ದಕ್ಷಿಣ ಕನ್ನಡ

ಬ್ಯಾಂಕ್ ಚೆಕ್ ತಿದ್ದಿ ಲಕ್ಷಾಂತರ ರು. ವಂಚನೆ

Published On :

ಉಡುಪಿ: ಸಹಕಾರಿ ಬ್ಯಾಂಕ್‌ಗಳು ನೀಡಿದ್ದ ಚೆಕ್‌ಗಳನ್ನು ತಿದ್ದಿ ವ್ಯಕ್ತಿಯೊಬ್ಬ ಲಕ್ಷಾಂತರ ರು. ಲಪಟಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ನಾಗಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಶೀತಲ್ ಗೋಯಲ್ ಪ್ರಕರಣದ ಆರೋಪಿ. ಈತನಿಗೆ ಐಡಿಬಿಐ ಬ್ಯಾಂಕ್‌ನ ರು. 400 ಚೆಕ್ ನೀಡಿತ್ತು. ಈ ಚೆಕ್‌ನ್ನು ಗೋಯಲ್ ತಿದ್ದಿ ರು. 7,84,000 ಎಂದು ಬದಲಾಯಿಸಿ, ಅದನ್ನು ಮಾ. 1ರಂದು ಬ್ಯಾಂಕ್  ಆಫ್ ಬರೋಡಾದ ಉಡುಪಿ ಶಾಖೆಯಲ್ಲಿ ನಗದೀಕರಿಸಿದ್ದ. ಇನ್ನೊಂದು ಪ್ರಕರಣದಲ್ಲಿ ನಾಗಪುರದ ನವೋದಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಇದೇ ಗೋಯಲ್‌ಗೆ ಐಡಿಬಿಐ ಬ್ಯಾಂಕ್‌ನ ರು. 500 ರ ಚೆಕ್ ನೀಡಿತ್ತು. ಈ ಚೆಕ್‌ನ್ನು ಗೋಯಲ್ ತಿದ್ದಿ ರು. 7,65,500 ಎಂದು ಬದಲಾಯಿಸಿ ಫೆ. 25ರಂದು ಉಡುಪಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಗದೀಕರಿಸಿದ್ದಾನೆ.  ಇದೀಗ ಪ್ರಕರಣ ಬಹಿರಂಗವಾಗಿ ಐಡಿಬಿಐ ಬ್ಯಾಂಕ್‌ನ ಉಡುಪಿ ಶಾಖೆ ವ್ಯವಸ್ಥಾಪಕ ಕೆ. ರಾಮಕೃಷ್ಣ ರಾವ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಸಂಘಟನೆ ಕಾರ್ಯ ತೃಪ್ತಿಕರವಾಗಿಲ್ಲ: ಶಾಸಕಿ
ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಸಂಘಟಿಸುವಲ್ಲಿ ಕಾರ್ಯಕರ್ತರ ಕೆಲಸ ತೃಪ್ತಿಕರವಾಗಿಲ್ಲ. ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಯಾದರೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲವು ಕಟ್ಟಿಟ್ಟ ಬುತ್ತಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.  ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಈಗಲೇ ತಯಾರಾಗಬೇಕು ಎಂದು ಅವರು ಕಿವಿಮಾತು ಹೇಳಿದರು. ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿದರು. ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಸ್. ಮಹಮ್ಮದ್‌ನ್ನು ಗೌರವಿಸಲಾಯಿತು. ಅಭಿವೃದ್ಧಿ ಕಾರ್ಯಗಳನ್ನು ತಾ.ಪಂ. ಸದಸ್ಯೆ ಝೊಹರಾ ಅಹಮದ್ ವಿವರಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಮೈದೀನ್ ಅರ್ಶದ್ ದರ್ಬೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಪ್ರವೀಣ್ ಚಂದ್ರ ಆಳ್ವ ಇದ್ದರು.

