ಮಸೀದಿಗಳ ಆಡಳಿತ ಸಮಿತಿಯಲ್ಲಿ ಭಿನ್ನಾಭಿಪ್ರಾಯ, ಉದ್ವಿಗ್ನ
ಬಂಟ್ವಾಳ: ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೊಡುವ ಪರ ಹಾಗೂ ವಿರೋಧದ ವಿಚಾರದಲ್ಲಿ ಎರಡು ಮಸೀದಿಗಳ ಆಡಳಿತ ಸಮಿತಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಉದ್ವಿಗ್ನ ಸ್ಥಿತಿಗೆ ಕಾರಣವಾದ ಘಟನೆ ಶುಕ್ರವಾರ ಪಾಣೆಮಂಗಳೂರು ಸಮೀಪದ ನೆಹರೂನಗರದಲ್ಲಿ ನಡೆದಿದೆ.
ಇಲ್ಲಿನ ನೆಹರೂನಗರದ ಮಸೀದಿ ಹಾಗೂ ಅಕ್ಕರಂಗಡಿ ಕೇಂದ್ರ ಜುಮ್ಮಾ ಮಸೀದಿಯವರ ಭಿನ್ನಾಭಿಪ್ರಾಯದಿಂದ ಈ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪಾಣೆಮಂಗಳೂರಿನ ಅಕ್ಕರಂಗಡಿ ಮಸೀದಿಯವರು ನೆಹರೂ ನಗರದ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಲಿಖಿತ ಅನುಮತಿ ನೀಡಿಲ್ಲ, ಜಮಾತೆಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಸಲು ಅನುಮತಿ ನೀಡುವಂತೆ 3 ವಾರಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈವರೆಗೆ ಲಿಖಿತ ಅನುಮತಿ ದೊರಕದ ಕಾರಣ ಪ್ರಾರ್ಥನೆಗೆ ಅಡಚಣೆಯಾಗಿದೆ. ಅನುಮತಿ ನೀಡದ ಹೊರತು ನೆಹರೂ ನಗರದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇಲ್ಲವಾಗಿದೆ.
ಸುಮಾರು 35 ವರ್ಷಗಳಷ್ಟು ಹಳೆಯದಾದ ನೆಹರೂ ನಗರ ಮಸೀದಿಯನ್ನು ನವೀಕರಣಗೊಳಿಸಲಾಗಿದ್ದು, ಪ್ರಾರ್ಥನೆ ಸಲ್ಲಿಸಲು ಲಿಖಿತ ಅನುಮತಿ ದೊರೆಯುವ ಭರವಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಸೀದಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅಕ್ಕರಂಗಡಿ ಮಸೀದಿಯಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ನವೀಕೃತ ಮಸೀದಿಯವರು ಪ್ರಾರ್ಥನೆ ನಡೆಸಿಯೇ ಸಿದ್ಧ ಎಂದು ಮಸೀದಿ ಮುಂದೆ ಜಮಾಯಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಅಲ್ಲದೆ ತಮಗೆ ಭದ್ರತೆ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು. ಈ ನಡುವೆ ಪ್ರಾರ್ಥನೆ ನಡೆಸಲು ನವೀಕೃತ ಮಸೀದಿಗೆ ಅನುಮತಿ ನೀಡದಂತೆ ಅಕ್ಕರಂಗಡಿ ಮಸೀದಿಯವರು ನಗರ ಠಾಣೆಗೆ ದೂರು ನೀಡಿದ್ದರು. ಈ ವಿವಾದ ಹಾಗೂ ಲಿಖಿತ ಅನುಮತಿ ದೊರಕದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭ ರದ್ದಾಯಿತು.
ನೂತನ ಮಸೀದಿಯಲ್ಲಿ ಪ್ರಾರ್ಥನೆಗೆ ಪೊಲೀಸರೂ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಥಳೀಯವಾದ ಖಾಸಗಿ ಜಮೀನಿನಲ್ಲಿ ನೂರಕ್ಕೂ ಅಧಿಕ ಮುಸಲ್ಮಾನರು ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

