ರೇಲ್ವೆ ಬೇಡಿಕೆ ಪಟ್ಟಿಯಲ್ಲಿ ಸುಳ್ಯ ಕಡೆಗಣನೆ: ಆಕ್ರೋಶ
ಸುಳ್ಯ: ಮಂಗಳೂರು ರೇಲ್ವೆ ವಲಯ ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟು ಸಂಸದ ನಳಿನ್ ಕುಮಾರ್ ಕುಟೀಲು ನೇತೃತ್ವದ ನಿಯೋಗ ರೇಲ್ವೆ ಸಚಿವ ಡಿ.ವಿ. ಸದಾನಂದ ಗೌಡರನ್ನು ಭೇಟಿಯಾಗಿ ಮನವಿ ಮಾಡಿದ್ದು, ಇದರಲ್ಲಿ ಸುಳ್ಯದ ಬೇಡಿಕೆಯನ್ನು ಕಡೆಗಣಿಸಿರುವ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂಸದರಿಗೆ ಸುಳ್ಯಕ್ಕೆ ರೇಲ್ವೆ ಇಲ್ಲದ್ದು ಒಂದು ಸಮಸ್ಯೆ ಎಂದು ಅನ್ನಿಸಲೇ ಇಲ್ಲ. ಈ ಭಾಗದ ಪ್ರತಿನಿಧಿಯಾದ ಅವರು ಬೇಡಿಕೆ ಪಟ್ಟಿಯಲ್ಲಿ ಇಲ್ಲಿನ ಸಮಸ್ಯೆ ಕುರಿತು ಪ್ರತಿನಿಧಿಸಬೇಕಿತ್ತು. ನಿಲ್ದಾಣ ಮೇಲ್ದರ್ಜೆಗೇರಿಸುವುದು ಮತ್ತಿತರ ಸಣ್ಣಪುಟ್ಟ ಸಮಸ್ಯೆಗಳನ್ನು ಬೇಡಿಕೆಯಲ್ಲಿ ಸಲ್ಲಿಸಲಾಗಿದೆ. ರೇಲ್ವೆ ಸಚಿವರು ಇಲ್ಲಿನವರೇ ಆಗಿರುವುದರಿಂದ ಅವರಾದರೂ ಸುಳ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಅರ್ಥಶಾಸ್ತ್ರಜ್ಞ ಡಾ. ಪ್ರಭಾಕರ ಶಿಶಿಲ ಒತ್ತಾಯಿಸಿದ್ದಾರೆ. 2011- 12ನೇ ಸಾಲಿನ ರೇಲ್ವೆ ಬಜೆಟ್ನಲ್ಲಿ ಮಂಗಳೂರಿನಿಂದ ಮೈಸೂರಿಗೆ ಸುಳ್ಯ- ಮಡಿಕೇರಿ ಮೂಲಕ ರೈಲು ಹಾದಿ ಮಂಜೂರಾಗಿದೆ. ಮೈಸೂರಿನಿಂದ ಕುಶಾಲನಗರದವರಗೆ ಸರ್ವೇ ಕೂಡಾ ಆಗಿದೆ. ಈ ಕುರಿತು ಸಚಿವರಿಗೆ ಬೇಡಿಕೆ ಸಲ್ಲಿಸಬೇಕಿತ್ತು. ಇದನ್ನು ಅವರು ಯಾಕೆ ಕಡೆಗಣಿಸಿದ್ದಾರೋ ಎಂದವರು ಪ್ರಶ್ನಿಸಿದ್ದಾರೆ. ಸುಳ್ಯಕ್ಕೆ ಅಗತ್ಯವಿರುವುದನ್ನು ನೀಡುವುದಿಲ್ಲ, ಯಾವುದು ಅಗತ್ಯವಿಲ್ಲವೋ ಅದನ್ನು ಇಲ್ಲಿಗೆ ಹೇರುತ್ತಾರೆ ಎಂದು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸುಧಾಕರ ರೈ ಹೇಳಿದ್ದಾರೆ. ಸುಳ್ಯಕ್ಕೆ ರೈಲು ಹಳಿ ಬೇಡಿಕೆ ಬಿಟ್ಟು ಹೋಗಿರುವ ಬಗ್ಗೆ ಸಂಸದರ ಗಮನಕ್ಕೂ ತರುತ್ತೇವೆ. ಇದಕ್ಕಾಗಿ ಹೋರಾಟಕ್ಕೂ ಸಿದ್ಧ ಎಂದು ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