ಬಾಂಜಾರು ಮಲೆಯಲ್ಲಿ ಆರೋಗ್ಯ ಶಿಬಿರ
ಮಂಗಳೂರು: ಬೆಳ್ತಂಗಡಿ ನೆರಿಯ ಗ್ರಾಮ ಪಂಚಾಯ್ತಿ ವತಿಯಿಂದ ಬಾಂಜಾರು ಮಲೆ ಪ್ರದೇಶದ ಫಲಾನುಭವಿಗಳಿಗೆ 20 ಹೊಲಿಗೆ ಮಿಷನ್ ವಿತರಣೆ ಹಾಗೂ ನಿವಾಸಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಬಾಂಜಾರು ಮಲೆ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ವಿವಿಧ ಕಾರ್ಯಕ್ರಮ ಮತ್ತು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಬೆಳ್ತಂಗಡಿ ಆರೋಗ್ಯಾಧಿಕಾರಿಗಳ ವೈದ್ಯಕೀಯ ತಂಡ ಭೇಟಿ ನೀಡಿ ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಿದೆ.ಇಲ್ಲಿಗೆ ಆಗಬೇಕಾಗಿರುವ ಮೂಲ ಸೌಲಭ್ಯಗಳ ಬಗ್ಗೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅಂದಾಜು ಪಟ್ಟಿ ತಯಾರಿಸಿದ್ದಾರೆ.ವಿವಿಧ ಇತರೆ ಇಲಾಖೆಗಳಿಂದ ಸ್ಥಳೀಯರಿಗೆ ಅವಶ್ಯಕವಾಗಿ ಕೂಡಲೇ ಒದಗಿಸಬೇಕಾದ ಸೌಲಭ್ಯಗಳ ಬಗ್ಗೆ ಪ್ರಸ್ತಾವನೆ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ. ಮುಂದೆ ಕೈಗೊಳ್ಳುವ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಇಂದು
ಬೆಳ್ತಂಗಡಿ: ಉಜಿರೆ ಮಲ್ಜಅ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ನೀಡುತ್ತಿರುವ ಆಯ್ದ 600ಕ್ಕೂ ಹೆಚ್ಚಿನ ನಿರ್ಗತಿಕರಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ, ದಅವಾ ಕಾಲೇಜು ಉದ್ಘಾಟನೆ ಮತ್ತು ಮಾಸಿಕ ಧಿಕ್ಸ್ ಸ್ವಲಾತ್ ಕಾರ್ಯಕ್ರಮ ಜೂ.15ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಅಖಿಲ ಭಾರತ ಸುನ್ನೀ ವಿದ್ವಾಂಸ ಒಕ್ಕೂಟದ ಮಹಾ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮಸ್ಲಿಯಾರ್ ಕಾಂದಪುರಂ, ಮಲ್ಹರ್ ಶಿಕ್ಷಣ ಸಂಸ್ಥೆಯ ಸಾರಥಿ ಉಮರುಲ್ ಫಾರೂಕ್, ಸುನ್ನೀ ಉಲೆಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಉಡುಪಿ ಜಿಲ್ಲಾ ಸಂಯುಕ್ತ ಖಾಝೀ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾತ್ ಸಹಾಯಕ ಖಾಝಿ ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಗುರುವಾಯನಕೆರೆ, ಮಂಜನಾಡಿ ಅಲ್ ಮದೀನಾ ಸಂಸ್ಥೆಯ ಅಧ್ಯಕ್ಷ, ಸಮಸ್ತ ಮುಶಾವರ ಸಮಿತಿಯ ಶೈಖುನಾ ಅಬ್ಬಾಸ್ ಮಸ್ಲಿಯಾರ್ ಮಂಜನಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಬೆಳ್ಮಣ್: ಚರಂಡಿಗಿಳಿದ ಕಾಲೇಜ್ ಬಸ್
ಕಾರ್ಕಳ:  ಕಾಲೇಜ್ ಬಸ್ ಇನ್ನೊಂದು ವಾಹನಕ್ಕೆ ದಾರಿ ಬಿಟ್ಟುಕೊಡುವ ಭರದಲ್ಲಿ ಚರಂಡಿಗಿಳಿದಿದ್ದು, ಮಣ್ಣಿನಲ್ಲಿ ಹೂತ ಘಟನೆ ಶುಕ್ರವಾರ ನಡೆದಿದೆ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಬಸ್ ಬೆಳ್ಮಣ್ ಜಂತ್ರ ರಸ್ತೆ ಬಳಿ ಸ್ಕೂಟರ್‌ಗೆ ದಾರಿ ಬಿಟ್ಟು ಕೊಡುವ ಭರದಲ್ಲಿ ಚರಂಡಿಗಿಳಿದು, ಬಸ್ ಎತ್ತರದ ಪ್ರದೇಶಕ್ಕೆ ನುಗ್ಗಿ ಬದಿಯಲ್ಲಿದ್ದ ಮಣ್ಣಿನ ರಾಶಿಯ ಮಧ್ಯೆ ಹೂತು ಹೋಯಿತು. ಸ್ಥಳೀಯರ ಸಹಕಾರದಿಂದ ಬಸ್ ತೆರವುಗೊಳಿಸಲಾಯಿತು.

ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ ಇಂದಿನಿಂದ
ಮಂಗಳೂರು: ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆಯನ್ವಯ ಸರ್ಕಾರವು ದ.ಕ. ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಎಲ್ಲ ಯಾಂತ್ರಿಕ, ಸಾಂಪ್ರದಾಯಿಕ ದೋಣಿಗಳ ಮೂಲಕ ಮಾಡುವ ಮೀನುಗಾರಿಕೆ ಚಟುವಟಿಕೆಯನ್ನು ಜೂ. 15 ರಿಂದ ಆ. 10ರವರೆಗೆ ನಿಷೇಧಿಸಿದೆ.
ಒಟ್ಟು 57 ದಿನಗಳ ನಿಷೇಧದಲ್ಲಿ ಮೀನುಗಾರರು ಮೀನುಗಾರಿಕೆ ಮಾಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಆ ಸಂದರ್ಭ ನಡೆಯುವ ಅನಾಹುತಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಸರ್ಕಾರ ಯಾವುದೇ ಪರಿಹಾರ ನೀಡಲಾಗುವುದಿಲ್ಲ.
ಆದೇಶ ಉಲ್ಲಂಘಿಸುವ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಸರ್ಕಾರ ನೀಡುವ ಡೀಸೆಲ್ ಇನ್ನಿತರ ಸೌಲಭ್ಯಗಳನ್ನು ರದ್ದುಗೊಳಿಸಲಾಗುವುದು. ಮೀನುಗಾರಿಕೆ ನಿಷೇಧದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಮೀನುಗಾರರ ಹಿತದೃಷ್ಟಿಯಿಂದ ಹೊರಡಿಸಲಾಗಿದೆ. ಆದ್ದರಿಂದ ಮೀನುಗಾರರು ಸರ್ಕಾರದೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿದೆ.

ಲಾಡ್ಜ್‌ನಲ್ಲಿದ್ದ ಯುವ ಜೋಡಿ ಪೊಲೀಸ್ ವಶಕ್ಕೆ
ಬಂಟ್ವಾಳ:  ಬಿ.ಸಿ. ರೋಡ್ ಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ವಸತಿಗೃಹವೊಂದರ ಕೊಠಡಿಯಲ್ಲಿ ಯುವಕ ಹಾಗೂ ಕಾಲೇಜ್ ವಿದ್ಯಾರ್ಥಿನಿ ಸ್ಥಳೀಯರ ನೆರವಿನಿಂದ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಶನಿವಾರ ನಡೆದಿದೆ.  ಬಿ.ಸಿ.ರೋಡ್ ಸಮೀಪದ ಮೊಡಂಕಾಪು ನಿವಾಸಿಯಾಗಿರುವ ಯುವಕ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರಿತ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿನಿಯರಿಗೆ ನೃತ್ಯ ತರಬೇತಿಯನ್ನೂ ನೀಡುತ್ತಿದ್ದನು ಎನ್ನಲಾಗಿದೆ. ಇಲ್ಲಿನ ಕಲ್ಲಡ್ಕ ನಿವಾಸಿಯಾಗಿರುವ ವಿದ್ಯಾರ್ಥಿನಿ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಅಭ್ಯಸಿಸುತ್ತಿದ್ದು, ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕಾಲೇಜಿಗೆ ಹೋಗುವ ಬದಲಾಗಿ ಕೈಯಲ್ಲೊಂದು ಮೊಬೈಲ್, ಬ್ಯಾಗ್ ಹಿಡಿದುಕೊಂಡು ಸಮವಸ್ತ್ರದಲ್ಲೇ ಇಲ್ಲಿನ ಲಾಡ್ಜ್‌ಗೆ ಯುವಕನೊಂದಿಗೆ ಬಂದಿದ್ದಳು.   ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನಗರ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಧಾವಿಸಿ ವಸತಿಗೃಹದ ಕೊಠಡಿಯಲ್ಲಿದ್ದ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು.  ಇವರಿಬ್ಬರ ಹೆತ್ತವರನ್ನು ಠಾಣೆಗೆ ಕರೆಸಿದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ರೈಲು: ಕರಾವಳಿಗೆ ನ್ಯಾಯ ನೀಡಲು ಡೀವಿಗೆ ಮನವಿ
