ದಕ್ಷಿಣ ಕನ್ನಡ

ನಿರ್ಮಿತಿ ಕಾಮಗಾರಿಗೆ ಗುತ್ತಿಗೆ ಕಾರ್ಮಿಕರ ಬಳಕೆ

Published On :

ಮಂಗಳೂರು: ಅಸಮರ್ಪಕ, ಕಳಪೆ ಕಾಮಗಾರಿ ಆರೋಪಕ್ಕೆ ಪದೇ ಪದೇ ಗುರಿಯಾಗುತ್ತಿದ್ದ ನಿರ್ಮಿತಿ ಕೇಂದ್ರ ಈಗ ಉಪ ಗುತ್ತಿಗೆಯಲ್ಲಿ ಕಾಮಗಾರಿ ನಿರ್ವಹಿಸುವುದನ್ನು ಕೈಬಿಟ್ಟಿದೆ. ಇದರ ಬದಲು ಗುತ್ತಿಗೆ ಕಾರ್ಮಿಕರನ್ನು ಬಳಸಿ ಕಾಮಗಾರಿ ನಿರ್ವಹಿಸುತ್ತಿದೆ.
 ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನಿರ್ಮಿತಿ ಕೇಂದ್ರ ಕಾಮಗಾರಿ ವೈಖರಿ ಪದೇ ಪದೇ ಪ್ರಸ್ತಾಪವಾಗುವುದು ಸಾಮಾನ್ಯ. ನಿರ್ಮಿತಿ ಕೇಂದ್ರ ತಾನೇ ಕಾಮಗಾರಿ ನಿರ್ವಹಿಸುವ ಬದಲು ಉಪ ಗುತ್ತಿಗೆ ನೀಡುತ್ತದೆ. ಇದರಿಂದ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ಕಳಪೆಯ ಆರೋಪ ಜನಪ್ರತಿನಿಧಿಗಳಿಂದ ಕೇಳಬೇಕಾಗುತ್ತಿತ್ತು. ಇದರಿಂದ ರೋಸಿಹೋದ ನಿರ್ಮಿತಿ ಕೇಂದ್ರ ಅಧಿಕಾರಿಗಳು ಈಗ ಉಪ ಗುತ್ತಿಗೆ ಬದಲು ಗುತ್ತಿಗೆ ಕಾರ್ಮಿಕರನ್ನು ಕಾಮಗಾರಿಗೆ ಬಳಸಿಕೊಳ್ಳುತ್ತಿದೆ. ತ್ವರಿತ ಹಾಗೂ ಪಾರದರ್ಶಕ ಕಾಮಗಾರಿ ಇದರಿಂದ ಸಾಧ್ಯ ಎಂದು ಸಾಧಿಸಲು ಹೊರಟಿದೆ.
 ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮಕ್ಕೆ ಕಾಮಗಾರಿ ನಡೆಸಬೇಕಾದರೆ ಟೆಂಡರ್‌ನ ಅಗತ್ಯವಿಲ್ಲ. ಎಷ್ಟೇ ವೆಚ್ಚದ ಕಾಮಗಾರಿ ಇರಲಿ, ಟೆಂಡರ್ ಇಲ್ಲದೆ ನಿರ್ವಹಿಸುವ ಅಧಿಕಾರವನ್ನು ನೀಡಲಾಗಿದೆ.
ಈಗ ಗುತ್ತಿಗೆ ಕಾರ್ಮಿಕರ ಕೈಗೆ: ಉಪ ಗುತ್ತಿಗೆ ವ್ಯವಸ್ಥೆಯ ಟೀಕೆಗೆ ಕೊನೆಗೂ ಮಣಿದ ನಿರ್ಮಿತಿ ಕೇಂದ್ರ, ಈಗ ಕಾಮಗಾರಿಯನ್ನು ಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿದೆ. ರಾಜೀವ್‌ಗಾಂಧಿ ಹೌಸಿಂಗ್ ಬೋರ್ಡ್‌ಗಳ ಯೋಜನೆಗಳಲ್ಲಿ ಮನೆ ನಿರ್ಮಾಣ, ಸಣ್ಣಪುಟ್ಟ ಸೇತುವೆ, ರಸ್ತೆ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಮಾಡುತ್ತಿದೆ.
 ಕಳೆದ ವರ್ಷದಿಂದೀಚೆಗೆ 150ಕ್ಕೂ ಅಧಿಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರಲ್ಲಿ 50 ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಉಳಿದಂತೆ ರು. 5-6 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ನಿರ್ಮಿತಿ ಕೇಂದ್ರದ ಕಾಮಗಾರಿಯಲ್ಲಿ ಸುಧಾರಣೆ ತರಲಾಗಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎನ್ನುತ್ತಾರೆ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ.
ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರು, ಸುಳ್ಯಕ್ಕೆ , ಮಂಗಳೂರು ನಗರ, ಗ್ರಾಮಾಂತರಕ್ಕೆ ತಲಾ ಒಬ್ಬರು ಎಂಜಿನಿಯರ್‌ರಿದ್ದಾರೆ. ಹಾಗಾಗಿ ನಮ್ಮಲ್ಲಿ ಎಂಜಿನಿಯರ್‌ರ ಕೊರತೆ ಇಲ್ಲ. ಕಾಮಗಾರಿ ಎಂಜಿನಿಯರ್‌ರ ಸುಪರ್ದಿಯಲ್ಲಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ ಕಾರ್ಮಿಕರನ್ನು ಬಳಸುವ ಕಾರಣ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತೇವೆ ಎನ್ನುವುದು ನಿರ್ಮಿತಿ ಕೇಂದ್ರ ಅಧಿಕಾರಿಗಳ ಅಂಬೋಣ.
ಟೆಂಡರ್ ಕಾಮಗಾರಿಯೂ ಇದೆ: ಕೋಟ್ಯಂತರ ವೆಚ್ಚದ ಕಾಮಗಾರಿಗಳಿಗೆ ಪಾರದರ್ಶಕ ನೆಲೆಯಲ್ಲಿ ಟೆಂಡರ್ ಕರೆದಿದೆ. ರು. 21 ಕೋಟಿಯಲ್ಲಿ ರು. 4 ಕೋಟಿಯ ಕೆಲಸ ಆಗಿದೆ. ಅದೇ ರೀತಿ ತಣ್ಣೀರುಬಾವಿಯಲ್ಲಿ ರು. 12 ಕೋಟಿಯಲ್ಲಿ ತೂಗುಸೇತುವೆಯ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡಿದೆ. ಆದರೆ ತಾಂತ್ರಿಕ ತೊಡಕಿನಿಂದ ಇದು ಮುಂದುವರಿದಿಲ್ಲ. ಈ ಕಾಮಗಾರಿಗಳನ್ನು ಟೆಂಡರ್ ಕರೆದು ಗುತ್ತಿಗೆಗೆ ವಹಿಸಿದೆ. ಮಂಗಳೂರಿನಲ್ಲಿ ರು. 3 ಕೋಟಿಯಲ್ಲಿ ಹಿಂದುಳಿದ ವರ್ಗದ ಹಾಸ್ಟೇಲ್ ಕಾಮಗಾರಿಯನ್ನು ಮಾಡುತ್ತಿದೆ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.