ದಕ್ಷಿಣ ಕನ್ನಡ

ಕಡಲ್ಕೊರೆತ ತಡೆ ಶಾಶ್ವತ ಕಾಮಗಾರಿ: ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಶಿಲಾನ್ಯಾಸ

Published On :

ಮಂಗಳೂರು: ಕರಾವಳಿಯಲ್ಲಿ ಕಡಲ್ಕೊರೆತ ತಡೆಗೆ ರು. 249 ಕೋಟಿ ವೆಚ್ಚದ ಶಾಶ್ವತ ಕಾಮಗಾರಿಗೆ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶುಕ್ರವಾರ ಬಂದರು ಸಚಿವ ಬಾಬುರಾವ್ ಚಿಂಚನಸೂರ್ ಅವರು ಕಡಲ್ಕೊರೆತ ಪ್ರದೇಶಗಳಾದ ಕೈಕೋ, ಕೋಟೆಪುರ, ಮೊಗವೀರಪಟ್ಣ, ಉಚ್ಚಿಲ, ಉಚ್ಚಿಲ ಕೋಡಿಗಳಿಗೆ ಭೇಟಿ ಪರಿಶೀಲನೆ ನಡೆಸಿ ಸುದ್ದಿಗಾರರಲ್ಲಿ ಮಾತನಾಡಿದರು.
ಟೆಂಡರ್ ಕರೆದು 8 ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಳಿಸಲಾಗುವುದು. ಕಡಲ್ಕೊರೆತ ತಡೆಗೆ ಬರ್ಮ್ ಕಾಮಗಾರಿ ಆರಂಭವಾಗಿಲ್ಲ. ಈಗ ಸಮುದ್ರ ಪಾಲಾಗಿರುವುದು ಬರ್ಮ್‌ನ ಪ್ರಾಯೋಗಿಕ ಕಾಮಗಾರಿಯಷ್ಟೇ ಎಂದು ಸಮಜಾಯಿಷಿ ನೀಡಿದರು.
ಪ್ರತಿ ವರ್ಷವೂ ಕಡಲ್ಕೊರೆತ ಜಾಸ್ತಿಯಾಗುತ್ತಿದ್ದು, ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿಗೆ ರು. 40 ಕೋಟಿ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ನೆರವು ಒದಗಿಸಲು ಸರ್ಕಾರ ಸಿದ್ಧವಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅವರ ಸೂಚನೆ ಮೇರೆಗೆ ತಾನು ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸಂತ್ರಸ್ತ ಮೀನುಗಾರರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗುವುದು. ತಾನೂ ಮೀನುಗಾರರ ಸಮುದಾಯಕ್ಕೆ ಸೇರಿದವನಾಗಿದ್ದು, ತನಗೂ ಅವರ ಬಗ್ಗೆ ಕಳಕಳಿ ಇದೆ ಎಂದರು.
ಎಡಿಬಿ ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಕಡಲ್ಕೊರೆತ ತಂತ್ರಜ್ಞಾನ ಬಗ್ಗೆ ಅರಿತುಕೊಳ್ಳಲು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಸಮರ್ಥಿಸಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಕಡಲ್ಕೊರೆತ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿಗೆ ಬಂದರು ಇಲಾಖೆಗೆ ಸೂಚಿಸಲಾಗಿದೆ. ಪ್ರಥಮ ಹಂತದಲ್ಲಿ ತಾತ್ಕಾಲಿಕ ಹಾಗೂ ನಂತರ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಈ ಬಾರಿ ವಿಪರೀತ ಕಡಲ್ಕೊರೆತ ಸಂಭವಿಸುತ್ತಿದೆ ಎಂದು ಹೇಳಿದರು.
ಸಚಿವರ ಭೇಟಿ ವೇಳೆ ಕಡಲ್ಕೊರೆತ ಸಂತ್ರಸ್ತರು ಶಾಶ್ವತ ಕಾಮಗಾರಿ ಹಾಗೂ ಸೂಕ್ತ ಪುನರ್ವಸತಿ, ಪರಿಹಾರಕ್ಕೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.