ಮಂಗಳೂರು: ರೇಲ್ವೆ ಸವಲತ್ತು ಮತ್ತು ಸಂಪರ್ಕಗಳ ವಿಷಯದಲ್ಲಿ ಕರಾವಳಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.  ಈ ಬಾರಿಯಾದರೂ ನ್ಯಾಯ ಒದಗಿಸುವಂತೆ ಕನ್ನಡ ಕಟ್ಟೆ ಸಂಘ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮನವಿ ಸಲ್ಲಿಸಿದೆ. ಫಾಲ್ಘಾಟ್ ವಿಭಾಗವನ್ನು ಮಂಗಳೂರು ವಿಭಾಗವನ್ನಾಗಿಸಿ, ಕೊಂಕಣ ರೈಲ್ವೆಯೊಂದಿಗೆ ಜೋಡಿಸಬೇಕು. ಮಂಗಳೂರಿನಿಂದ ಮುಂಬೈ ಹಾಗೂ ಇನ್ನಿತರ ಭಾಗಕ್ಕೆ ತೆರಳುವ ರೈಲೊಂದಕ್ಕೆ ಕುಡ್ಲ ಎಕ್ಸ್‌ಪ್ರೆಸ್ ಹೆಸರಿಡಬೇಕು. ಪಡೀಲ್, ಮಹಾಕಾಳಿ ಪಡ್ಪು ರೈಲ್ವೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಮಂಗಳೂರಿನಿಂದ ಹೊರಡುವ ರೈಲುಗಳಲ್ಲಿ ಮಂಗಳೂರು ಮತ್ತು ಕರ್ನಾಟಕದ ಕರಾವಳಿ ಜನರಿಗೆ ಹೆಚ್ಚು ಸೀಟು ಲಭಿಸುವಂತೆ ಮಾಡಬೇಕು. ರೈಲ್ವೆ ಸಮಿತಿ ಹಾಗೂ ಸಲಹಾ ಮಂಡಳಿಗಳಿಗೆ ಜನಪ್ರತಿನಿಧಿ ಆಯ್ಕೆ ಮಾಡುವಾಗ ರೈಲ್ವೆ ಸಮಸ್ಯೆ, ರೀತಿ-ನೀತಿಗಳ ಅರಿವಿದ್ದವರನ್ನು ನೇಮಕ ಮಾಡಬೇಕು ಎಂದು ಸಂಘ ಅಧ್ಯಕ್ಷ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಳ್ಯ: ಪ್ರಜ್ಞಾ ಸಾಧಕ ಪ್ರಶಸ್ತಿ ವಿತರಣೆ ಇಂದು
ಸುಳ್ಯ: ಸುಳ್ಯದ ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ ನಡೆಸಿದ 'ಸದಾ ಸಿದ್ಧರಾಗಿರೋಣ' ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿವಿಧ ಜಿಲ್ಲೆಗಳ 100 ವಿದ್ಯಾರ್ಥಿಗಳನ್ನು ಜೂ.15ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಜ್ಞಾ ಸಾಧಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ ಎಂದು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ತರಬೇತಿ ಸಂಚಾಲಕ ಎಂ.ಜೆ. ಶಶಿಧರ ಹೇಳಿದರು. ಈ ಕುರಿತು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ವಿದ್ಯಾರ್ಥಿಗಳಿಗೆ ಪ್ರಜ್ಞಾ ಸಾಧಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ್ಷೇತ ಶಿಕ್ಷಣಾಧಿಕಾರಿಗಳಾದ ಮಲ್ಲೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹೈದರಾಬಾದ್‌ನ ಡಿಆರ್‌ಡಿಒ ವಿಜ್ಞಾನಿ ಮಹಾದೇವ ಭಟ್ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.  ಸುದ್ದಿಗೋಷ್ಠಿಯಲ್ಲಿ ಪ್ರಜ್ಞಾ ಎಜುಕೇಶನ್ ಸಂಸ್ಥೆಯ ಶಿಕ್ಷಕರಾದ ಪ್ರಸಾದ್ ಸುಳ್ಳಿ, ಕಾರ್ತಿಕ್ ಕೊಕ್ಕಡ ಮೊದಲಾದವರು ಉಪಸ್ಥಿತರಿದ್ದರು.

