ದಕ್ಷಿಣ ಕನ್ನಡ

ಕೆಟ್ಟ ವಿಷಯಗಳ ನಾಶಕ್ಕೆ ಶಿವಾನುಗ್ರಹ ಅಗತ್ಯ; ಪೇಜಾವರ ಶ್ರೀ

Published On :

ಬಂಟ್ವಾಳ:  ಕೆಟ್ಟ ಕಾಮನೆಗಳು, ಕೆಟ್ಟ ಆಲೋಚನೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಭಯೋತ್ಪಾದನೆ, ಮತಾಂತರ, ಅತ್ಯಾಚಾರದಂತಹ ಕಾರ್ಕೋಟಕ ವಿಷದ ನಾಶಕ್ಕೆ ಮಹಾರುದ್ರ ಶಿವ ಮೂರನೇ ಕಣ್ಣು ತೆರೆದು ಅನುಗ್ರಹಿಸಬೇಕಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕಲ್ಲಡ್ಕ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನವೀಕರಣ ಹಾಗೂ ಜೀರ್ಣೋದ್ಧಾರ ಪ್ರಯುಕ್ತ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅವರು, ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ನೂತನ ಸುತ್ತು ಪೌಳಿ, ಗಣಪತಿ ಗುಡಿ, ಶಾಸ್ತಾರ ಗುಡಿ, ಕುಮಾರಿ ದೇವಿಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವದಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಪ್ರಭಾಕರ ಭಟ್ ಮಾತನಾಡಿ, ಧರ್ಮದ ಕಾರ್ಯಕ್ಕೆ ರಾಜಕೀಯ ತರಬಾರದು. ಆದರೆ ರಾಜಕೀಯದಲ್ಲಿ ಧರ್ಮ ಬೇಕು ಎಂದರು.
ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ, ಸಂಸದ ನಳಿನ್ ಕುಮಾರ್ ಕಟೀಲು, ಕರಾವಳಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ಶುಭ ಹಾರೈಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಎಸ್.ಭಟ್ ಸ್ವಾಗತಿಸಿದರು. ಸದಸ್ಯ ಚಂದ್ರಶೇಖರ ಟೈಲರ್ ವಂದಿಸಿದರು. ರಾಜೇಶ್ ಕೊಳಕೀರು ಕಾರ್ಯಕ್ರಮ ನಿರ್ವಹಿಸಿದರು.
ಶಂಕುಸ್ಥಾಪನೆಗೆ ಮುನ್ನ ನವರತ್ನಪೂರಿತ ಶಿಲಾನ್ಯಾಸದ ಶಿಲೆಯನ್ನು ಶ್ರೀ ಉಮಾಶಿವ ಕ್ಷೇತ್ರದಿಂದ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ವೈಭವಪೂರಿತ ಮೆರವಣಿಗೆಯೊಂದಿಗೆ ತರಲಾಯಿತು.
ಬಿಗಿ ಬಂದೋಬಸ್ತು: ಶಿಲಾನ್ಯಾಸ ಕಾರ್ಯಕ್ರಮದ ಪೂರ್ವದಲ್ಲಿ ಜೀರ್ಣೋದ್ಧಾರ ಸಮಿತಿ ಗೊಂದಲದಿಂದ ಉಂಟಾಗಿದ್ದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಲ್ಲಡ್ಕ, ನೆಟ್ಲ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.