ದಕ್ಷಿಣ ಕನ್ನಡ

ಕಾಂಞಂಗಾಡ್-ಕಾಣಿಯೂರು ರೈಲು ಸರ್ವೇ ಘೋಷಣೆ: ನಿರೀಕ್ಷೆ ಹುಸಿ ಮಾಡದ ಸದಾನಂದ ಗೌಡ

Published On :

ಸುಬ್ರಹ್ಮಣ್ಯ: ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿರುವ ಸುಳ್ಯದ ಮಣ್ಣಿನ ಮಗ, ಸಚಿವ ಡಿ.ವಿ ಸದಾನಂದ ಗೌಡ ತವರೂರು ಸುಳ್ಯ ಕ್ಷೇತ್ರಕ್ಕೆ ಒಳ್ಳೆಯ ಸಿಹಿ ನೀಡಿದ್ದಾರೆ.
ಎಡಮಂಗಲದಲ್ಲಿ ರೈಲು ನಿಲುಗಡೆ ಕೊಡುಗೆ ನೀಡಿದ ಬಳಿಕ ಇದೀಗ ಈ ಭಾಗದ ಜನರ ನಿರೀಕ್ಷೆಯಂತೆ ಕಾಂಞಂಗಾಡ್ ಪಾನತ್ತೂರು-ಕಾಣಿಯೂರು ರೈಲು ಮಾರ್ಗ ನಿರ್ಮಾಣದ ಸರ್ವೇ ಭಾಗ್ಯ ಒಲಿದಿದೆ.
ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ 18 ರೈಲು ಮಾರ್ಗ ಸರ್ವೇ ಪೈಕಿ ಕಾಂಞಂಗಾಡ್-ಕಾಣಿಯೂರು ರೈಲು ಮಾರ್ಗ ಕೂಡ ಒಂದಾಗಿದೆ. ಇದರಿಂದ ಕೇರಳ, ಕರ್ನಾಟಕ ಉಭಯ ರಾಜ್ಯಗಳ ಜನತೆ ಸಂತಸಗೊಂಡಿದೆ.
ಹಳೆ ಬೇಡಿಕೆಗೆ ಮರುಜೀವ: ಸುಳ್ಯ ನಗರ ಮೂಲಕ ಕೇರಳ ಮತ್ತು ಕರ್ನಾಟಕಗಳಿಗೆ ರೈಲು ಸಂಪರ್ಕ ಕಲ್ಪಿಸುವ ಕಾಂಞಂಗಾಡ್-ಕಾಣಿಯೂರು ರೈಲು ಮಾರ್ಗ ಬೇಡಿಕೆ ಉಭಯ ರಾಜ್ಯಗಳ ಬಹು ಕಾಲದ ಬೇಡಿಕೆ.
ಐದು ವರ್ಷಗಳ ಹಿಂದೆ ಈ ಬೇಡಿಕೆ ಹೆಚ್ಚು ಮರು ಜೀವ ಪಡೆದುಕೊಂಡಿದೆ.
ಉಭಯ ರಾಜ್ಯಗಳಿಗೆ ಅನುಕೂಲ: ಕೇರಳದದ ಕಾಸರಗೋಡು ಜಿಲ್ಲೆಯ ಅರ್ಧಭಾಗ, ಹೊಸನಗರ, ಕಾಂಞಂಗಾಡ್ ತಾಲೂಕಿನ ಜನತೆಗೆ ಮತ್ತು ದ.ಕ ಜಿಲ್ಲೆಯ ಸುಳ್ಯ ಇನ್ನಿತರ ಭಾಗದ ಜನತೆಗೆ ಈ ರೈಲು ಸಂಪರ್ಕದಿಂದ ಹೆಚ್ಚು ಪ್ರಯೋಜನವಾಗಲಿದೆ.
ಕರ್ನಾಟಕದ ಮಡಿಕೇರಿ, ಮೈಸೂರು, ಕ್ಷೇತ್ರ ಸ್ಥಳ ಸುಬ್ರಹ್ಮಣ್ಯ ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆಯಿಂದ ಹೆಚ್ಚು ಅನುಕೂಲವಿದೆ.
ನೆಟ್ಟಣ ನಿಲ್ದಾಣ ಪ್ರಸ್ತಾಪವಿಲ್ಲ: ಸುಬ್ರಹ್ಮಣ್ಯಕ್ಕೆ ವಿವಿಧ ಕಡೆಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೆಟ್ಟಣ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಹೊಂದಲಾಗಿದ್ದರೂ ಈ ನಿರೀಕ್ಷೆ ಹುಸಿಯಾಗಿದೆ.
ಕಾಂಞಂಗಾಡ್-ಎಡಮಂಗಲ: ಕಾಂಞಂಗಾಡ್-ಪಾಣತ್ತೂರು ವರೆಗೆ ಈಗಾಗಲೇ ಸರ್ವೇ ಪೂರ್ಣಗೊಂಡಿದೆ. ಇನ್ನೂ 35 ಕಿ.ಮೀ. ಸರ್ವೇ ಆಗಬೇಕಿದೆ. ಬಾಕಿ ಉಳಿದ ಸರ್ವೇ ಸೇರಿದಂತೆ ಇತರ ಬಹು ಕೆಲಸ ಪೂರ್ಣಗೊಂಡು ಕಾಂಞಂಗಾಡ್-ಕಾಣಿಯೂರು ಮಾರ್ಗದಲ್ಲಿ ರೈಲು ಓಡಾಟ ಆರಂಭಕ್ಕೆ ಇನ್ನಷ್ಟು ಸಮಯ ಬೇಕು.
ಈ ನಡುವೆ, ಕಾಂಞಂಗಾಡ್-ಕಾಣಿಯೂರು ಮಾರ್ಗ ಬದಲಿಸಿ ಕಾಂಞಂಗಾಡ್-ಎಡಮಂಗಿಲ ರೈಲು ಮಾರ್ಗವಾಗಿ ಪರಿವರ್ತಿಸುವಂತೆ ಬೇಡಿಕೆ ಕೂಡ ಇದೆ.
ಈ ಮಾರ್ಗ ಹತ್ತಿರ ಮಾರ್ಗವಾಗಿದ್ದೂ ಅತಿ ಕಡಿಮೆ ಸೇತುವೆಗಳ ನಿರ್ಮಾಣ, ಕಡಿಮೆ ಕಾಡು ನಾಶ ಮತ್ತು ಆರ್ಥಿಕ ವೆಚ್ಚ ಕೂಡ ಕಡಿಮೆಯಾಗುವ ಬಗ್ಗೆ ಕಾರಣ ನೀಡಲಾಗುತ್ತಿದೆ. ಈ ಬಗ್ಗೆ ಸುಳ್ಯ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ನೂತನ ರೈಲು ಮಾರ್ಗ ನಕಾಶೆ ತಯಾರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.