ ಜತೆ ಸೇರಲೇ ಇಲ್ಲ. ಗಂಡಾನೆ ನೋಡಿದ ತಕ್ಷಣ ಓಡಲು ಶುರು ಮಾಡಿದ್ದಳು ಎನ್ನುತ್ತಾರೆ ಪಿ.ಜೆ.ಭಂಡಾರಿ.
ಉರ್ದು ಕಲಿಕೆ!
ಕಟೀಲು ಆನೆ ಮಾವುತ ನಿಧನದಿಂದ ವರ್ಷದ ಹಿಂದೆ ಮಲೆಯಾಳಿ ಸಂಕೇತ ಕಲಿತಿರುವ ಮಾವುತನನ್ನು ನೇಮಿಸಲಾಗಿತ್ತು. ಇದರಿಂದ ಆನೆಗೆ ಸಂವಹನಕ್ಕೆ ಸಮಸ್ಯೆ ಆಗಿತ್ತು. ಹೊಸ ಮಾವುತನನ್ನು ಪೂರ್ತಿಯಾಗಿ ಒಪ್ಪಿಕೊಂಡಿಲ್ಲ. ಇದೀಗ ಹಿಂದಿನ ಮಾವುತ ಡಿ.ಅನ್ವರ್ ಅವರ ಮಗ ಮಲೆಯಾಳಿ ಮಾವುತನಿಗೆ ಸಹಕರಿಸುತ್ತಿದ್ದಾರೆ. ಹೊಸ ಮಾವುತ ಆನೆಯ ಸಂಕೇತ ಉರ್ದು ಭಾಷೆಯನ್ನು ಶೀಘ್ರವಾಗಿ ಕಲಿಯುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

