ಎಲ್ಲ ಮಾಹಿತಿ ಕುಳಿತಲ್ಲೇ ಪಡೆಯಲು ನಾನು ದೇವರಲ್ಲ...!
ಕಾರ್ಕಳ: ಪುರಸಭೆ ವ್ಯಾಪ್ತಿಯ ಎಲ್ಲ ಮಾಹಿತಿಯನ್ನು ಕುಳಿತಲ್ಲಿಯೇ ತಿಳಿದುಕೊಳ್ಳಲು ನಾನೇನು ದೇವರಲ್ಲ ಎಂದು
ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಹೇಳಿದ್ದಾರೆ.
ಪುರಸಭೆ ಅಧ್ಯಕ್ಷೆ ರೆಹಮತ್ ಶೇಖ್ ಎಸ್. ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ಆರು ತಿಂಗಳೊಳಗೆ ನಗರದ ಎಲ್ಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಲು ನಿಮ್ಮೆಲ್ಲರ ಸಹಕಾರದಿಂದ ಪ್ರಯತ್ನಿಸುತ್ತೇನೆ. ಪುರಸಭೆಯು ಸರ್ವಾನುಮತದಿಂದ ಕೈಗೊಂಡ ಎಲ್ಲ ನಿರ್ಧಾರಗಳನ್ನು ಕೂಡಲೇ ಕಾರ್ಯಗತಗೊಳಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಅವರು ಹೇಳಿದರು.
ಪುರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ ತ್ಯಾಜ್ಯದ ವರ್ಗೀಕರಣವನ್ನು ಆರಂಭಿಸುವುದರಿಂದ ಹಳೆಯ ತ್ಯಾಜ್ಯದ ವಿಲೇವಾರಿ ಅಗತ್ಯವಾಗಿರುವುದಲ್ಲದೆ, ತ್ಯಾಜ್ಯ ವಿಲೇವಾರಿಗಾಗಿ ಯಂತ್ರೋಪಕರಣಗಳನ್ನು ಖರೀದಿಸಿ ಅಳವಡಿಸಲಾಗುತ್ತದೆ. ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗಾಗಿ ಪ್ರಾಥಮಿಕ ಸಂಗ್ರಹಣೆಯನ್ನು ವರ್ಗೀಕರಿಸಿಯೇ ಮಾಡಬೇಕಾಗಿದ್ದು, ಈ ಬಗ್ಗೆ ಅಗತ್ಯ ಮಾಹಿತಿಗಳನ್ನು ಸಂಪರ್ಕ, ಸಂವಹನ ಕಾರ್ಯಕ್ರಮದ ಅಡಿಯಲ್ಲಿ ಮಾಹಿತಿ ನೀಡಲು ನಿರ್ಧರಿಸಿದ್ದೇವೆ. ಪುರಸಭಾ ವ್ಯಾಪ್ತಿಯ ಹತ್ತು ಪ್ರದೇಶಗಳಲ್ಲಿ ಕಾರ್ಯ ಭಿತ್ತಿಫಲಕಗಳನ್ನು ಅಳವಡಿಸಲು ಮತ್ತು ಪುರಸಭಾ ವಾಹನಗಳಿಗೆ ತಾವು ಸಂಚರಿಸುವ ವ್ಯಾಪ್ತಿಯಲ್ಲಿ ಧ್ವನಿಮುದ್ರಿತ ಮಾಹಿತಿ ನೀಡಲು ನಿರ್ಧರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.
ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಮಾತನಾಡಿ, ಶೌಚಾಲಯ ರಹಿತ ಪುರಸಭೆಯನ್ನಾಗಿ ರೂಪಿಸಬೇಕೆಂಬ ಕನಸು ನಮ್ಮದು. ಪುರಸಭೆಯ ಎಲ್ಲ ಸದಸ್ಯರು ತಮ್ಮ ವಾರ್ಡ್ಗಳಲ್ಲಿರುವ ಶೌಚಾಲಯ ರಹಿತರ ಪಟ್ಟಿ ಮಾಡಿ ನೀಡಿ ಎಂದರು.
ನವೀನ್ ದೇವಾಡಿಗ ಮಾತನಾಡಿ, ಪುರಸಭೆಯು ನೀರಿಗಾಗಿ ಅಳವಡಿಸಿದ ಪಂಪ್ಗಳು ಕೆಟ್ಟು ಹೋದ ಬಳಿಕ ಹಾಗೂ ಹಳೆ ಪೀಠೋಪಕರಣಗಳ ಮಾಹಿತಿಯಿಲ್ಲ ಎಂದು ದೂರಿದರು. ಸುಬಿತ್ ಎನ್.ಆರ್. ಮಾತನಾಡಿ, ರಸ್ತೆ ಹಾಗೂ ನೀರು ಸರಬರಾಜು ಪೈಪ್ಲೈನ್ ನಿರ್ವಹಣೆಗೆ ವಾರ್ಷಿಕ ಟೆಂಡರ್ ನೀಡಿ ದುರಸ್ತಿಪಡಿಸಬೇಕು. ಅಲ್ಲದೆ ನಡೆದ ಕಾಮಗಾರಿಗೆ ಮಾತ್ರ ಬಿಲ್ ಪಾವತಿಸಬೇಕು ಎಂದರು. ಗಿರಿಧರ ನಾಯಕ್ ಮಾತನಾಡಿ, ವೆಂಕಟರಮಣ ದೇವಳದ ಬಳಿ ವಾಹನಗಳ ವೇಗ ತಡೆಗಟ್ಟಲು ರಸ್ತೆ ಉಬ್ಬುಗಳನ್ನು ಹಾಕುವಂತೆ ಮನವಿ ಮಾಡಿದರು. ಜರಿಗುಡ್ಡೆ ಬಿಎಸ್ಎನ್ಎಲ್ ಟವರ್ ಬಳಿಯ ಸಾರ್ವಜನಿಕ ರಸ್ತೆಯು ತೀರಾ ನಾದುರಸ್ತಿಯಲ್ಲಿದ್ದು, ಆ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಸದಸ್ಯ ಶ್ರೀಧರ್ ಒತ್ತಾಯಿಸಿದರು. ಪೇಟೆಯಲ್ಲಿನ ಮದುವೆ ಸಭಾಂಗಣಗಳ ತ್ಯಾಜ್ಯಗಳನ್ನು ಕೊಂಡೊಯ್ಯುವ ವೇಳೆ ಶುಲ್ಕ ವಿಧಿಸುವಂತೆ ಪಾರ್ಶ್ವನಾಥ ವರ್ಮ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ವಿನ್ನಿ ಬೋಲ್ಡ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

