ಶಿಕ್ಷಣ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮುಂಚೂಣಿ
ಮಂಗಳೂರು: ಶಿಕ್ಷಣ ಕ್ಷೇತ್ರದ ಯಾವುದೇ ಮಗ್ಗುಲು ತೆಗೆದುಕೊಳ್ಳಿ, ಅದರ ಅನುಷ್ಠಾನದಲ್ಲಿ ದ.ಕ.ಜಿಲ್ಲೆ ಮುಂಚೂಣಿಯಲ್ಲಿದೆ.
ಮಾಧ್ಯಮಿಕ ಶಿಕ್ಷಣ ಯೋಜನೆ (ಆರ್‌ಎಂಎಸ್)ಯಡಿ ರಾಜ್ಯದ ಎರಡು ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಜಂಟಿ ಪರಿಶೀಲನಾ ಆಯೋಗದ ಮೆಚ್ಚುಗೆ ನುಡಿ ಇದು.
ದ.ಕ. ಮತ್ತು ಉಡುಪಿ ಜಿಲ್ಲೆಯ ಆಯ್ದ ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿದ ತಂಡ, ಶೈಕ್ಷಣಿಕವಾಗಿ ಇಲ್ಲಿ ಕೈಗೊಂಡ ಕ್ರಮಗಳನ್ನು ದೇಶಾದ್ಯಂತ ಜಾರಿಗೆ ತರುವ ಮಾತನ್ನಾಡಿದೆ. ಕಳೆದ ಬಾರಿ ಸರ್ವಶಿಕ್ಷಣ ಅಭಿಯಾನದಡಿ ರಾಜ್ಯಕ್ಕೆ ನಂಬರ್ ಒನ್ ಆಗಿದ್ದ ದ.ಕ.ಜಿಲ್ಲೆ ಈಗ ಮಾಧ್ಯಮಿಕ ಶಿಕ್ಷಣ ಯೋಜನೆಯಲ್ಲೂ ಅದೇ ಪಥದಲ್ಲಿ ಸಾಗುತ್ತಿದೆ. ಈ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಮಾನದಂಡದಲ್ಲಿ ಇನ್ನು ಮುಂದೆ ಕೇಂದ್ರದಿಂದ ರಾಜ್ಯದ ಮಾಧ್ಯಮಿಕ ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಂತರ ಮೊತ್ತ ಹರಿದುಬರಲಿದೆ.
ಹಿಂದೆಯೂ ದ.ಕ. ಬೆಸ್ಟ್: ಸರ್ವ ಶಿಕ್ಷಣ ಅಭಿಯಾನದಡಿ 2009-10ರಲ್ಲಿ ಕೇಂದ್ರ ತಂಡ ದ.ಕ. ಮತ್ತು ಹಾಸನ ಜಿಲ್ಲೆಗೆ ಭೇಟಿ ನೀಡಿತ್ತು. ಜಿಲ್ಲೆಯಲ್ಲಿ ಮುಲ್ಲಕಾಡು ಮತ್ತು ಸೂರಿಬೈಲು ಶಾಲೆಯನ್ನು ವೀಕ್ಷಿಸಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಬೇಕಾದ ಸೌಲಭ್ಯ, ಶಿಕ್ಷಣ ಬೋಧನೆ ಸೇರಿದಂತೆ ಹಲವು ಆಯಾಮಗಳನ್ನು ಪರಿಶೀಲಿಸಿತ್ತು.
ಕೊನೆಗೆ ದೇಶದ 20 ಅತ್ಯುತ್ತಮ ಜಿಲ್ಲೆಗಳ ಪೈಕಿ ರಾಜ್ಯದ ದ.ಕ. ಜಿಲ್ಲೆಯೂ ಒಂದು ಎಂದು ವರದಿಯಲ್ಲಿ ಷರಾ ಬರೆದಿತ್ತು. ಇದರಿಂದ 2011-12 ಸಾಲಿನಲ್ಲಿ ರಾಜ್ಯದ ಶೈಕ್ಷಣಿಕ ರಂಗಕ್ಕೆ ಕೋಟ್ಯಂತರ ಮೊತ್ತ ಕೇಂದ್ರದಿಂದ ಬಿಡುಗಡೆಯಾಗಿತ್ತು. ಅದರಲ್ಲಿ ದ.ಕ. ಜಿಲ್ಲೆಗೆ ರು. 30 ಕೋಟಿ ಸಿಕ್ಕಿತ್ತು.
