ಪಾಲಿಕೆ ಮೇಯರ್ ಹುದ್ದೆ ಆಕಾಂಕ್ಷಿಗಳಿಗೆ ತಣ್ಣೀರು
ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಮೇಯರ್ ಆಯ್ಕೆಗೆ ಮಾರ್ಚ್ ಒಳಗೆ ಹೊಸ ಮೀಸಲಾತಿ ಪ್ರಕಟಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿದೆ. ಆದರೆ ನಗರಾಭಿವೃದ್ಧಿ ಇಲಾಖೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಕಾರಣ ಚುನಾಯಿತ ಸದಸ್ಯರ ಮೇಯರ್ಗಿರಿ ಆಕಾಂಕ್ಷೆಗೆ ಸರ್ಕಾರವೇ ತಣ್ಣೀರೆರಚಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಸದಸ್ಯ ಅಜೀಜ್ ಕುದ್ರೋಳಿ ಮೇಯರ್ ಮೀಸಲಾತಿ ಸಮಪರ್ಕವಾಗಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಾದ ಪ್ರತಿವಾದ ನಡೆದು ಅಂತಿಮವಾಗಿ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಡಿಸೆಂಬರ್ ಕೊನೆಗೆ ಹೈಕೋರ್ಟ್ ಆದೇಶಿಸಿ 2 ತಿಂಗಳ ಗಡುವು ವಿಧಿಸಿತ್ತು.
ಸರ್ಕಾರ ಅಪೀಲು: ಪ್ರಸ್ತುತ ಮಹಾನಗರ ಪಾಲಿಕೆ ಮೇಯರ್ ಮೀಸಲಾತಿ ಜತೆಗೆ ಇತರೆ ಸ್ಥಳೀಯಾಡಳಿತಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ವಿಚಾರಣೆಯೂ ಹೈಕೋರ್ಟ್ನಲ್ಲಿ ನಡೆಯುತ್ತಿದೆ.
ಮೇಯರ್ ಆಯ್ಕೆಗೆ ಹೊಸ ಮೀಸಲು ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಆದೇಶಿಸಿದ್ದನ್ನು ಸರ್ಕಾರ ಒಪ್ಪಿಕೊಂಡು ಸುಮ್ಮನಿದ್ದರೆ ಅಥವಾ ಇತರೆ ಸ್ಥಳೀಯ ಸಂಸ್ಥೆಗಳಿಂದ ನಗರ ಪಾಲಿಕೆ ಪ್ರಕರಣವನ್ನು ಬೇರ್ಪಡಿಸುವಂತೆ ಕೋರಿದ್ದರೂ ಸಾಕಿತ್ತು. ಹಾಗೆ ಮಾಡದ ನಗರಾಭಿವೃದ್ಧಿ ಇಲಾಖೆ ಇದರ ವಿರುದ್ಧ ಅಪೀಲು ಸಲ್ಲಿಸಲು ಹೊರಟಿದೆ. ಈಗಾಗಲೇ ಪ್ರಕಟಿಸಿದ ಮೀಸಲಾತಿ ಸಮರ್ಪಕವಾಗಿದ್ದು, ಹೊಸ ಮೀಸಲಾತಿ ಪ್ರಕಟಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದೆ. ಇದು ಚಾತಕಪಕ್ಷಿಗಳಂತೆ ಅಧಿಕಾರಕ್ಕೆ ಕಾಯುತ್ತಿರುವವರಿಗೆ ನಿರಾಶೆ ಉಂಟುಮಾಡಿದೆ.
6 ಪಾಲಿಕೆಗೆ ತೊಂದರೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ಮಹಾ ನಗರ ಪಾಲಿಕೆ ಹೊರತುಪಡಿಸಿ ಉಳಿದ 6 ಮಹಾನಗರ ಪಾಲಿಕೆಗಳಲ್ಲಿ ಮೇಯರ್, ಉಪಮೇಯರ್ ಆಯ್ಕೆ ನಡೆದಿಲ್ಲ. ಮೇಯರ್ ಮೀಸಲಾತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವ ಮುನ್ನವೇ ಮೈಸೂರು ಪಾಲಿಕೆಯಲ್ಲಿ ಮೇಯರ್ ಆಯ್ಕೆ ನಡೆದಿತ್ತು.
