ದಕ್ಷಿಣ ಕನ್ನಡ

ಕೊಲ್ಲೂರು ಶ್ರೀನಿರ್ಮಲಾನಂದ ಸ್ವಾಮೀಜಿ ಸಮಾಧಿ ತೆರವಿಗೆ ಆಕ್ಷೇಪ

Published On :

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಶ್ರೀನಿತ್ಯಾನಂದ ಆಶ್ರಮದ ಬಳಿ ನಿರ್ಮಿಸಲಾಗಿರುವ ಆಶ್ರಮದ ಸ್ವಾಮೀಜಿ ಶ್ರೀನಿರ್ಮಲಾನಂದ ಸ್ವಾಮೀಜಿ ಸಮಾಧಿ ಸ್ಥಳಾಂತರಿಸಬಾರದು ಎಂದು ಉಡುಪಿಯ ಜಗದ್ಗುರು ಶ್ರೀನಿತ್ಯಾನಂದ ಸ್ವಾಮಿ ಮಂದಿರದ ಭಕ್ತರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.  ಮೂಕಾಂಬಿಕಾ ದೇವಾಲಯದ ಗಡಿಯೊಳಗೆ ಯಾರ ಸಮಾಧಿಯನ್ನು ಮಾಡುವ ಸಂಪ್ರದಾಯವಿಲ್ಲ, ಆದ್ದರಿಂದ ಜೂ. 2ರಂದು ನಿಧನರಾದ ಶ್ರೀನಿರ್ಮಲಾನಂದ ಸ್ವಾಮೀಜಿ ಸಮಾಧಿಯನ್ನು ದೇವಾಲಯದ ಗಡಿಯೊಳಗಿನಿಂದ ಹೊರಗೆ ಎತ್ತಂಗಡಿ ಮಾಡಬೇಕು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಶ್ರೀನಿತ್ಯಾನಂದ ಸ್ವಾಮಿ ಮಂದಿರದ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ ಮತ್ತು ಇತರ ಭಕ್ತರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್‌ಗೆ ಮನವಿ ಸಲ್ಲಿಸಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟಿ, ಈಗಾಗಲೇ ಶ್ರೀನಿರ್ಮಲಾನಂದ ಸ್ವಾಮೀಜಿ ಸಮಾಧಿ ನಿರ್ಮಿಸಿಯಾಗಿದೆ. ಈ ಹಿನ್ನೆಲೆಯಲ್ಲಿ ಸಕೊಲ್ಲೂರು ಮೂಕಾಂಬಿಕಾ ದೇವಾಲದಲ್ಲಿ ಪ್ರಾಯಶ್ಚಿತ ಹೋಮ ನಡೆಸಿ, ಸ್ಥಗಿತಗೊಳಿಸಿದ್ದ ಪೂಜೆಗಳನ್ನು ಆರಂಭಿಸಲಾಗಿದೆ. ಆದ್ದರಿಂದ ಪ್ರಕರಣ ಸುಖಾಂತ್ಯವಾಗಿದೆ. ಹಾಗಿರುವಾಗ ಪುನಃ ಸಮಾಧಿ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎನ್ನುವುದು ಸರಿಯಲ್ಲ, ಇದರಿಂದ ಸಮಾಜದ ಶಾಂತಿ ಕದಡುತ್ತದೆ. ಶ್ರೀನಿರ್ಮಾಲಾನಂದ ಸ್ವಾಮೀಜಿ ಅವರ ಭಕ್ತರ ಮನಸ್ಸಿಗೆ ನೋವಾಗುತ್ತದೆ. ಶ್ರೀನಿರ್ಮಲಾನಂದ ಸ್ವಾಮೀಜಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಶಶಿಧರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ಹೊಳೆಯೇ ಗಡಿರೇಖೆ: ಮೂಕಾಂಬಿಕಾ ದೇವಾಲಯ ಮತ್ತು ನಿತ್ಯಾನಂದಾಶ್ರಮದ ನಡುವೆ ಹೊಳೆಯೊಂದು ಹರಿಯುತ್ತದೆ, ರಾಜರಸ್ತೆ ಹಾದು ಹೋಗುತ್ತದೆ. ಹಾಗಿರುವಾಗ ಶಾಸ್ತ್ರಗಳ ಪ್ರಕಾರ ಹೊಳೆ, ರಾಜರಸ್ತೆಗಳು ಗಡಿ ರೇಖೆಗಳಾಗಿರುವುದರಿಂದ ಅಲ್ಲಿಗೆ ದೇವಾಲಯದ ಗಡಿ ಕೊನೆಗೊಳ್ಳುತ್ತದೆ. ಆದ್ದರಿಂದ ಸಮಾಧಿ ದೇವಾಲಯದ ಗಡಿಯೊಳಗೆ ಇಲ್ಲ ಎಂದು ಹೇಳಿದ ಶಶಿಧರ ಶೆಟ್ಟಿ, ಜಾತಿಭೇದ ತಿರಸ್ಕರಿಸಿದ್ದ ಶ್ರೀನಿರ್ಮಲಾನಂದ ಸ್ವಾಮೀಜಿ ಬ್ರಾಹ್ಮಣರಲ್ಲ ಎನ್ನುವ ಒಂದೇ ಕಾರಣಕ್ಕೆ ಅವರ ಸಮಾಧಿ ಸ್ಥಳಾಂತರಿಸಬೇಕು ಎನ್ನುವುದು ಸರಿಯಲ್ಲ ಎಂದು ವಿಶ್ಲೇಷಿಸಿದ್ದಾರೆ. ಉಡುಪಿ ನಿತ್ಯಾನಂದ ಸ್ವಾಮಿ ಮಂದಿರದ ಕಾರ್ಯಾಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಕಾರ್ಯದರ್ಶಿ ಯೋಗೀಶ ಶ್ಯಾನುಭಾಗ್, ಭಕ್ತರಾದ ಶಶಿ ಶೆಟ್ಟಿ ಮತ್ತು ವಿಶ್ವನಾಥ ಸನೀಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.