ದಕ್ಷಿಣ ಕನ್ನಡ

ಸ್ವೇಚ್ಛಾಚಾರಿಗಳನ್ನು ಸಮಾಜವೇ ಬಹಿಷ್ಕರಿಸಬೇಕು: ಪ್ರೊ. ರಾಮದಾಸ್

Published On :

ಕಾಂತಾವರ: ನಾವು ಸರ್ವ ಸ್ವತಂತ್ರರು, ನಮ್ಮಿಷ್ಟದಂತೆ ಸ್ವೇಚ್ಛಾಚಾರಿಗಳಾಗಿ ಬದುಕುತ್ತೇವೆ ಅನ್ನುವವರನ್ನು ಸಮಾಜವೇ ಬಹಿಷ್ಕರಿಸಬಹುದು. ಇಂತಹ ಸರ್ವಾಧಿಕಾರಿ ಧೋರಣೆಯಿಂದ ಇಡೀ ಜಗತ್ತಿನ ಜನರ ಹಿತಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವ ದೇಶವನ್ನು ವಿಶ್ವಸಂಸ್ಥೆಯೇ ಬಗ್ಗುಬಡಿಯಬಹುದು ಎಂದು ಪ್ರೊ. ರಾಮದಾಸ್ ಉಡುಪಿ ಅಭಿಪ್ರಾಯಪಟ್ಟರು.
ಅವರು ಕಾಂತಾವರ ಅಲ್ಲಮಪ್ರಭು ಪೀಠದ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ ಭಾನುವಾರ 'ಜೈನ ಧರ್ಮದ ಅನೇಕಾಂತವಾದದ ಪ್ರಸ್ತುತತೆ' ಕುರಿತು ಅವರು ಮಾತನಾಡಿದರು.
ವ್ಯಕ್ತಿ ಸ್ವತಂತ್ರ್ಯ ಸ್ವೇಚ್ಛೆಯಾಗಿ ಅದು ಇತರರ ಸ್ವಾತಂತ್ರ್ಯಕ್ಕೆ ಅಪಾಯಕಾರಿಯಾಗಿ ಸ್ವಾರ್ಥ ಮತ್ತು ಕ್ರೌರ್ಯಗಳೇ ಇಂದು ವಿಜ್ರಂಭಿಸುತ್ತೇವೆ. ಇಂತಹ ಸನ್ನಿವೇಶದಲ್ಲಿ ಜೈನ ಧರ್ಮ ಪ್ರತಿಪಾದಿಸುವ ಅನೇಕಾಂತವಾದವೇ ಅರ್ಥಪೂರ್ಣವಾದ ಪರಿಹಾರ ಒದಗಿಸಬಲ್ಲದು ಎಂದರು.
ವ್ಯಕ್ತಿ ತಾನು ಹುಟ್ಟಿ ಬೆಳೆಯುತ್ತ ಬಂದ ಗುಂಪಿನ ರೀತಿ ರಿವಾಜು, ಶ್ರದ್ಧೆ ನಂಬಿಕೆಗಳನ್ನು ತನಗರಿವಿಲ್ಲದೇ ತನ್ನದಾಗಿಸಿಕೊಳ್ಳುತ್ತಾನೆ. ಆ ಸಂಸ್ಕಾರ ಆತನ ಸಂಸ್ಕೃತಿಯೇ ಆಗಿ ಆ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಧರ್ಮಾಂಧನಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಆತ ಅಣಿಯಾಗುತ್ತಾನೆ. ಇತಿಹಾಸದುದ್ದಕ್ಕೂ ಹೆಣ್ಣು,  ಭೂಮಿಗಿಂತ ಮಿಗಿಲಾಗಿ ಧರ್ಮಾಂಧತೆಗಾಗಿಯೇ ಹೆಚ್ಚಿನ ಯುದ್ಧಗಳು ನಡೆದಿವೆ. ಇತ್ತೀಚಿನ ದಿನಗಳಲ್ಲಿ ಗುಪ್ತಗಾಮಿನಿಯಾಗಿರುವ ಈ ಧರ್ಮಾಂಧತೆ ಇಂದು ಬಹುಮಟ್ಟಿಗೆ ರಾಜಕೀಯ ಪಕ್ಷಗಳ ಬದ್ಧತೆಯೂ ಆಗಿದ್ದು, ಇದು ಎಲ್ಲಾ ಕ್ಷೇತ್ರಗಳನ್ನು ಆವರಿಸಿದೆ. ಇದರಿಂದಾಗಿ ಮನುಷ್ಯ ಇಂದು ತನ್ನ ಹೃದಯ ವೈಶಾಲ್ಯವನ್ನೇ ಕಳೆದುಕೊಂಡಿದ್ದಾನೆ. ಇಂತಹ ಕಾಲಘಟ್ಟದಲ್ಲಿ ಇವುಗಳನ್ನು ಮೀರಿ ಸಾಮರಸ್ಯದಿ ಬಾಳಲು ಯಾವ ಧರ್ಮದರ್ಶಿಗಳು, ಗುರೂಜಿಗಳು, ಸಂತ ಸನ್ಯಾಸಿಗಳೂ ನಮಗೆ ಮಾಡಲಾಗದ ಮಾರ್ಗದರ್ಶನವನ್ನು ಜೈನ ಧರ್ಮದ ಅನೇಕಾಂತವಾದ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ರಾಮದಾಸ್ ಅವರನ್ನು ಗೌರವಿಸಲಾಯಿತು. ಡಾ.ನಾ. ಮೊಗಸಾಲೆ, ಚಂದ್ರಕುಮಾರ್ ಪಡಿವಾಳ್ ಇದ್ದರು. ಯಶೋಧರ್ ಪಿ. ಕರ್ಕೇರಾ ಸ್ವಾಗತಿಸಿ, ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.