ಏಕೀಕರಣ ಹೋರಾಟದ ದೊಡ್ಡಣ್ಣ ಕಯ್ಯಾರ
ಮಂಗಳೂರು: ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ಬಾನಿನಗಲ ಪಟ ಪಟ...
ಸಾವಿರಾರು ಪುಟ್ಟ ಮಕ್ಕಳಲ್ಲಿ ದೇಶ ಭಕ್ತಿಯನ್ನು ನವಿರಾಗಿ ಪುಟಿದೇಳುವಂತೆ ಮಾಡಿದ ಕವಿ ನಾಡೋಜ ಕಯ್ಯಾರ ಕಿಂಞಣ್ಣ ರೈ. ಅವರಿಗೆ ಇಂದಿಗೆ (ಜೂ.8) ನೂರು ವರ್ಷ ತುಂಬುತ್ತದೆ.
ಕನ್ನಡದ ಮೇರು ಕವಿ, ಹಿರಿಯ ಸಾಹಿತಿ, ಬಹುಭಾಷೆ ವಿದ್ವಾಂಸ ಕಯ್ಯಾರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಲೇಖನಿ ಝಳಪಿಸಿ ಹೋರಾಡಿದರು, ಕಾಸರಗೋಡು ಕರ್ನಾಟಕಕ್ಕೇ ಸೇರಲೇ ಬೇಕು ಎಂದು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದವರು. ವರ್ಷದ ಹಿಂದೆ ಕನ್ನಡ ಪ್ರಭ ಜತೆ ಸಂದರ್ಶನದಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವುದು ನನ್ನ ಬದುಕಿನ ದೊಡ್ಡ ಆಸೆ ಎಂದು ಹೇಳಿಕೊಂಡಿದ್ದರು.
ಕನ್ನಡ, ಸಂಸ್ಕೃತದಲ್ಲಿ ವಿದ್ವಾನ್ ಪದವಿ ಪಡೆದ ಕಯ್ಯಾರ, ಕನ್ನಡದಲ್ಲಿ ಅಂತರ್ಗತವಾದ ತುಳುವನ್ನು ಒಪ್ಪಿಕೊಳ್ಳುವ ವಿಶಾಲ ಹೃದಯಿ. ತುಳು ಮಾತೃಭಾಷೆ, ಕನ್ನಡ ಸಾಕುತಾಯಿ ಭಾಷೆ ಎಂದು ಸದಾ ಹೇಳಿಕೊಳ್ಳುತ್ತಲೇ ಬಂದಿರುವ ರೈಗಳು, ಕನ್ನಡ ಹೋರಾಟದಲ್ಲಿ ಪೂರ್ತಿ ತೊಡಗಿಸಿಕೊಂಡವರು, ತುಳು ಭಾಷೆಗೆ ಹೆಚ್ಚಿಗೆ ದುಡಿಯಲಾಗಲಿಲ್ಲ ಎಂಬ ನೋವು ಕೆಲವೊಮ್ಮೆ ವ್ಯಕ್ತಪಡಿಸಿದ್ದೂ ಇದೆ.
ರೈಗಳಿಗೆ ಕರ್ನಾಟಕ ರತ್ನ ನೀಡಬೇಕು ಎಂಬ ಆಶಯ ರಾಜಕೀಯ ರಹಿತ ಸಾಹಿತಿಗಳ ವಲಯದಲ್ಲಿ ವ್ಯಕ್ತವಾಗಿತ್ತು. ಆದರೆ ಆ ಪ್ರಶಸ್ತಿ ಸಿಗದಿದ್ದರೇನಂತೆ ನಿಜವಾದ ಕರ್ನಾಟಕದ ರತ್ನ ಕಯ್ಯಾರರೇ ಎಂದು ಅವರ ಅಭಿಮಾನಿಗಳು ಎದೆತಟ್ಟಿ ಹೇಳಿಕೊಳ್ಳುತ್ತಾರೆ.
