ರೇಷ್ಮೆ ಇಲಾಖೆ ನಿರ್ಲಕ್ಷ್ಯ; ಸಂಕಷ್ಟದಲ್ಲಿ ಬೆಳೆಗಾರರು
ಬೆಳ್ತಂಗಡಿ: ರೇಷ್ಮೆ ಇಲಾಖೆಯ ಅಧಿಕಾರಿ ವರ್ಗದವರ ನಿರ್ಲಕ್ಷ್ಯದಿಂದ ತಾಲೂಕಿನ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು ಆತ್ಮಹತ್ಯೆಯ ಮಾತನಾಡಿದ್ದಾರೆ. ಇಲಾಖೆಯ ಬೇಜವಾಬ್ದಾರಿತನ ಶುಕ್ರವಾರ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ಭೇಟಿಯಿಂದ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ರೇಷ್ಮೆ ಬೆಳೆಗಾರ ಕೇಶವ ಪೂಜಾರಿ, ಕಳಿಯ ಗ್ರಾಮದ ನೆವಿಲ್ ಮೋರಾಸ್, ಓಡಿಲ್ನಾಳ ಗ್ರಾಮದ ಸಾಂತಪ್ಪ ಶೆಟ್ಟಿ, ಕೃಷ್ಣಪ್ಪ ಶೆಟ್ಟಿಯವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಮುಂದೆ ಇಲಾಖೆಯು ಸಕಾಲದಲ್ಲಿ ಸ್ಪಂದಿಸದೆ ಸಂಕಷ್ಟಕ್ಕೆ ದೂಡಿರುವುದನ್ನು ಎಳೆ ಎಳೆಯಾಗಿ ವಿವರಿಸಿದರು.
ಆತ್ಮಹತ್ಯೆಯೊಂದೇ ದಾರಿಯಾಗಿದೆ: ಬೆಳ್ತಂಗಡಿ ತಾಲೂಕಿನಲ್ಲಿ ರೇಷ್ಮೆ ಕೃಷಿಕರಿಗೆ ರೇಷ್ಮೆ ಇಲಾಖೆ ಸ್ಪಂದಿಸುತ್ತಿಲ್ಲ. ಸೌಲಭ್ಯಗಳನ್ನೂ ನೀಡದೆ ವಂಚಿಸುತ್ತಿದೆ. ಈಗಾಗಲೇ ಮೂರು ಬೆಳೆ ಹಾಳಾಗಿದೆ.
ಮೈಸೂರಿನಲ್ಲಿರುವ ಜಂಟಿ ನಿರ್ದೇಶಕರಿಗೆ ಫೋನ್ ಮಾಡಿದರೆ ನಿಮಗೆ ನನ್ನ ನಂಬ್ರ ಕೊಟ್ಟವರು ಯಾರು ಎಂದು ಕೇಳಿದ್ದಾರೆ. ಆದರೆ, ಯಾಕೆ ಪೋನ್ ಮಾಡಿದ್ದು ಎಂದು ಕೇಳಿಲ್ಲ. ಬೆಳೆಗಾಗಿ ಮಾಡಿದ ಸಾಲವನ್ನು ಕಟ್ಟದೆ ಆತ್ಮಹತ್ಯೆ ಮಾತ್ರ ನಮಗೆ ಗತಿ ಎಂದು ರೈತರು ಅಳಲು ತೋಡಿಕೊಂಡರು.
ಐದು ದಿನದೊಳಗೆ ಸ್ಪಂದಿಸಿ: ಕೃಷಿಕರ ಮಾತನ್ನು ಆಲಿಸಿದ ಉಪಾಧ್ಯಕ್ಷರು, ಐದು ದಿನದೊಳಗೆ ಕೃಷಿಕರಿಗೆ ಸ್ಪಂದಿಸಿ ಅವರ ಸಮಸ್ಯೆ ನಿವಾರಣೆ ಮಾಡುವಂತೆ ರೇಷ್ಮೆ ಇಲಾಖೆ ಉಪನಿರ್ದೇಶ ಸಿದ್ದರಾಜು ಅವರಿಗೆ ಸತೀಶ್ ಕುಂಪಲ ಸೂಚಿಸಿದರು.
ಇಲಾಖೆಯಲ್ಲಿನ ಟೀಂ ವೈಫಲ್ಯದಿಂದ ಈ ರೀತಿಯಾಗಿದೆ. ಹಿರಿಯ ಅಧಿಕಾರಿಗಳು ಕೆಲಸ ಮಾಡದಿದ್ದರೆ ಕೆಳಹಂತದ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ರೈತರ ಸಮಸ್ಯೆ ಜು. 22ರೊಳಗೆ ಪರಿಹಾರವಾಗಬೇಕು. ಅದಕ್ಕೆ ಮೊದಲು ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸಭೆ ನಡೆಸಬೇಕು. ಈ ಎಲ್ಲದರ ಬಗ್ಗೆ ಜು. 23ರಂದು ವರದಿಯನ್ನು ನೀಡಬೇಕು. ಈ ಎಲ್ಲಾ ಕೆಲಸವನ್ನು ಮಾಡದಿದ್ದರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯನ್ನು ಸೇರಿಸಿಕೊಂಡು ಜು. 24ರಂದು ಜಿಲ್ಲಾ ಪಂಚಾಯಿತಿನಲ್ಲಿ ರೈತರನ್ನು ಕರೆದು ಸಭೆ ನಡೆಸಲಾಗುವುದು. ಎಲ್ಲದಕ್ಕೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಳಸಿ ಹಾರಬೆ, ಬಾಲಕೃಷ್ಣ ಗೌಡ ಬಣಜಾಲು, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಉಪಾಧ್ಯಕ್ಷ ಸದಾನಂದ ಮೂಲ್ಯ, ಸದಸ್ಯರಾದ ಗೋಪಾಲ ನೈಕ್ ಬನ, ಕಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ ಮಜಲು, ದಿವಾಕರ ಮೆದಿನ, ಕೇಶವ ನಾಳ, ಕಳಿಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ದೇವಣ್ಣ ಮೂಲ್ಯ, ರಾಜ್ ಪ್ರಕಾಶ್, ಶೇಖರ್ ನಾಯ್ಕ, ಬಿಜೆಪಿ ತಾಲೂಕು ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗೋಪಿನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