ಈ ಬಾರಿಯೂ ಮುಂಚೂಣಿ: ಮಾಧ್ಯಮಿಕ ಶಿಕ್ಷಣದಲ್ಲೂ ದ.ಕ.ಜಿಲ್ಲೆ ಈ ಬಾರಿ ಮುಂಚೂಣಿಯಲ್ಲಿದೆ. ವಿ.ವಿ. ಅಯ್ಯರ್ ನೇತೃತ್ವದ ತಂಡ ಜಿಲ್ಲೆಯ ಮುಲ್ಲಕಾಡು ಮತ್ತು ನಾಲ್ಯಪದವು ಉನ್ನತೀಕರಿಸಿದ ಶಾಲೆಗಳಿಗೆ ಭೇಟಿ ನೀಡಿತ್ತು. ಅಲ್ಲಿನ ಶಿಕ್ಷಣ ಕ್ರಮ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸ್ಪಂದನ, ನಿರಂತರ ಮೌಲ್ಯಮಾಪನ ಪರಿಣಾಮವನ್ನು ಪರಿಶೀಲಿಸಿತ್ತು. ಶಿಕ್ಷಕ, ಶಿಕ್ಷಣ ಮಹಾವಿದ್ಯಾಲಯ, ಡಯೆಟ್‌ಗೆ ಭೇಟಿ ನೀಡಿ ಪಠ್ಯ ಕ್ರಮದ ಮಾಹಿತಿ ಪಡೆದುಕೊಂಡಿತ್ತು. ಇದೇ ರೀತಿ ಉಡುಪಿಯಲ್ಲೂ ಎರಡು ಶಾಲೆಗೆ ಭೇಟಿ ನೀಡಿತ್ತು. ಕೊನೆಗೆ ಜಿಲ್ಲಾ ಪಂಚಾಯ್ತಿಯಲ್ಲಿ ಅವಲೋಕನ ಸಭೆ ನಡೆಸಿತು. ಈ ಸಭೆಯಲ್ಲಿ ದ.ಕ. ಜಿಲ್ಲೆಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಎಸ್‌ಟಿಎಫ್ ದೇಶಕ್ಕೆ ಮಾದರಿ: ರಾಜ್ಯದಲ್ಲಿ ಸಬ್ಜೆಕ್ಟ್ ಟೀಚರ್ ಫಾರಮ್(ಎಸ್‌ಟಿಎಫ್)ಕಾರ್ಯಕ್ರಮ ಜಾರಿಯಲ್ಲಿದೆ. ಇದರಲ್ಲಿ ಆಸಕ್ತ ಶಿಕ್ಷಕರು ಆನ್‌ಲೈನ್‌ನಲ್ಲಿ ಗುಂಪು ಮಾಡಿಕೊಂಡು ಪಠ್ಯ ವಿಷಯದ ಸಂದೇಹ, ಸಲಹೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ನಂತರ ತರಗತಿಯಲ್ಲಿ ಬೋಧಿಸುತ್ತಾರೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಗುಣಾತ್ಮಕವಾಗಿ ನಡೆಯುತ್ತಿದ್ದು, ಇದನ್ನು ದೇಶಾದ್ಯಂತ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ತಂಡ ಸಭೆಯಲ್ಲಿ ತಿಳಿಸಿದೆ.
ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಬೇಕಾದರೆ ರಾಜ್ಯ ಮಟ್ಟದ ಟೆಂಡರ್ ಕರೆಯಬೇಕು. ಇದರಿಂದ ನಿಗದಿತ ಸಮಯದಲ್ಲಿ ಕಾಮಗಾರಿ ಮುಕ್ತಾಯಕ್ಕೆ ಸಾಧ್ಯವಾಗುವುದಿಲ್ಲ. ಸರ್ವ ಶಿಕ್ಷಣ ಅಭಿಯಾನದಂತೆ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗೆ ಕಾಮಗಾರಿ ನೇತೃತ್ವ ವಹಿಸುವಂತೆ ಸಮಿತಿ ಪದಾಧಿಕಾರಿಗಳು ತಂಡಕ್ಕೆ ಮನವಿ ಮಾಡಿದ್ದಾರೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

