ದಕ್ಷಿಣ ಕನ್ನಡ

ಮೂಲ್ಕಿ ವಿಶೇಷ ತಹಸೀಲ್ದಾರ್ ಆದಾಯಪತ್ರ ನೀಡಲು ಸೀಮಿತ

Published On :

ಮೂಲ್ಕಿ: ಮೂಲ್ಕಿ ತಾಲೂಕು ರಚನೆ ಬಹುದಿನದ ಬೇಡಿಕೆಯಾಗಿದ್ದರೂ ಆದ್ಯತೆಯ ಮೇರೆಗೆ ಇಲ್ಲಿಗೆ ವಿಶೇಷ ತಹಸೀಲ್ದಾರ್ ನೇಮಕವಾಗಿತ್ತು. ಆದರೆ, ಅವರು ಕೇವಲ ಆದಾಯ ಪತ್ರ ನೀಡಲು ಸೀಮಿತರಾಗಿದ್ದಾರೆ.
ಮೂಲ್ಕಿ- ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವಾಗಿದ್ದ ಮೂಲ್ಕಿ ಸೇರಿದ್ದ ಮೂಡಬಿದಿರೆಯು ಮೂಡುಬಿದಿರೆ ಪರಿಸರದವರು ಸತತವಾಗಿ ಶಾಸಕರಾಗಿ ಆಯ್ಕೆಯಾದ ಬಳಿಕ ಮೂಲ್ಕಿಯ ಹೆಸರು ಮಾಯವಾಗಿ ಮೂಡಬಿದಿರೆ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತು. ಬಳಿಕ ಹಂತ ಹಂತವಾಗಿ ಮೂಡಬಿದಿರೆಯ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿ ಮೂಡುಬಿದಿರೆ ತಾಲೂಕು ರಚನೆಗೆ ಪೂರಕವಾಗಿ ತಾಲೂಕಿಗೆ ಅಗತ್ಯವಾದ ಕಚೇರಿಗಳು,ಅರಣ್ಯ ಇಲಾಖೆ ಕಚೇರಿ, ಅಗ್ನಿಶಾಮಕ ದಳ ಕಚೇರಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಬಳಿಕ ಮೂಡುಬಿದಿರೆಯಲ್ಲಿ ವಿಶೇಷ ತಹಸೀಲ್ದಾರ್ ನೇಮಕ ಮೂಲಕ ಮೂಡುಬಿದಿರೆ ತಾಲೂಕು ರಚನೆಗೆ ಕಾಯಕಲ್ಪ ನಡೆಸಲಾಗಿತ್ತು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಜೆಟ್‌ನಲ್ಲಿ ಮೂಡಬಿದಿರೆ ಸೇರಿದಂತೆ 43 ತಾಲೂಕುಗಳ ಘೋಷಣೆಯಾಗಿತ್ತು. ಅಂದಿನಿಂದ ಮೂಲ್ಕಿಯಲ್ಲಿ ತಾಲೂಕು ರಚನೆ ಮತ್ತು ವಿಶೇಷ ತಹಸೀಲ್ದಾರ್ ನೇಮಕಕ್ಕೆ ಹೆಚ್ಚಿನ ಪ್ರತಿಭಟನೆಗಳು ನಡೆದು ಸರ್ಕಾರವನ್ನು ಎಚ್ಚರಿಸುವ ಕಾರ್ಯ ತಾಲೂಕು ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿತ್ತು.
ಒತ್ತಾಯದ ಬಳಿಕ ವಿಶೇಷ ತಹಸೀಲ್ದಾರ್ ನೇಮಕ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆ ಘೋಷಿಸಿದ 43 ತಾಲೂಕುಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿತ್ತು. ಬಳಿಕ ಕ್ಷೇತ್ರದ ಶಾಸಕ ಹಾಗೂ ಸಚಿವ ಕೆ. ಅಭಯಚಂದ್ರ ಜೈನ್‌ರ ಒತ್ತಡದಿಂದ ಕಾಂಗ್ರೆಸ್ ಸರ್ಕಾರದಿಂದ ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡಲಾಗಿತ್ತು. ಆರಂಭದಲ್ಲಿ ಮೂಲ್ಕಿಯಲ್ಲಿ ವಿಶೇಷ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಚಂದ್ರ ನಾಯಕ್‌ರನ್ನು ಮೂಲ್ಕಿಗೆ ವಿಶೇಷ ತಹಸೀಲ್ದಾರ್ ಆಗಿ ನೇಮಕ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುಂದಿನ ಆರು ತಿಂಗಳಿನಲ್ಲಿ ಮೂಲ್ಕಿ ಹೋಬಳಿಯ ಸಂಬಂಧಪಟ್ಟ ಎಲ್ಲಾ ಕಡತಗಳನ್ನು ಮೂಲ್ಕಿಗೆ ತರಿಸುವುದಾಗಿ ಹಾಗೂ ಮೂಲ್ಕಿ ಹೋಬಳಿಯ ಜನತೆಗೆ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಆದಾಯ ಪ್ರಮಾಣ ಪತ್ರ, ಜಾತಿ ಸರ್ಟಿಫಿಕೇಟ್ ಸೇರಿದಂತೆ ಪ್ರತಿಯೊಂದನ್ನು ಮೂಲ್ಕಿಯಲ್ಲಿ ನೀಡುವುದಾಗಿ ಮಂಗಳೂರಿಗೆ ಅಲೆದಾಡುವ ಅವಶ್ಯಕತೆಯಿಲ್ಲ ಎಂದು ವಿಶೇಷ ತಹಸೀಲ್ದಾರ್ ಹಾಗೂ ಸಚಿವರು ಜನರಿಗೆ ತಿಳಿಸಿದ್ದರು.
ಚಿಕ್ಕ ಕಟ್ಟಡದಲ್ಲಿ ಎಲ್ಲಾ ಕಚೇರಿ: ಮೂಲ್ಕಿಯ ಬಪ್ಪನಾಡು ಬಳಿಯಿರುವ ಅತೀ ಚಿಕ್ಕದಾದ ಕಟ್ಟಡದಲ್ಲಿ ವಿಶೇಷ ತಹಸೀಲ್ದಾರ್ ಕಚೇರಿಯನ್ನು ಆರಂಭಿಸಿದ್ದು, ಕೇವಲ ಆರು ನೂರು ಚದರ ಅಡಿಯಿರುವ ಕಟ್ಟಡದಲ್ಲಿ ಗ್ರಾಮ ಲೆಕ್ಕಿಗರ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ನೆಮ್ಮದಿ ಕೇಂದ್ರ ಸೇರಿದಂತೆ ಎಲ್ಲಾ ಕಟ್ಟಡಗಳು ಒಂದೇ ಸೂರಿನಲ್ಲಿದೆ. ಇಲ್ಲಿ ಸಿಬ್ಬಂದಿಗೆ ಮತ್ತು ಜನ ಸಾಮಾನ್ಯರಿಗೆ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿಯಿದ್ದು, ತಮ್ಮ ಅಹವಾಲುಗಳನ್ನು ಸಲ್ಲಿಸಲು ಹಾಗೂ ನೆಮ್ಮದಿ ಕೇಂದ್ರದಲ್ಲಿ ತಮಗೆ ಸಂಬಂಧ ಪಟ್ಟ ದಾಖಲೆಗಳನ್ನು ಪಡೆಯಲು ಜನ ಸಾಮಾನ್ಯರು ಹೊರಗೆ ಕಾಯುತ್ತ ನಿಲ್ಲಬೇಕು.
ವಿಶೇಷ ತಹಸೀಲ್ದಾರ್ ಸ್ಥಾನವೂ ಖಾಲಿ: ಆರಂಭದಲ್ಲಿ ವಿಶೇಷ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ ರವಿಚಂದ್ರ ನಾಯಕ್ ಭಡ್ತಿಗೊಂಡು ವರ್ಗಾವಣೆಯಾದ ಬಳಿಕ ಮೂಲ್ಕಿಯಲ್ಲಿ ವಿಶೇಷ ತಹಸೀಲ್ದಾರ್ ಸ್ಥಾನ ಖಾಲಿಯಿದೆ. ಇದೀಗ ಉತ್ತರ ಕನ್ನಡದ ಎ ಗ್ರೇಡ್‌ನ ಎ.ಜಿ. ಕಿಣಿ ವಿಶೇಷ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯವಾಗಿ ವಿಶೇಷ ತಹಸೀಲ್ದಾರ್ ಕಚೇರಿಯು ಜಾಗದ ಕೊರತೆಯ ಜೊತೆಗೆ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಇಲಾಖೆಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದ ಬಳಿಯಿರುವ ಹಳೆ ನಾಡ ಕಚೇರಿಯಲ್ಲಿ ಸುಮಾರು ರು. 25 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.