ಮಕ್ಕಳ ದಾಖಲು ಬಳಿಕ ವಸತಿ ಶಾಲೆ ಪ್ರವೇಶ ಸ್ಥಗಿತಗೊಳಿಸಿದ್ರು!
ಮಂಗಳೂರು: ಪ್ರವೇಶ ಪರೀಕ್ಷೆ ನಡೆಸಿ ಶಾಲೆಗೆ ದಾಖಲಾತಿ ನಡೆಸಿದ್ದಾರೆ. ಈಗ ಅಗತ್ಯ ಮೂಲಸೌಕರ್ಯ ಇಲ್ಲ ಎಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿ ಎಂದರೆ ಹೇಗೆ?
ಪ್ರಸಕ್ತ ರಾಜ್ಯದ ವಸತಿ ಶಾಲೆಗಳಿಗೆ ದಾಖಲಾದ ಹಿಂದುಳಿದ ವಿದ್ಯಾರ್ಥಿಗಳು ಇಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ವಿವಿಧ ಜಿಲ್ಲೆಗಳಿಂದ ಶಿಕ್ಷಣ ಪಡೆಯಲು ವಸತಿ ಶಾಲೆ ಬಾಗಿಲು ತಟ್ಟಿದ ವಿದ್ಯಾರ್ಥಿಗಳೇ ಬಾಗಿಲು ತೆರೆದರೂ ಹೊರದಬ್ಬಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಹೊರಡಿಸಿದ ಸುತ್ತೋಲೆ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ.
ಪ್ರವೇಶ ಸ್ಥಗಿತ ಸೂಚನೆ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗಿದೆ. ಈ ಮಧ್ಯೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಮೇ 5ರಂದು ನಡೆದ ಸಭೆಯಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲದ 161 ವಸತಿ ಶಾಲೆಗಳಿಗೆ ವಿದ್ಯಾರ್ಥಿ ದಾಖಲಾತಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಸಚಿವರ ಈ ಸೂಚನೆ ವಸತಿ ಶಾಲೆಗಳಿಗೆ ತಲಪಿದ್ದು ಜೂ.3ರಂದು. ಆ ವೇಳೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ವಸ್ತುಶಃ ಕೊನೆಯ ಹಂತಕ್ಕೆ ಬಂದಿತ್ತು.
ಈ ಕಾರಣಕ್ಕೆ 2ನೇ ಹಂತದ ಕೌನ್ಸೆಲಿಂಗ್ ಮಾಡದಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅನಿವಾರ್ಯವಾದಲ್ಲಿ ಮಾತ್ರ 2ನೇ ಹಂತದ ಕೌನ್ಸೆಲಿಂಗ್ ನಡೆಸುವಂತೆ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದರು. ಈಗಾಗಲೇ ಆಯ್ಕೆಯಾದ 161 ಶಾಲೆಗಳ ವಿದ್ಯಾರ್ಥಿಗಳನ್ನು ತಲಾ 10ರಂತೆ ಸಮೀಪದ ಬೇರೆ ವಸತಿ ಶಾಲೆಗೆ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ.
ಶಾಲೆಗಳೇ ಇಲ್ಲದಿದ್ದಲ್ಲಿ..?: ಉತ್ತರಕನ್ನಡ ಜಿಲ್ಲೆಯಲ್ಲಿ 9 ವಸತಿ ಶಾಲೆಗಳಿದ್ದು, ಮೂಲಸೌಕರ್ಯ ಹೊಂದಿಲ್ಲ. ಹಾಗಾದರೆ ಈ ಜಿಲ್ಲೆಯಲ್ಲಿ ವಸತಿ ಶಾಲೆಗೆ ಪ್ರವೇಶ ಪಡೆದ ಮಕ್ಕಳನ್ನು ಎಲ್ಲಿಗೆ ಕಳುಹಿಸಬೇಕು ಎಂಬ ಪ್ರಶ್ನೆ ತಲೆದೋರಿದೆ. ಇದೇ ರೀತಿಯ ಪ್ರಕರಣ ಕೆಲವು ಜಿಲ್ಲೆಗಳಿದ್ದು, ಅಂಥ ಶಾಲೆ ಮಕ್ಕಳನ್ನು ಏನು ಮಾಡಬೇಕು ಎಂಬ ಬಗ್ಗೆ ಸುತ್ತೋಲೆಯಲ್ಲಿ ನಿರ್ದಿಷ್ಟ ಉಲ್ಲೇಖ ಇಲ್ಲ.