ಹೃದ್ರೋಗ, ಮಧುಮೇಹ ಉಚಿತ ತಪಾಸಣೆ ಇಂದು
ಸುಳ್ಯ: ಮಂಗಳೂರಿನ ಹಾರ್ಟ್‌ಸ್ಕ್ಯಾನ್ ಫೌಂಡೇಶನ್, ಒಮೇಗಾ ಆಸ್ಪತ್ರೆ, ಸುಳ್ಯದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಜೂ.15ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರಗೆ ಹೃದ್ರೋಗ, ಮಧುಮೇಹ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಇದೇ ವೇಳೆ ಆಸ್ಪತ್ರೆಯಲ್ಲಿ ಹೃದ್ರೋಗ ಕೇಂದ್ರದ ಉದ್ಘಾಟನೆ ನಡೆಯಲಿದೆ.
 ಮಕ್ಕಳ ತಜ್ಞ ಡಾ. ಶ್ರೀಕೃಷ್ಣ ಹೃದ್ರೋಗ ಕೇಂದ್ರವನ್ನು ಉದ್ಘಾಟಿಸಲಿದ್ದು, ಐಎಂಎ ಅಧ್ಯಕ್ಷ ಡಾ. ರಂಗಯ್ಯ, ಮಂಗಳೂರು ಒಮೇಗಾ ಆಸ್ಪತ್ರೆಯ ಡಾ.ಕೆ. ಮುಕುಂದ್, ಆಡಳಿತಾಧಿಕಾರಿ ಭಾರದ್ವಾಜ್, ಹೃದ್ರೋಗ ತಜ್ಞ ಡಾ. ವಿನಾಯಕ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಒಮೇಗಾ ಆಸ್ಪತ್ರೆಯ ಪಿಆರ್‌ಒ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಳ್ಳುವವರು ಮಾಹಿತಿಗಾಗಿ 08257-230411, 9449662419ನ್ನು ಸಂಪರ್ಕಿಸಿ.

ಪುತ್ತೂರು: ಸಂಸದ ನಳಿನ್ ಕುಮಾರ್ ಭೇಟಿ ನಾಳೆ
ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲು ಪುತ್ತೂರು ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ಸೋಮವಾರ ಗ್ರಾಮ ಭೇಟಿ ಮತ್ತು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ ತಿಳಿಸಿದ್ದಾರೆ.
ಸಂಸದರಾದ ನಳಿನ್ ಕುಮಾರ್ ಸೋಮವಾರ ಬೆಳಗ್ಗೆ ಪುತ್ತೂರಿನ ಬಿಜೆಪಿ ಕಚೇರಿಗೆ ಆಗಮಿಸಿ 9.30ರಿಂದ 10.30ತನಕ ಸಾರ್ವಜನಿಕರ ಭೇಟಿಗೆ ಲಭ್ಯರಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಅವರು ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಲಿದ್ದಾರೆ. 12 ಗಂಟೆಗೆ ಪಡ್ನೂರು ಗ್ರಾಮದ ಕುಂಜಾರು ದೇವಸ್ಥಾನ ಭೇಟಿ, ಅಪರಾಹ್ನ 2.30ಕ್ಕೆ ನಿಡ್ಪಳ್ಳಿ ಗ್ರಾಮ, 4 ಗಂಟೆಗೆ ಪಾಣಾಜೆ ಗ್ರಾಮ, ಸಂಜೆ 5 ಗಂಟೆಗೆ ವಿಟ್ಲಕ್ಕೆ ಹಾಗೂ ರಾತ್ರಿ 7ಗಂಟೆಗೆ ನರಿಮೊಗ್ರು ಗ್ರಾಮ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣಿಯೂರು ಪದವಿ ಕಾಲೇಜು ಸ್ಥಳಾಂತರವಿಲ್ಲ: ಅಂಗಾರ