ಮಂಗಳೂರು ಸೇರಿದಂತೆ ವಿವಿಧ ಪಾಲಿಕೆಗಳಿಗೆ ಕಳೆದ ಮಾರ್ಚ್ನಲ್ಲಿ ಚುನಾವಣೆಗೆ ನಡೆದಿತ್ತು. ಸರ್ಕಾರ ಮೀಸಲಾತಿ ಪ್ರಕಟಿಸುವಾಗ ಆರು ತಿಂಗಳು ವಿಳಂಬ ಮಾಡಿತ್ತು. ತರಾತುರಿಯಲ್ಲಿ ಮೇಯರ್ ಮೀಸಲಾತಿ ಪ್ರಕಟಿಸಿದ್ದು, ರೊಟೇಶನ್ ಪ್ರಕಾರ ಪ್ರಕಟಿಸಿಲ್ಲ ಎಂದು ಅಜೀಜ್ ಮೇಯರ್ ಮೀಸಲು ವಿರುದ್ಧ ಹೈಕೋರ್ಟ್ನಲ್ಲಿ ದೂರು ದಾಖಲಿಸಿ ತಡೆಯಾಜ್ಞೆ ತಂದಿದ್ದರು.
ಮೀಸಲು ಹಂಚಿಕೆ ಆರೋಪ: ಮಂಗಳೂರು ಮಹಾನಗರ ಪಾಲಿಕೆ ಹಿರಿಯ ಸದಸ್ಯ ಮಹಾಬಲ ಮಾರ್ಲ ಮತ್ತಿತರರು ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸದ್ಯದಲ್ಲೇ ಲೋಕಸಭಾ ಚುನಾವಣೆ ನಡೆಯುವುದರಿಂದ ಈಗಾಗಲೇ ಚುನಾಯಿತರಿದ್ದರೂ ಅಧಿಕಾರ ನಡೆಸದ ಪರಿಸ್ಥಿತಿ ಪಾಲಿಕೆಗೆ ಇದೆ. ಚುನಾವಣೆ ವೇಳೆ ಜನಪ್ರತಿನಿಧಿಗಳ ಅಭಿವೃದ್ಧಿ ಕೊಡುಗೆ ಏನೆಂದು ಜನತೆ ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇರುವುದಿಲ್ಲ. ಹಾಗಾಗಿ ತೀರ್ಪಿನ ವಿರುದ್ಧ ಅಪೀಲು ಹೋಗದೆ, ನಗರ ಪಾಲಿಕೆಯನ್ನು ಪ್ರಕರಣದಿಂದ ಹೊರಗಿಡಬೇಕು. ಸರ್ಕಾರವೇ ಮೀಸಲಾತಿ ಸರಿಪಡಿಸಿ ಕೂಡಲೇ ಮೇಯರ್ ಆಯ್ಕೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಆದರೆ ಎರಡೇ ದಿನದಲ್ಲಿ ತೀರ್ಪಿನ ವಿರುದ್ಧ ಅಪೀಲಿಗೆ ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿ, ಕಾನೂನು ಇಲಾಖೆ ಮುಖೇನ ಅಡ್ವಕೇಟ್ ಜನರಲ್ಗೆ ಮಾಹಿತಿ ರವಾನಿಸಿತ್ತು.
ಮೊದಲು ಅಪೀಲು ಸಲ್ಲಿಸಿ ಈಗ ನೀಡಿರುವ ತೀರ್ಪಿಗೆ ತಡೆಯಾಜ್ಞೆ ತಂದರೆ, ಹಿಂದಿನ ಮೀಸಲಾತಿಯಂತೆ ಮೇಯರ್ ಆಯ್ಕೆ ನಡೆಸಬಹುದು ಎಂಬುದು ನಗರಾಭಿವೃದ್ಧಿ ಇಲಾಖೆ ಲೆಕ್ಕಾಚಾರ.
'ಈಗಾಗಲೇ ಹೊಸ ಸದಸ್ಯರು ಆಯ್ಕೆಯಾಗಿ 9 ತಿಂಗಳು ಕಳೆದಿದೆ. ಸರ್ಕಾರ ಮತ್ತೆ ಅಪೀಲು ಸಲ್ಲಿಸಿದರೆ ಇನ್ನೂ ಒಂದು ವರ್ಷ ವಿಳಂಬ ಆಗಬಹುದು. ಇದರಿಂದ ಪಾಲಿಕೆಗೆ ಚುನಾಯಿತ ಸದಸ್ಯರ ಆಡಳಿತ ಇಲ್ಲದಂತಾಗುತ್ತದೆ. ಈ ವಿಚಾರವನ್ನು ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದೆ' ಎನ್ನುತ್ತಾರೆ ಹಿರಿಯ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