ವಸತಿ ಶಾಲೆಗಳ ಸ್ಥಿತಿಗತಿ ಕುರಿತು ಶಾಲಾರಂಭಕ್ಕೆ ಮೊದಲು ಕ್ರೈಸ್ ಮಾಹಿತಿ ಕಲೆಹಾಕದೆ ಎಡವಟ್ಟು ಮಾಡಿಕೊಂಡಿದೆ. ಪ್ರವೇಶ ಪ್ರಕ್ರಿಯೆಗೆ ಮುನ್ನವೇ ಇಂತಿಷ್ಟು ಶಾಲೆಗಳಿಗೆ ಮೂಲಸೌಕರ್ಯ ಕೊರತೆ ಕಾರಣಕ್ಕೆ ಪ್ರವೇಶ ಇರುವುದಿಲ್ಲ ಎಂದು ಮುಂಚಿತವಾಗಿ ಹೇಳಿದ್ದರೆ ವಿದ್ಯಾರ್ಥಿ, ಪೋಷಕರ ವೃಥಾ ಶ್ರಮ ತಪ್ಪುತ್ತಿತ್ತು. ಈಗ ಅಂತಿಮ ಕ್ಷಣದಲ್ಲಿ ಸುತ್ತೋಲೆ ಹೊರಡಿಸಿರುವುದರಿಂದ ವಿದ್ಯಾರ್ಥಿ, ಪೋಷಕರು ದಿಕ್ಕೇ ತೋಚದೆ ಕಂಗಾಲಾಗಿದ್ದಾರೆ.
9000
ಮಕ್ಕಳು ವಂಚಿತ?
ರಾಜ್ಯದಲ್ಲಿರುವ ಒಟ್ಟು ವಸತಿ ಶಾಲೆಗಳ ಸಂಖ್ಯೆ 545. ಪ್ರತಿ ಶಾಲೆಗೆ ತಲಾ 50 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಅದರಂತೆ ಆಯ್ಕೆಯೂ ನಡೆದಿದೆ. ಮೂಲಸೌಕರ್ಯ ಕೊರತೆ ಕಾರಣಕ್ಕೆ ಪ್ರವೇಶ ಸ್ಥಗಿತಗೊಳಿಸುವಂತೆ ಸೂಚಿಸಿದ್ದು 161 ಶಾಲೆಗಳಿಗೆ. ಅಂದರೆ ಉಳಿದ 384 ಶಾಲೆಗಳಿಗೆ ತಲಾ 10ರಂತೆ ವಿದ್ಯಾರ್ಥಿಗಳನ್ನು ಹೊಂದಾಣಿಕೆ ಮಾಡಬೇಕು. 161 ಶಾಲೆಗಳಿಗೆ ಪ್ರವೇಶ ಪಡೆದ 8050 ವಿದ್ಯಾರ್ಥಿಗಳನ್ನು ತಲಾ 10ರಂತೆ 384 ಶಾಲೆಗೆ ಹೊಂದಾಣಿಕೆ ಮಾಡಿದರೂ 3840 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಾಧ್ಯ. ಹಾಗಾದರೆ ಉಳಿದ 4210 ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂಬುದಕ್ಕೆ ಕ್ರೈಸ್ನಲ್ಲಿ ಸ್ಪಷ್ಟ ಉತ್ತರವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

