ಶೇಖಮಲೆ-ಪಯಂದೂರು ರಸ್ತೆ: ದುರಸ್ತಿಗಾಗಿ 25 ವರ್ಷದ ಸತತ ಮನವಿ!
ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಶೇಕಮಲೆಯಿಂದ ಪಯಂದೂರು ಮೂಲಕ ತ್ಯಾಗರಾಜೆಗೆ ಸಂಪರ್ಕ ಕಲ್ಪಿಸುವ ಶೇಕಮಲೆ ಪಯಂದೂರು ರಸ್ತೆ ತೀರಾ ನಾದುರಸ್ತಿಯಲ್ಲಿದ್ದು ಸಂಚಾರಕ್ಕೆ ಸಂಕಷ್ಟವೊದಗಿದೆ.
ಈ ರಸ್ತೆ ಡಾಂಬರೀಕರಣಗೊಳಿಸುವಂತೆ ಸ್ಥಳೀಯರು ಕಳೆದ 25 ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.
ಬೇಸತ್ತ ನಾಗರಿಕರು: ಇಲ್ಲಿನ ನಾಗರಿಕರು ಸ್ಥಳೀಯಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ರಸ್ತೆ ಡಾಂಬರೀಕರಣ ಭಾಗ್ಯ ಕಂಡಿಲ್ಲ. ಇದರಿಂದಾಗಿ ಬೇಸತ್ತ ಸ್ಥಳೀಯ ನಾಗರಿಕರು ಭ್ರಮನಿರಸನರಾಗಿ ಇನ್ನು ಮುಂದೆ ತಾವು ಡಾಂಬರೀಕರಣಕ್ಕಾಗಿ ಯಾವುದೇ ಪ್ರತಿಭಟನೆ ಅಥವಾ ಮನವಿ ಮಾಡುವುದಿಲ್ಲ ಎಂದು ಆಕ್ರೋಶಿತರಾಗಿ ಹೇಳುತ್ತಿದ್ದಾರೆ.
ಸಮಸ್ಯೆ ಹಿನ್ನೆಲೆ: ಗ್ರಾಮೀಣ ಸಂಪರ್ಕ ರಸ್ತೆಯಾಗಿರುವ ಶೇಖಮಲೆ-ಪಯಂದೂರು ರಸ್ತೆ ಬೆಳ್ಳಾರೆ ರಸ್ತೆಗೆ ತ್ಯಾಗರಾಜೆ ಎಂಬಲ್ಲಿ ಸಂಪರ್ಕ ಕಲ್ಪಿಸುತ್ತದೆ. ಸುಮಾರು 4 ಕಿ.ಮೀ. ಉದ್ದವಿರುವ ಈ ರಸ್ತೆ ವ್ಯಾಪ್ತಿಯಲ್ಲಿ 500ಕ್ಕೂ ಮಿಕ್ಕಿ ಮನೆಗಳಿವೆ, ದಲಿತ ಕಾಲನಿಯಿದೆ, ದೇವಸ್ಥಾನ ಮತ್ತು ಮಸೀದಿಯಿದೆ, ಇತರೆ ಧಾರ್ಮಿಕ ಕೇಂದ್ರಗಳೂ ಇದೆ, ಈ ಭಾಗದ ಜನರು ಪುತ್ತೂರಿಗೆ ಬರಬೇಕಿದ್ದಲ್ಲಿ ಈ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಹೊಂಡಗಳಿಂದ ತುಂಬಿರುವ ಈ ಮಣ್ಣಿನ ರಸ್ತೆಯಲ್ಲೇ ಕಳೆದ 25 ವರ್ಷಗಳಿಂದ ಇಲ್ಲಿನ ನಾಗರಿಕರು ಸಂಚರಿಸುತ್ತಿದ್ದಾರೆ.
ಈ ರಸ್ತೆಯಲ್ಲಿರುವ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿದೆ. ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಈ ಸೇತುವೆ ದುರಸ್ತಿಗೊಳಿಸದಿದ್ದಲ್ಲಿ ಮಳೆಗಾಲದಲ್ಲಿ ಕುಸಿಯುವ ಭೀತಿಯಿದೆ, ಸೇತುವೆಯನ್ನು ದುರಸ್ತಿ ಮಾಡಬೇಕೆಂಬ ಬೇಡಿಕೆಯನ್ನೂ ಇಲ್ಲಿನ ಜನರು ಮುಂದಿಟ್ಟಿದ್ದಾರೆ.
ಚುನಾವಣೆ ಸಮಯದಲ್ಲಿ ರಸ್ತೆಗೆ ಸ್ಥಳೀಯ ಪಂಚಾಯಿತಿ ವತಿಯಿಂದ ಅಲ್ಲಿಂದ-ಇಲ್ಲಿಂದ ಒಂದಷ್ಟು ಮಣ್ಣು ಹಾಕಿ ಜನರ ಕಣ್ಣಿಗೆ ಮಣ್ಣೆರಚುವುದು ಬಿಟ್ಟರೆ ಬೇರೆ ಯಾವುದೇ ರೀತಿಯ ಶಾಶ್ವತ ಪರಿಹಾರವನ್ನು ಇದುವರೆಗೆ ಒದಗಿಸಿಕೊಟ್ಟಿಲ್ಲ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯೂಸುಫ್ ಆರೋಪಿಸಿದ್ದಾರೆ.
ಚುನಾವಣೆ ನಂತರ ಅವರ ಪತ್ತೆಯಾಗುವುದು ಮುಂದಿನ ಚುನಾವಣೆಯ ವೇಳೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

