ದಕ್ಷಿಣ ಕನ್ನಡ

ಮಹಿಳೆ ಸಾವು-ಕೊಲೆ ಶಂಕೆ: ಬಂಧನಕ್ಕೊಳಗಾದ ಆರೋಪಿ ಪತಿ ಪರಾರಿ

Published On :

ಬೆಳ್ತಂಗಡಿ: ವಾರದ ಹಿಂದೆ ಅಸಹಜವಾಗಿ ಸಾವಿಗೀಡಾಗಿದ್ದ ಧರ್ಮಸ್ಥಳದ ಮಹಿಳೆಯೊಬ್ಬರ ಸಾವು ಕೊಲೆಯೆಂದು ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಧಿತ ಆರೋಪಿಯಾಗಿರುವ ಆಕೆಯ ಪತಿ ಸತೀಶ್ ಎಂಬಾತ ಪೊಲೀಸರ ಕೈಯಿಂದ ಪರಾರಿಯಾಗಿರುವ ಘಟನೆ ಸೋಮವಾರ ಬೆಳ್ತಂಗಡಿಯಲ್ಲಿ ನಡೆದಿದೆ.
ಧರ್ಮಸ್ಥಳದ ಅಡಿಲು ಎಂಬಲ್ಲಿನ ಸತೀಶ ಎಂಬವರ ಪತ್ನಿ ಮಂಜುಶ್ರೀ (19) ಜ. 21 ರಂದು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜ. 16 ರಂದು ಪತಿಯ ಮನೆಯಲ್ಲಿ ಬೆಂಕಿ ತಗುಲಿ ಅವರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರು ಮೃತಪಟ್ಟಿದ್ದರು. ಮಂಜುಶ್ರೀಗೆ ಸುಟ್ಟ ಗಾಯಗಳಾಗಿರುವ ಬಗ್ಗೆ ತಡವಾಗಿ ತಿಳಿದ ಆಕೆಯ ಹೆತ್ತವರು, ಪರಸ್ಪರ ಪ್ರೀತಿಸುತ್ತಿದ್ದ ಇವರಿಗೆ 3 ತಿಂಗಳ ಹಿಂದೆಯಷ್ಟೇ ಮದುವೆ ಮಾಡಿಸಿದ್ದರು. ಅಸಹಜವಾಗಿ ಮೃತಪಟ್ಟ ಬಗ್ಗೆ ಮಂಜುಶ್ರೀಯ ಗಂಡನ ಮನೆಯವರ ಮೇಲೆ ಸಂದೇಹ ವ್ಯಕ್ತಪಡಿಸಿ, ಇದು ಆಕಸ್ಮಿಕ ಸಾವಲ್ಲ, ಸೂಕ್ತ ತನಿಖೆ ಮಾಡಿ ಎಂದು ಮಂಜುಶ್ರೀಯ ಸೋದರ ಮಾವ ವಿಶ್ವನಾಥ ಎಂಬುವರು ಪೊಲೀಸರಿಗೆ ಮನವಿ ಮಾಡಿದ್ದರು.
ಆದರೆ, ಬೆಳ್ತಂಗಡಿ ಪೊಲೀಸರು ಸ್ಪಂದಿಸದ ಕಾರಣ ವಿಶ್ವನಾಥ ಅವರು ಎಸ್ಪಿಯವರಿಗೆ ದೂರು ನೀಡಿದರು. ತಕ್ಷಣ ಈ ಪ್ರಕರಣದ ಬಗ್ಗೆ ಗಮನಹರಿಸಿದ ಅವರು ಅಡಿಷನಲ್ ಎಸ್‌ಪಿಗೆ ತನಿಖೆಯ ಜವಾಬ್ದಾರಿ ವಹಿಸಿದರು. ಅವರು ಮೃತರ ಮನೆಗೆ ಭೇಟಿ ನೀಡಿ ಸಮಗ್ರ ತನಿಖೆ ಮಾಡಿದಾಗ ಮೃತಳ ಗಂಡ ಸತೀಶನ ಮೇಲೆ ಅನುಮಾನ ಬಂದು ಆತನನ್ನು ಬಂಧಿಸಿದ್ದರು. ಆರೋಪಿ ಪತ್ನಿಗೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಮಧ್ಯೆ ಆರೋಪಿ ಸತೀಶ್‌ನನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಸತೀಶ್ ಯಶಸ್ವಿಯಾಗಿದ್ದಾನೆ. ಇದೀಗ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.