ದಕ್ಷಿಣ ಕನ್ನಡ

ಮಂಗಳೂರು ವಿವಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಅನುಷ್ಠಾನ ಶೀಘ್ರ: ಸೊರಕೆ ಭರವಸೆ

Published On :

ಬಂಟ್ವಾಳ: ಮಂಗಳೂರು ವಿ.ವಿ.ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ಶೀಘ್ರ ಅನುಷ್ಠಾನಕ್ಕೆ ತರಲಾಗುವುದು. ಮುಂದಿನ ವರ್ಷದಿಂದ ಕರ್ನಾಟಕ ಸರ್ಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಭರವಸೆ ನೀಡಿದ್ದು, ಪ್ರಾಥಮಿಕ ಶಾಲೆ ಪಠ್ಯಪುಸ್ತಕದಲ್ಲೂ ನಾರಾಯಣ ಗುರುಗಳ ವಿಚಾರಧಾರೆ ಅಳವಡಿಸಲು ಸಂಬಂಧಪಟ್ಟ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಯುವವಾಹಿನಿ ಘಟಕದ ಬೆಳ್ಳಿಹಬ್ಬದ ಅಂಗವಾಗಿ ಬಿ.ಸಿ. ರೋಡ್‌ನ ಗಾಣದಪಡ್ಪುವಿನಲ್ಲಿರುವ ಶ್ರೀ ನಾರಾಯಣಗುರು ನಗರದ ಕಾಂತಬಾರೆ- ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಭಾನುವಾರ ನಡೆದ ಶ್ರೀ ನಾರಾಯಣ ಗುರುಗಳ ಸಂದೇಶಯಾತ್ರೆ ಮತ್ತು ಯುವ ಬಿಲ್ಲವ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೋಟಿ ಚೆನ್ನಯರ ಜನ್ಮಸ್ಥಳ ಅಭಿವೃದ್ಧಿಪಡಿಸಿದಂತೆ ಮುಂದಿನ ಹಂತದಲ್ಲಿ  ಕಾಂತಬಾರೆ-ಬೂದಬಾರೆ ಜನ್ಮಸ್ಥಳದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಸೊರಕೆ ಭರವಸೆ ನೀಡಿದರು.
ನಾವು ಮಾದರಿಯಾಗಬೇಕು: ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಸಮಾಜದ ಎಲ್ಲಾ ವರ್ಗದ ಜನರನ್ನು ಪ್ರೀತಿಸುವುದರೊಂದಿಗೆ ರಕ್ಷಿಸುವ ಕೆಲಸವನ್ನು ಬಿಲ್ಲವ ಸಮಾಜ ಮಾಡಬೇಕು. ಬೇರೆಯವರಿಗೆ ಬುದ್ಧಿ ಹೇಳುವ ಮೊದಲು ನಾವು ಮಾದರಿಯಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಸ್ಮರಣ ಸಂಚಿಕೆ ಬಿಡುಗಡೆ: ಇದೇ ವೇಳೆ 'ಬಿರ್ವೆರ್ ತುಡರ್‌' ಸ್ಮರಣ ಸಂಚಿಕೆಯನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ. ನಾರಾಯಣ ಸ್ವಾಮಿ ಬಿಡುಗಡೆಗೊಳಿಸಿದರು. ಸೊರಬ ಶಾಸಕ ಮಧು ಬಂಗಾರಪ್ಪ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಉದ್ಯಮಿ ರಮೇಶ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ, ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ, ಜೆ. ಸೀತಾರಾಮ, ಗುರು ಸಂದೇಶ ಯಾತ್ರೆಯ ಸಂಚಾಲಕ ಟಿ. ಶಂಕರ್ ಸವರ್ಣ, ಯುವವಾಹಿನಿ ತಾಲೂಕು ಘಟಕದ ಕಾರ್ಯದರ್ಶಿ ನಾಗೇಶ ಎಲಬೆ ಇದ್ದರು. ತಾಲೂಕು ಯುವವಾಹಿನಿ ಘಟಕದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು.
ಠರಾವು ಮಂಡನೆ: ಬಿ.ಸಿ. ರೋಡ್ ವೃತ್ತಕ್ಕೆ, ಬಿ.ಸಿ. ರೋಡ್ ವೃತ್ತದಿಂದ ಹಾದುಹೋಗುವ ಬೈಪಾಸ್ ರಸ್ತೆಗೆ ನಾರಾಯಣ ಗುರು ಹೆಸರಿಡಬೇಕು, ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ವಿಚಾರಧಾರೆ ಅಳವಡಿಸಬೇಕು, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಸಮಾವೇಶದಲ್ಲಿ ಠರಾವು ಮಂಡಿಸಲಾಯಿತು.
ವೈಭವದ ಮೆರವಣಿಗೆ:  ಬಿ.ಸಿ.ರೋಡಿನ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಗುರು ಸಂದೇಶ ಯಾತ್ರೆ ಬಿ.ಸಿ.ರೋಡಿನ ರಾಜ ರಸ್ತೆಯ ಮೂಲಕ ವೈಭವ ಪೂರ್ಣ ಮೆರವಣಿಗೆಯೊಂದಿಗೆ ಕಾಂತಬಾರೆ ಬೂದಾಬಾರೆ ಸಭಾಂಗಣಕ್ಕೆ ಆಗಮಿಸಿತು.
ಭಜನೆ ತಂಡ, ಕಲ್ಲಡ್ಕ ಶಿಲ್ಪಾಗೊಂಬೆ ಬಳಗದ ಗೊಂಬೆ ಕುಣಿತ, ನಾಸಿಕ್ ಬ್ಯಾಂಡ್ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.  ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಸಭಾಂಗಣಕ್ಕೆ ತುಳುನಾಡಿನ ವೀರಪುರಷರ ಹೆಸರು ಇರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.