ಇಚ್ಛಾಶಕ್ತಿ ಕೊರತೆ, ಪಾಲಿಕೆಗೆ ತ್ರಿಶಂಕು ಸ್ಥಿತಿ!
ಮಂಗಳೂರು: ಗ್ರಾಮಾಂತರ ಪ್ರದೇಶದ ತುಂಬೆ, ಕಳ್ಳಿಗೆ, ಪುದು, ಅಡ್ಯಾರ್ ಪಂಚಾಯ್ತಿಗಳಿಗೆ ನೀರು ಸರಬರಾಜು ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪ್ರತಿ ವರ್ಷ ಲಕ್ಷಗಟ್ಟಲೆ ಮೊತ್ತ ಕಳೆದುಕೊಳ್ಳುತ್ತಿದೆ.
ಈ ಪ್ರದೇಶಗಳಿಗೆ ಮಹಾನಗರ ಪಾಲಿಕೆ ನೀರು ಪೈಪ್ನಿಂದ ಪೂರೈಕೆಯಾಗುತ್ತಿದೆ. ಇದಕ್ಕೆ ಚಿಕ್ಕಾಸನ್ನೂ ಪಂಚಾಯ್ತಿಗಳು ಪಾಲಿಕೆಗೆ ಪಾವತಿಸುತ್ತಿಲ್ಲ. ಪಾಲಿಕೆಯೇ ವಾರ್ಷಿಕ ರು. 84 ಲಕ್ಷ ಮೊತ್ತವನ್ನು ವ್ಯಯಿಸುತ್ತಿದೆ. ಇದನ್ನು ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರಿಸುವ ಬೇಡಿಕೆ ಈವರೆಗೆ ಈಡೇರಿಲ್ಲ. ಹಾಗೆಂದು ನೀರು ಸಂಪರ್ಕ ಕಡಿತಗೊಳಿಸುವಂತೆಯೂ ಇಲ್ಲ. ಇಂಥ ಸಂದಿಗ್ಧಕ್ಕೆ ಪಾಲಿಕೆ ಸಿಲುಕಿದೆ. ಈ ಪ್ರಸ್ತಾಪಕ್ಕೆ ಮತ್ತೆ ಚಾಲನೆ ಸಿಕ್ಕಿದ್ದು, ಅದಿನ್ನೂ ಪತ್ರ ವ್ಯವಹಾರದ ಹಂತದಲ್ಲೇ ಇದೆ. ಈ ವಿಚಾರದಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಪಾಲಿಕೆಯನ್ನು ತ್ರಿಶಂಕು ಸ್ಥಿತಿಗೆ ದೂಡಿದೆ.
4 ಗ್ರಾಮ ಪಂಚಾಯ್ತಿಗಳ ಕಿತಾಪತಿ!: ಬಂಟ್ವಾಳ ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರು ಮಹಾನಗರಕ್ಕೆ ಎರಡು ಪೈಪ್ಗಳಲ್ಲಿ ನೀರು ಪೂರೈಕೆಯಾಗುತ್ತದೆ. 2.25 ಎಂಜಿಡಿ ನೀರು ತುಂಬೆ, ಕಳ್ಳಿಗೆ, ಪುದು, ಅಡ್ಯಾರ್ ಪಂಚಾಯ್ತಿಗಳನ್ನು ಹಾದು ಮಂಗಳೂರು ತಲಪುತ್ತದೆ. ಹೀಗೆ ಸಾಗುವ ನೀರನ್ನು ಈ ಪಂಚಾಯ್ತಿಗಳು ಯಥೇಚ್ಛ ಬಳಸಿಕೊಳ್ಳುತ್ತವೆ. ಅದೂ ನಯಾ ಪೈಸೆ ಶುಲ್ಕ ಪಾಲಿಕೆಗೆ ಪಾವತಿಸದೆ ಎಂಬುದು ವಿಶೇಷ. ಪೈಪ್ಲೈನ್ ಅಳವಡಿಸಿದ್ದು ಪಾಲಿಕೆ, ನೀರು ಉಪಯೋಗಿಸುತ್ತಿರುವುದು ಪಂಚಾಯ್ತಿಗಳು.