ಪುತ್ತೂರು: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಣಿಯೂರು ಪ್ರಥಮ ದರ್ಜೆ ಕಾಲೇಜನ್ನು ಬೆಳಂದೂರಿಗೆ ಸ್ಥಳಾಂತರಿಸುವ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸುಳ್ಯ ಶಾಸಕ ಎಸ್. ಅಂಗಾರ ಸ್ಪಷ್ಟಪಡಿಸಿದ್ದಾರೆ.  ಕಾಣಿಯೂರಿನಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಮಂಜೂರಾತಿಗೆ ತಾನು ಪ್ರಯತ್ನ ನಡೆಸಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗಿದೆ. ರಾಜಕೀಯ ಪ್ರೇರಿತ ದುರುದ್ದೇಶದಿಂದ ಬೆಳಂದೂರಿನಲ್ಲಿ 5 ಎಕ್ರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕಾಲೇಜಿಗೆ ಸಿ.ಪಿ. ಜಯರಾಮ ಗೌಡ ಅಧ್ಯಕ್ಷರು ಹಾಗೂ ಟಿ.ಎಸ್. ಆಚಾರ್ಯ ಕಾರ್ಯದರ್ಶಿಯನ್ನು ಒಳಗೊಂಡು ನ್ಯೂ ಮಾಡೆಲ್ ಪ್ರಥಮ ದರ್ಜೆ ಕಾಲೇಜು ಸಮಿತಿಯನ್ನು ಅನಧಿಕೃತವಾಗಿ ರಚಿಸಲಾಗಿದ್ದು, ಈ ಸಮಿತಿಗೆ ಯಾವ ಇಲಾಖೆಯಿಂದಲೂ ಅನುಮೋದನೆ ನೀಡಲಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಗ ಅತಿಕ್ರಮಿಸಿ ಮನೆ ನಿರ್ಮಾಣ; ತನಿಖೆಗೆ ಆದೇಶ
ಉಪ್ಪಿನಂಗಡಿ: ಇಲ್ಲಿನ ಕೋಡಿಂಬಾಳ ಗ್ರಾಮದ ಮಾಲೇಶ್ವರ ಎಂಬಲ್ಲಿ ಮಹಿಳೆಯೊಬ್ಬರ ಜಮೀನಿನನ್ನು ಅತಿಕ್ರಮಿಸಿ ಸ್ಥಳೀಯರಿಬ್ಬರು ಮನೆ ನಿರ್ಮಿಸಿರುವ ಬಗ್ಗೆ ಮಹಿಳೆ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವರಿಗೆ ದೂರು ನೀಡಿದ್ದರು. ಈ ಮೇರೆಗೆ ತಾ.ಪಂ. ಮುಖ್ಯ ಕಾಯರ್ಯನಿರ್ವಹಣಾಧಿಕಾರಿ ಹಾಗೂ ಕಡಬ ವಿಶೇಷ ತಹಸೀಲ್ದಾರ್ ಜಂಟಿ ತನಿಖೆ ನಡೆಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಆದೇಶ ನೀಡಿದ್ದಾರೆ.  ಕೋಡಿಂಬಾಳ ಗ್ರಾಮದ ಮಾಲೇಶ್ವರ ಪಟ್ಟೆ ನಿವಾಸಿ ದಿ. ಜಾನ್ ರೋಡ್ರಿಗಸ್ ಪತ್ನಿ ಮೇರಿ ರೋಡ್ರಿಗಸ್ ತಮಗೆ ಸೇರಿದ್ದ ಸರ್ವೆ ನಂ. 13್ಗ13ರಲ್ಲಿ 0.82 ಸೆಂಟ್ ಜಾಗವನ್ನು ಸ್ಥಳೀಯರಿಬ್ಬರು ಅತಿಕ್ರಮಿಸಿ ಅನಧಿಕೃತವಾಗಿ ಮನೆ ನಿರ್ಮಿಸಿದ್ದಾರೆಂದು ರಾಜ್ಯ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್‌ಗೆ ದೂರು ಸಲ್ಲಿಸಿದ್ದರು.  ಅನಧಿಕೃತವಾಗಿ ನಿರ್ಮಿಸಿರುವ ಮನೆಗೆ ಗ್ರಾ.ಪಂ. ಪರವಾನಗಿ ನೀಡಿದೆಯೇ ಇಲ್ಲವೇ? ಮನೆ ಕಂದಾಯ ಪಾವತಿ ಮಾಡಿದ್ದಾರೆಯೇ ಎಂಬ ಬಗ್ಗೆ ಕೂಲಕಂಷ ತನಿಖೆ ನಡೆಸುವಂತೆ ಸಚಿವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಯುವಕನಿಗೆ ಹಲ್ಲೆ: ಖಂಡನೆ
ಉಡುಪಿ: ಕಾರ್ಕಳದಲ್ಲಿ ಕಿಡಿಗೇಡಿಗಳು ಯುವಕನ ಮೇಲೆ ನಡೆಸಿದ ಅಮಾನವೀಯ ಹಲ್ಲೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಖಂಡಿಸಿದೆ.ಯುವತಿಯೊಬ್ಬಳನ್ನು ಬಳಸಿ ಸುಧೀರ್ ರಾಣೆ ಎಂಬ ಯುವಕನನ್ನು ಇಲ್ಲಿನ ಬಂಗ್ಲೆಗುಡ್ಡೆ ಎಂಬ ಸ್ಥಳಕ್ಕೆ ಕರೆಸಿ ಕೆಲವು ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಅವರ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪಿ. ವಿಲಾಸ್ ನಾಯಕ್ ಆಗ್ರಹಿಸಿದ್ದಾರೆ.  
