ವೇತನ ಪರಿಷ್ಕರಣೆಗೆ ಆಗ್ರಹಿಸಿ ಬೀದಿಗಿಳಿದ ಮಣಿಪಾಲ ವಿವಿ ಭೋದಕೇತರ ಸಿಬ್ಬಂದಿ
ಮಣಿಪಾಲ: ರಾಜ್ಯ ಸರ್ಕಾರದ ವೇತನ ಶ್ರೇಣಿಗನುಗುಣವಾಗಿ ತಮ್ಮ ವೇತನವನ್ನು ಪರಿಷ್ಕರಿಸಬೇಕು ಎಂದು ಮಣಿಪಾಲ ವಿವಿಯ ವಿದ್ಯಾಸಂಸ್ಥೆಗಳ ಸಾವಿರಕ್ಕೂ ಅಧಿಕ ಭೋದಕೇತರ ಸಿಬ್ಬಂದಿ ಜ.16ರಿಂದ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ಸಂಜೆ ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ವಿವಿಯ ಮುಂಭಾಗದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಮಣಿಪಾಲ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡು 66 ವರ್ಷಗಳೇ ಕಳೆದಿವೆ, 1981 ಮತ್ತು 1996ರಲ್ಲಿ ಈ ವಿದ್ಯಾಸಂಸ್ಥೆಗಳ ಉದ್ಯೋಗಿಗಳಿಗೆಲ್ಲರಿಗೂ ರಾಜ್ಯ ಸರ್ಕಾರ ವೇತನ ಶ್ರೇಣಿಯನ್ವಯ ವೇತನವನ್ನು ಪರಷ್ಕರಿಸಲಾಗಿತ್ತು,
ಆದರೆ 2005ರಲ್ಲಿ ಮಣಿಪಾಲ ವಿವಿ ಸ್ಥಾಪನೆಯಾಗಿ ಈ ವಿದ್ಯಾಸಂಸ್ಥೆಗಳು ಅದರಡಿ ಬಂದಾಗಿನಿಂದ ಯಾವುದೇ ರೀತಿಯ ವೇತನ ಪರಿಷ್ಕರಣೆಯಾಗಿಲ್ಲ ಎಂದು ಮಜ್ದೂರ್ ಸಂಘದ ನಾಯಕ ಪುರುಷೋತ್ತಮ್ ಆರೋಪಿಸಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರದ ವೇತನ ಶ್ರೇಣಿಯಲ್ಲಿ 9,600 ಮೂಲ ವೇತನವಾಗಿದ್ದರೆ, ಮಣಿಪಾಲ ವಿವಿಯಲ್ಲಿ ಪ್ರಸ್ತುತ ಮೂಲವೇತನ ಕೇವಲ 4000 ಇದೆ. ಅಂದರೆ ಪ್ರತಿ ತಿಂಗಳ ಈ ವಿದ್ಯಾಸಂಸ್ಥೆಗಳ ಭೋದಕೇತರ ಸಿಬ್ಬಂದಿಗೆ ತಿಂಗಳಿಗೆ ಸುಮಾರು 4600 ನಷ್ಟವಾಗುತ್ತಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಈ ನಷ್ಟವನ್ನು ಸಹಿಸಲಸಾಧ್ಯವಾಗಿದೆ ಎಂದವರು ತಿಳಿಸಿದ್ದಾರೆ.
ಅಲ್ಲದೆ ಈ ವಿದ್ಯಾಸಂಸ್ಥೆಗಳಲ್ಲಿ 30- 35 ವರ್ಷ ಸೇವೆ ಸಲ್ಲಿಸಿರುವವರೂ ಇದ್ದಾರೆ, ಅವರಿನ್ನೂ ಕೇವಲ 10- 15 ಸಾವಿರ ವೇತನ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಉದ್ಯೋಗದಲ್ಲಿ ಇದೇ ಅವಧಿಗೆ 25- 35 ಸಾವಿರ ವೇತನ ದೊರೆಯುತ್ತದೆ. ಆದ್ದರಿಂದ ಮಣಿಪಾಲ ವಿವಿಯ ಉದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ತಕ್ಷಣ ಸರಿಪಡಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ವಿವಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಣಿಪಾಲ ವಿವಿಯ ವಿದ್ಯಾಸಂಸ್ಥೆಗಳಲ್ಲಿ ಭೋದಕರು ಮತ್ತು ಭೋದಕೇತರರು ಸೇರಿ ಸುಮಾರು 5000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಭೋದಕ ಸಿಬ್ಬಂದಿ ಕೂಡ ಕಳೆದ ಕೆಲವು ದಿನಗಳಿಂದ ಕಪ್ಪು ಪಟ್ಟಿ ಧರಿಸಿ ಭೋದಕೇತರ ಸಿಬ್ಬಂದಿಯ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

