ರಕ್ತದೊತ್ತಡ ಏರಿ ಸಭೆಯಲ್ಲಿ ಕುಸಿದ ಶಿಕ್ಷಣಾಧಿಕಾರಿ ಮಂಗಳೂರು ಆಸ್ಪತ್ರೆಗೆ
ಬೆಳ್ತಂಗಡಿ: ಇಲ್ಲಿ ಗುರುವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ರಕ್ತದೊತ್ತಡ ಸಮಸ್ಯೆಯಿಂದ ಕುಸಿದು ಬಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ. ಕುಚಿನಾಡ್ ಅವರನ್ನು ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
'ಸದಸ್ಯರೋರ್ವರು ಪದೇ ಪದೇ ತನ್ನನ್ನೇ ಗುರಿಯಾಗಿಸಿ ಪ್ರಶ್ನೆ ಕೇಳುತ್ತಿದ್ದಾರೆ' ಎಂದು ಅಸಮಾಧಾನ ಸೂಚಿಸಿ ತನಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ, ಅಳುತ್ತಾ ರಕ್ತದೊತ್ತಡಕ್ಕಾಗಿ ಒಳಗಾಗಿ ಗುರುವಾರ ಸಭೆಯಲ್ಲೇ ಬಿದ್ದಿದ್ದರು. ನಂತರ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದು ದಿನದ ಚಿಕಿತ್ಸೆಯ ನಂತರವೂ ಅವರ ರಕ್ತದೊತ್ತಡ ಸಮಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ವೈದ್ಯರು ಶಿಫಾರಸ್ಸು ಮಾಡಿದ್ದರು.
ಖಂಡನೆ, ಭೇಟಿ: ಆಸ್ಪತ್ರೆಗೆ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಜಿ.ಪಂ. ಸದಸ್ಯ ಶೈಲೇಶ ಕುಮಾರ್, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮೋಸೆಸ್ ಜಯಶೇಖರ್, ನ.ಪಂ. ಸದಸ್ಯ ಮುಗುಳಿ ನಾರಾಯಣ ರಾವ್, ಸರ್ಕಾರಿ ನೌಕರರ ಸಂಘದ ಸಂಚಾಲಕ ಸುಭಾಶ್ಚಂದ್ರ, ತಾಲೂಕು ಅಧ್ಯಕ್ಷ ಜಯಕೀರ್ತಿ ಜೈನ್, ಕಾರ್ಯದರ್ಶಿ ಪ್ರಕಾಶ್, ಕೋಶಾಧಿಕಾರಿ ಸಿದ್ದೇಶ್, ರಾಜ್ಯ ಪರಿಷತ್ ಸದಸ್ಯ ಹಾಗೂ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಧರಣೇಂದ್ರ ಕುಮಾರ್ ಜೈನ್ ಭೇಟಿ ನೀಡಿದರು.
ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ ಘಟನೆಯನ್ನು ಖಂಡಿಸಿದೆ.
ಘಟನೆ ಕುರಿತು ಸದಸ್ಯ ಮಂಜುನಾಥ್ ಸಾಲಿಯಾನ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸರ್ಕಾರಿ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ ಎಂದು ಜಯಕೀರ್ತಿ ಜೈನ್ ತಿಳಿಸಿದ್ದಾರೆ.
ಅವ್ಯವಹಾರ ತನಿಖೆ: ಸರ್ವ ಶಿಕ್ಷಾ ಅಭಿಯಾನದ ವಸತಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಅಧ್ಯಕ್ಷ ಕೊರಗಪ್ಪ ನಾಯ್ಕ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ , ಉಪಾಧ್ಯಕ್ಷ ರಿತೇಶ್ ಕುಮಾರ್ ಮೊದಲಾದವರು ಗುರುವಾರ ಬೆಳ್ತಂಗಡಿಗೆ ಆಗಮಿಸಿ ತನಿಖೆ ನಡೆಸಿದರು.
ವಸತಿ ಶಾಲೆಯ ಮಕ್ಕಳ ಊಟಕ್ಕೆ ಪ್ರತ್ಯೇಕ ಅಕ್ಕಿ ಸರಬರಾಜಾದರೂ ಸುಮಾರು 21 ಶಾಲೆಗಳಿಂದ ಬಿಸಿಯೂಟ ಅಕ್ಕಿ ತರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ಆರೋಪಿಸಿದ್ದರು. ತನಿಖೆಯಲ್ಲಿ ಅಂತಹ ಲೋಪ ಕಂಡು ಬಂದಿಲ್ಲ ಎನ್ನಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ದೂರು
ಬೆಳ್ತಂಗಡಿ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಮಂಜುನಾಥ ಸಾಲ್ಯಾನ್ ಎಂಬವರು ಉದ್ದೇಶ ಪೂರ್ವಕವಾಗಿ ತನ್ನನ್ನು ಅಪಮಾನಿಸಿ, ನನಗೆ ಮಾನಸಿಕ ಹಿಂಸೆ ನೀಡಿರುತ್ತಾರೆ. ಇವರು ಈ ಹಿಂದೆಯೂ ಮೌಖಿಕವಾಗಿಯೂ ಮತ್ತು ದೂರವಾಣಿ ಮೂಲಕವೂ ನನ್ನನ್ನು ನಿಂದಿಸಿರುತ್ತಾರೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ. ಬೆಳ್ತಂಗಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಂಗಲಾ ಅವರು ರಕ್ತದೊತ್ತಡ ಹೆಚ್ಚಾಗಿ ಅಸ್ವಸ್ಥಗೊಂಡು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರ್ಕಾರಿ ನೌಕರರ ಸಂಘದಿಂದ ದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ವತಿಯಿಂದ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿ ಮಂಜುನಾಥ ಸಾಲ್ಯಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಂಘದ ವತಿಯಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೇಂದ್ರ ಸಂಘ ಅಧ್ಯಕ್ಷರಿಗೆ, ಜಿಲ್ಲಾ ಸಂಘದ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