 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂಥ ಘಟನೆಗಳು ಪ್ರತಿನಿತ್ಯ ನಡೆಯತೊಡಗಿದ್ದು ಕಾಂಗ್ರೆಸಿಗರು ಈ ರೀತಿಯ ಸಮಾಜಘಾತುಕರಿಗೆ ಬೆಂಬಲ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಈ ಘಟನೆಯಿಂದ ಪೊಲೀಸ್ ಇಲಾಖೆ ಕೂಡಲೆ ಎಚ್ಚೆತ್ತು ಎಲ್ಲಾ ದುಷ್ಕರ್ಮಿಗಳನ್ನೂ ಬಂಧಿಸಿ ಕಾರ್ಕಳದಲ್ಲಿ ಕೆಡುತ್ತಿರುವ ಕಾನೂನು ಸುವ್ಯವಸ್ಥೆ ಸರಿಪಡಿಸಬೇಕಿದೆ ಎಂದು ನಾಯಕ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಸಮ್ಮೇಳನ ಅಧ್ಯಕ್ಷಗೆ ಆಹ್ವಾನ
ಉಡುಪಿ:  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 20, 21ರಂದು ಇಲ್ಲಿನ ಪೂರ್ಣಪ್ರಜ್ಞಾ ಸಭಾಭವನದಲ್ಲಿ ನಡೆಯಲಿರುವ 9ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ರಾಮದಾಸ್ ಅವರನ್ನು ಶನಿವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಸಮ್ಮೇಳನ ಸ್ವಾಗತ ಸಮಿತಿ ಪದಾಧಿಕಾರಿಗಳು- ಸದಸ್ಯರು ದೊಡ್ಡಣಗುಡ್ಡೆಯಲ್ಲಿರುವ ಪ್ರೊ.ರಾಮದಾಸ್ ನಿವಾಸಕ್ಕೆ ತೆರಳಿ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ವೀಳ್ಯ, ಶಾಲು, ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಶಾಧಿಕಾರಿ ಸುಬ್ರಹ್ಮಣ್ಯ ಬಾಸ್ರಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರ. ಸಂಚಾಲಕ ಉಪೇಂದ್ರ ಸೋಮಯಾಜಿ, ಪದಾಧಿಕಾರಿಗಳಾದ ಮುರಳಿ ಕಡೆಕಾರು, ನಾರಾಯಣ ಮಡಿ, ಪ್ರೊ. ಮಾಧವಿ ಭಂಡಾರಿ, ಡಾ.ಕೃಷ್ಣಮೂರ್ತಿ, ಜನಾರ್ದನ ಕೊಡವೂರು, ರವಿರಾಜ ಎಚ್.ಪಿ, ರಾಘವೇಂದ್ರ ಪ್ರಭು ಕರ್ವಾಲು ಹಾಗೂ ರಾಮದಾಸರವರ ಕುಟುಂಬಸ್ಥರು ಇದ್ದರು.

   ಕಡತ ಕಾಲಮಿತಿ ವಿಲೇವಾರಿಗೆ ಶಾಸಕ ಸೂಚನೆ
ಉಡುಪಿ: ಶಾಸಕ ಪ್ರಮೋದ್ ಮಧ್ವರಾಜ್ ಶುಕ್ರವಾರ ತಾಲೂಕು ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ವಿಷಯ, ನಿರ್ವಾಹಕವಾರು ಪರಿಶೀಲಿಸಿದರು. ಸರ್ವೇಗೆ ಬಾಕಿ ಇರುವ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.  ನಂತರ ಅವರು ಹಳೆ ತಾಲೂಕು ಕಚೇರಿಯಲ್ಲಿರುವ ಆರ್‌ಟಿಸಿ ಕೌಂಟರ್, ಭೂಮಿ ಕಿಯೋನಿಕ್ಸ್‌ಗೆ ಭೇಟಿ ನೀಡಿ, ಪಹಣಿ ಪತ್ರ ಬದಲಾವಣೆಗೆ ಅರ್ಜಿ ನೋಂದಣಿಯಾದ 30 ದಿನಗಳ ಕಾಲಾವಕಾಶದ ನಂತರ 10 ದಿನದೊಳಗೆ ಸಾರ್ವಜನಿಕರಿಗೆ ಪಹಣಿ ಪತ್ರ ನೀಡುವಂತೆ ತಹಸೀಲ್ದಾರರಿಗೆ ತಿಳಿಸಿದರು. ಆರ್‌ಟಿಸಿ ಕೌಂಟರ್‌ನಲ್ಲಿ ಸಾರ್ವಜನಿಕರು ದಿನವಿಡೀ ಸರದಿ ಸಾಲಿನಲ್ಲಿ ನಿಂತಿದ್ದವರನ್ನು ವೀಕ್ಷಿಸಿದ ಶಾಸಕರು, ಸ್ಥಳದಲ್ಲೇ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್‌ಗೆ ದೂರವಾಣಿ ಕರೆ ಮಾಡಿ ಉಡುಪಿ ತಾಲೂಕು ಕಚೇರಿಯ ಭೂಮಿ ಕೇಂದ್ರಕ್ಕೆ ಒಂದು ಹೆಚ್ಚುವರಿ ಕೌಂಟರ್ ಪ್ರಾರಂಭಿಸಲು ಮನವಿ ಸಲ್ಲಿಸಿದರು ಮತ್ತು ಸಚಿವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಸಮವಸ್ತ್ರ, ಪುಸ್ತಕ ವಿತರಣೆ
ಕಾಪು: ಇಲ್ಲಿನ ಬೆಳ್ಳೆ ಚರ್ಚ್ ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಸಮವಸ್ತ್ರ, ನೋಟ್ ಪುಸ್ತಕ, ಸಹಾಯಧನ ವಿತರಿಸಲಾಯಿತು. ಜಿ.ಪಂ. ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಲೆ ಸಂಚಾಲಕ ಫಾ. ಜೋಸ್ವಿ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಎ.ಕೆ. ಆಳ್ವ, ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಉಡುಪಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಶಿಕ್ಷಣ ಸಂಯೋಜಕ ಸದಾನಂದ, ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಚಂದ್ರಕಲಾ ಬಿ.ಇ., ಶಿಕ್ಷಕ ಪದ್ಮನಾಭ ನಾಯಕ್, ಯಕ್ಷಗಾನ ಸಂಘಟಕ ವಿಠಲ್ ನಾಯಕ್ ಇದ್ದರು.
ಮುಖ್ಯ ಶಿಕ್ಷಕ ಸಿಲ್ವೆಸ್ಟರ್ ಮತಾಯಸ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಲಲಿತಾ ಪ್ರಭಾವತಿ ವಂದಿಸಿದರು. ನರಸಿಂಹ ನಾಯಕ್ ಕಾರ್ಯಕ್ರಮ ನಿರೂಪಿಸಿದರು.  

ಮೂಲ್ಕಿ: ಮಹಿಳೆ ಆತ್ಮಹತ್ಯೆ
ಮೂಲ್ಕಿ: ಇಲ್ಲಿನ ಮಾನಂಪಾಡಿಯ ಕೋಟೆಕೇರಿ ನಿವಾಸಿ ಹೇಮಲತಾ ಸುವರ್ಣ (55) ಇತ್ತೀಚೆಗೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ಮೂರ್ಛೆ ರೋಗದಿಂದ ಬಳಲುತ್ತಿದ್ದ ಇವರು ಕೋಟೇಕೇರಿಯ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮೃತರ ಅಣ್ಣ ಸುರೇಶ್ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ವೃದ್ಧೆ ಸಾವು: ಮೂಲ್ಕಿ ಠಾಣೆ ವ್ಯಾಪ್ತಿಯ ಉಲ್ಲಂಜೆಯಲ್ಲಿ ಇತ್ತೀಚೆಗೆ ಬಸ್ ಕಾಯುತ್ತ ನಿಂತಿದ್ದಾಗ ಬಳಲಿ ಬಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಶಿರ್ವದ ಶಿವರಾಮ ಆಚಾರ್ಯ ಎಂಬವರ ತಾಯಿ ಮೀನಾಕ್ಷಿ(70) ಮೃತರು. ಇವರು ಉಲ್ಲಂಜೆಯ ರಾಜರತ್ನಾಪುರದ ತಮ್ಮ ಸಂಬಂಧಿಕರ ಮನೆಗೆ ಬಂದು ವಾಪಸ್ ಊರಿಗೆ ಹೋಗಲೆಂದು ಉಲ್ಲಂಜೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ತೀವ್ರ ಬಳಲಿಕೆಯಿಂದ ಕುಸಿದು ಬಿದ್ದು ಗಾಯಗೊಂಡಿದ್ದರು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.