ಪುತ್ತೂರು: ವಿವಿಧೆಡೆ ಧರೆ ಕುಸಿದು ಹಾನಿ, ಚೆಲ್ಯಡ್ಕ ಸೇತುವೆ ಮುಳುಗಡೆ
ಪುತ್ತೂರು: ತಾಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದ್ದು, ಇಲ್ಲಿನ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ಉಕ್ಕಿ ಹರಿಯಲಾರಂಭಿಸಿದೆ. ಮಳೆಯಿಂದಾಗಿ ಹಲವೆಡೆ ಹಾನಿಗಳಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಹಾರಾಡಿ ಎಂಬಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ರೇಲ್ವೆ ಸ್ಟೇಷನ್ ರಸ್ತೆಯಲ್ಲಿನ ಗೋಪಾಲ ಆಚಾರ್ಯ ಎಂಬವರ ಮನೆಗೆ ತೆರಳುವ ರಸ್ತೆ ಮಳೆಯ ಅಬ್ಬರಕ್ಕೆ ಕುಸಿದಿದೆ. ನಗರದ ಬೊಳುವಾರು ಎಂಬಲ್ಲಿನ ನಿವಾಸಿ ಕಸ್ತೂರಿ ಮನೆಯೊಳಗೆ ನೀರು ನುಗ್ಗಿದೆ. ಪುರಸಭಾ ಚರಂಡಿ ದುರಸ್ತಿಯಾಗದ ಕಾರಣ ನೀರು ಮನೆಯೊಳಗೆ ನುಗ್ಗಿದೆ ಎನ್ನಲಾಗಿದೆ. ಪುರಸಭಾ ಸಿಬ್ಬಂದಿ ಚರಂಡಿ ದುರಸ್ತಿಗೊಳಿಸಿ ನೀರು ಸಂಚಾರ ಸುಗಮಗೊಳಿಸಿದರು.
ಬನ್ನೂರು ಸಮೀಪದ ಜೋಡುಕಟ್ಟೆ ಎಂಬಲ್ಲಿ ಮೋಹನ್ ಹೆಗ್ಡೆ ಎಂಬವರ ಮನೆ ಪಕ್ಕದಲ್ಲಿದ್ದ ಧರೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಪುರಸಭಾ ಉಪಾಧ್ಯಕ್ಷ ಜೀವಂದರ್ ಜೈನ್, ಮುಖ್ಯಾಧಿಕಾರಿ ಸುಧಾಕರ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದರ್ಶ ಆಸ್ಪತ್ರೆಯ ಪಕ್ಕದಲ್ಲಿನ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಯಿತು. ಕುದ್ಮಾರು ಗ್ರಾಮದ ಬರೆಪ್ಪಾಡಿ ಅನ್ನಾಡಿ ಎಂಬಲ್ಲಿ ಎರಡು ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ. ಇಲ್ಲಿನ ಪೂವಣಿ ಗೌಡ ಮತ್ತು ಚೆನ್ನಪ್ಪ ಗೌಡ ಎಂಬವರಿಗೆ ಸೇರಿದ ಜಮೀನಿನಲ್ಲಿ ಭೂ ಕುಸಿತ ಉಂಟಾಗಿದೆ.
ಚೆಲ್ಯಡ್ಕ ಸೇತುವೆ ಜಲಾವೃತ: ಪುತ್ತೂರು ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿರುವ ಸೇತುವೆಯು ಜಲಾವೃತಗೊಂಡಿದ್ದು, ಈ ಭಾಗದಲ್ಲಿ ವಾಹನ ಸಂಚಾರ ನಿಲುಗಡೆಯಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಶಾಂತಿಮೊಗರು ದೇವಸ್ಥಾನದ ತಡೆಗೋಡೆಗೆ ಸಮಾನಾಂತರವಾಗಿ ನೀರು ಹರಿಯುತ್ತಿದೆ.
ಅಂತಾರಾಜ್ಯ ಹೆದ್ದಾರಿ ಬಂದ್: ಮಳೆಯ ಬಿರುಸಿಗೆ ಕಾಣಿಯೂರು- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ಮುಳುಗಡೆಗೊಂಡಿತ್ತು. ಇದರಿಂದಾಗಿ ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡಿತು. ಶನಿವಾರ ಆರಂಭಗೊಂಡಿದ್ದ ಮಳೆ ರಾತ್ರಿ ಪೂರ್ತಿ ಬಿರುಸಾಗಿ ಸುರಿದುದರಿಂದ ಕಾಣಿಯೂರು ಗೌರಿ ಹೊಳೆ ಉಕ್ಕೇರಿ ಹರಿಯಿತು. ಇದರಿಂದ ಮಂಜೇಶ್ವರ- ಕಾಣಿಯೂರು ಅಂತಾರಾಜ್ಯ ಹೆದ್ದಾರಿಯ ಪುಣ್ಚತ್ತಾರು ಹಾಗೂ ಕಾಣಿಯೂರು ಎರಡು ಕಡೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

