ದಕ್ಷಿಣ ಕನ್ನಡ

ಜಮೀನು ಅತಿಕ್ರಮಣ ತೆರವು ಆಗ್ರಹಿಸಿ 27ರಂದು ಪ್ರತಿಭಟನೆ

Published On :

ಬಂಟ್ವಾಳ: ತಾಲೂಕಿನಲ್ಲಿ ಪ.ಜಾತಿ, ಪಂಗಡ, ಮಾಜಿ ಸೈನಿಕರು ಮತ್ತು ಇತರ ವರ್ಗದವರಿಗೆ ಮೀಸಲಿಟ್ಟಿರುವ ಜಮೀನು ಅತಿಕ್ರಮಣ ಮಾಡಿದ್ದನ್ನು ತೆರವುಗೊಳಿಸದೆ ಮೀನ- ಮೇಷ ಎಣಿಸುತ್ತಿರುವ ಬಂಟ್ವಾಳ ಕಂದಾಯ ಇಲಾಖೆ ವಿರುದ್ಧ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.27ರಂದು ಬೆಳಗ್ಗೆ ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರಿಗೆ ಜಿಲ್ಲೆಯಲ್ಲಿ ಜಮೀನು ಒದಗಿಸುವಂತೆ 2011 ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಬೇಡಿಕೆ ಸಲ್ಲಿಸಿದ್ದೆವು. ಈ ಬಗ್ಗೆ ಸ್ಪಂದಿಸಿದ ಬಂಟ್ವಾಳ ತಹಸೀಲ್ದಾರ್, ತಾಲೂಕಿನಲ್ಲಿ ಒಟ್ಟು 123.74 ಎಕ್ರೆ ಜಮೀನನ್ನು 2012 ಜೂನ್‌ನಲ್ಲಿ ಪರಿಶಿಷ್ಟ ಜಾತಿ- ಪಂಗಡಕ್ಕೆ 10 ಎಕ್ರೆ, ಮಾಜಿ ಸೈನಿಕರಿಗೆ 1.26 ಎಕ್ರೆ, ಹಿಂದುಳಿದ ವರ್ಗದವರಿಗೆ 9 ಎಕ್ರೆ, ರಾಜಕೀಯ ಸಂತ್ರಸ್ತರಿಗೆ ಮತ್ತು ಇತರರಿಗೆ ಒಟ್ಟು 144 ಎಕ್ರೆ ಜಮೀನು ಲಭ್ಯತಾ ಪಟ್ಟಿಗೆ ಸೇರಿಸಿದ್ದರು. ಜಮೀನು ಮಂಜೂರುಗೊಳಿಸಲು ಹಲವಾರು ಜಮೀನು ವಂಚಿತರು ಅರ್ಜಿ ಸಲ್ಲಿಸಿದ್ದು, ಅರ್ಜಿಯಂತೆ ಕೆಲವು ಗ್ರಾಮಗಳಲ್ಲಿ ಅಳತೆ ಮಾಡುವ ಸಂದರ್ಭ ಕೆಲವು ಜಮೀನು ಅತಿಕ್ರಮಣ ಆಗಿರುವುದು ಕಂಡು ಬಂದಿದೆ. ಕಡೇಶ್ವಾಲ್ಯ, ಬರಿಮಾರು, ವಿಟ್ಲ ಪಡ್ನೂರು, ಸಾಲೆತ್ತೂರು, ವೀರಕಂಭ ಕಡೆಗಳಲ್ಲಿ ಅತಿಕ್ರಮಣವಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಸಿದ ಒಬ್ಬರಿಗೂ ಇದುವರೆಗೂ ಕಾದಿರಿಸಿದ ಜಮೀನು ದೊರೆತಿಲ್ಲ. ಇದು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಈ ಸಂದರ್ಭ ಯಾವುದೇ ಅನಾಹುತ ಸಂಭವಿಸಿದರೆ ಜಿಲ್ಲಾಡಳಿತ, ಕಂದಾಯ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಗೌರವ ಸಲಹೆಗಾರ ಸೋಮಪ್ಪ ಸುರುಳಿಮೂಲೆ, ಮೋಹನ್‌ದಾಸ, ಗೋಪಾಲ ನೇರಳಕಟ್ಟೆ, ಶೇಖರ ನಗ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.