ಕಯ್ಯಾರ ಪ್ರಶಸ್ತಿ ಬಯಸುವವರಲ್ಲ ಎನ್ನುವುದು ಹಿಂದೆಯೇ ಸಾಬೀತಾಗಿತ್ತು. ಹಿಂದೊಮ್ಮೆ ರಾಷ್ಟ್ರಕವಿ ಪ್ರಶಸ್ತಿ ಪಟ್ಟಿಯಲ್ಲಿ ಕಯ್ಯಾರ ಹೆಸರು ಸೇರಿಕೊಂಡಿತ್ತು,
ಆಗ ಕಯ್ಯಾರರು ಮಂಜೇಶ್ವರ ಗೋವಿಂದ ಪೈಗಳ ಹೆಸರು ಸೂಚಿಸಿದ್ದರು ಎಂಬುದನ್ನು ಡಾ.ಶ್ರೀನಾಥ್ ಪುತ್ತೂರಿನ ಕಯ್ಯಾರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದರು.
ಪರಿಚಯ: ಕಯ್ಯಾರ ಕಿಂಞಣ್ಣ ರೈಗಳ ತರವಾಡ್ ತಾಯಿ ಮನೆ ಮಂಜೇಶ್ವರ. ಉಞಕ್ಕ ಮದುವೆಯಾಗಿ ಆರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳ ತುಂಬು ಸಂಸಾರ. ಬದಿಯಡ್ಕ ಗ್ರಾಮದ ಪೆರಡಾಲ ಕವಿತಾ ಕುಟೀರ ಇವರ ನಿವಾಸ.
ಪೆರಡಾಲ ನವಜೀವನ ಶಾಲೆಯಲ್ಲಿ ಶಿಕ್ಷಕರಾಗಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿದವರು.12 ವರ್ಷ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಅಭಿವೃದ್ಧಿ ಕಾರ್ಯ ಮಾಡಿದರು. ಪ್ರಭಾತ, ರಾಷ್ಟ್ರಬಂಧು ಸ್ವದೇಶಾಭಿಮಾನಿ ಕನ್ನಡ ಪತ್ರಿಕೆಗಳಲ್ಲಿ ದುಡಿದವರು.
ಐಕ್ಯಗಾನ, ಶತಮಾನ ಗಾನ ಕೊರಗ ಪುರ್ನನವ, ಮಕ್ಕಳ ವ್ಯಾಕರಣ ಗೀತೆ ಸಹಿತ ಕನ್ನಡದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಕವನಗಳಿಗೆ ಕವಿ ಇದಿನಬ್ಬರು ಜೀವ ತುಂಬಿದರು. 5 ಸಾವಿರಕ್ಕೂ ಹೆಚ್ಚುಬಾರಿ ಐಕ್ಯಗಾನವನ್ನು ಹಾಡಿದ್ದಿರಬಹುದು. ಕೊಡಗಿನ ಪಠ್ಯದಲ್ಲಿಹರಿಜನರ ಮೊರೆ ಪದ್ಯ ದಲಿತರ ಪರವಾದ ಮೊದಲ ಕವನವೆಂದೇ ವಾಖ್ಯಾನಿಸಲಾಗುತ್ತಿದೆ.
66ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೌರವ ಪಡೆದವರು. ಮಂಗಳೂರಲ್ಲಿ ಆ ಕಾಲಕ್ಕೆ ದಾಖಲೆ ಎನ್ನುವ ಮಟ್ಟಿಗೆ ಕನ್ನಡ ಮತ್ತು ತುಳುವಿನ ಸಮ್ಮೇಳನ ನಡೆಸಿ ಸಾಹಿತಿ ಜತೆಗೆ ಸಂಘಟಕರೂ ಆಗಿದ್ದರು. ಶ್ರೇಷ್ಠ ಶಿಕ್ಷರ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಏಕೀಕರಣ, ಪಂಪ ಸಹಿತ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