2007ರಿಂದ ಪಂಚಾಯ್ತಿಗಳು ನೀರನ್ನು ಬಳಸುತ್ತಿದ್ದು, ಇದಕ್ಕಾಗಿ ಪಾಲಿಕೆ ವಾರ್ಷಿಕ ರು. 84 ಲಕ್ಷ ನಿರ್ವಹಣೆಗೆ ವೆಚ್ಚ ಮಾಡುತ್ತಿದೆ. ನೀರಿನ ಆದಾಯವನ್ನು ಪಾಲಿಕೆಗೆ ಪಾವತಿಸದೆ ಪಂಚಾಯ್ತಿಗಳೇ ಬಳಸಿಕೊಳ್ಳುತ್ತಿವೆ. ಇದು ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಜತೆಗೆ 70ಕ್ಕಿಂತ ಜಾಸ್ತಿ ಅನಧಿಕೃತ ಸಂಪರ್ಕಗಳೂ ಪಾಲಿಕೆ ಅಧಿಕಾರಿಗಳ ನಿದ್ದೆಗೆಡಿಸಿದೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಅನಧಿಕೃತ ಸಂಪರ್ಕ ತೆರವು ಹಾಗೂ ಪೈಪ್ಲೈನ್ ಜಿ.ಪಂ.ಗೆ ಹಸ್ತಾಂತರಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಇದು ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿದ ಮೂರನೇ ಚರ್ಚೆ. 2011ರಿಂದ ಈವರೆಗೆ 7 ಸಭೆಗಳು ನಡೆದಿದ್ದು, ಪಾಲಿಕೆಯ ಪ್ರಸ್ತಾವನೆಗೆ ಜಿಲ್ಲಾ ಪಂಚಾಯ್ತಿ ಕ್ಯಾರೇ ಎನ್ನಲಿಲ್ಲ.
ಕೋಟಿಗಟ್ಟಲೆ ವ್ಯರ್ಥ: ಕಳೆದ 6 ವರ್ಷದಲ್ಲಿ ಪಾಲಿಕೆಗೆ ಬರಬೇಕಾದ ಸುಮಾರು ರು. 5.88 ಕೋಟಿ ವ್ಯರ್ಥವಾದಂತಾಗಿದೆ. ಯಾಕೆಂದರೆ ಈ ಮೊತ್ತವನ್ನು ಗ್ರಾಮ ಪಂಚಾಯ್ತಿಗಳು ಪಾಲಿಕೆಗೆ ಭರಿಸುವ ಭರವಸೆ ಇಲ್ಲ, ಪಾಲಿಕೆಗೆ ಸುಲಭದಲ್ಲಿ ವಸೂಲಿ ಮಾಡಲು ಸಾಧ್ಯವಿಲ್ಲ. ಶುಲ್ಕ ಪಾವತಿಸದ ಪಂಚಾಯ್ತಿಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುವ ಇಲ್ಲವೇ ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸುವ ಅಧಿಕಾರಿಗಳ ಪ್ರಸ್ತಾಪಕ್ಕೆ ಉಸ್ತುವಾರಿ ಸಚಿವರು ಸೊಪ್ಪು ಹಾಕಿಲ್ಲ. ಇದು ಕೂಡ ಪಾಲಿಕೆಗ ಅಧಿಕಾರಿಗಳಿಗೆ ನುಂಗಲಾರದ ತುತ್ತು.
ಪ್ರಸ್ತುತ ತುಂಬೆ ಸ್ಥಾವರದಲ್ಲಿರುವ 2.25 ಅಶ್ವಶಕ್ತಿಯ ಪಂಪ್ಗಳ ಬೇರಿಂಗ್ ಸವೆದು ಹೋಗಿದ್ದು, ಅದನ್ನು ಬದಲಾಯಿಸಬೇಕಾಗಿದೆ. ಹಾಗೂ ಇತರೆ ದುರಸ್ತಿ ಮಾಡಬೇಕಾಗಿದೆ. ಆದ್ದರಿಂದ ವಾರ್ಷಿಕ ನಿರ್ವಹಣಾ ವೆಚ್ಚ ಭರಿಸಿ ಪಾಲಿಕೆ ದುರಸ್ತಿಪಡಿಸುವ ಉತ್ಸಾಹದಲ್ಲಿ ಇಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಜಿ.ಪಂ. ವಶಕ್ಕೆ ತೆಗೆದುಕೊಳ್ಳಬೇಕು ಎಂಬುದು ಪಾಲಿಕೆಯ ನಿಲುವು.
ಈ ಬಗ್ಗೆ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಹೇಳುವುದು ಹೀಗೆ, 'ಜಿ.ಪಂ. ಸಿಇಒಗೆ ಪಾಲಿಕೆಯಿಂದ ಇಷ್ಟರಲ್ಲೇ ಪತ್ರ ಹೋಗಲಿದೆ. ತಕ್ಷಣವೇ ಪೈಪ್ಲೈನ್ನ್ನು ಜಿ.ಪಂ. ಸುಪರ್ದಿಗೆ ತೆಗೆದುಕೊಳ್ಳುವಂತೆ ಕೋರಲಾಗುವುದು. ಈಗಾಗಲೇ ಪಾಲಿಕೆಗೆ ನಿರ್ವಹಣಾ ವೆಚ್ಚ ಭರಿಸಿ ನಷ್ಟವಾಗುತ್ತಿರುವುದನ್ನು ವಿಶದಪಡಿಸಲಾಗಿದೆ'.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, 'ಈ ಬಗ್ಗೆ ಏನಿದ್ದರೂ ಜನಪ್ರತಿನಿಧಿಗಳು ನಿರ್ಣಯ ಕೈಗೊಳ್ಳಬೇಕು. ಜಿ.ಪಂ. ವಹಿಸಿಕೊಳ್ಳುವಂತೆ ಈಗಾಗಲೇ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ' ಎನ್ನುತ್ತಾರೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

