ದಕ್ಷಿಣ ಕನ್ನಡ

ಕಿರು ಬಂದರು ಸಮಗ್ರ ಅಭಿವೃದ್ಧಿಗೆ ಬಂದರು ಅಭಿವೃದ್ಧಿ ನೀತಿ: ಸಚಿವ

Published On :

ಮಂಗಳೂರು: ರಾಜ್ಯದ ಕಿರು ಬಂದರುಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ರಾಜ್ಯ ಬಂದರು ಅಭಿವೃದ್ಧಿ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
 ಕರಾವಳಿಯಲ್ಲಿರುವ ಎಲ್ಲ ಕಿರು ಬಂದರುಗಳನ್ನು ಅಭಿವೃದ್ಧಿಪಡಿಸಿ ಮೀನುಗಾರಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು. ಕಾರವಾರ, ಮಂಗಳೂರು, ತದಡಿ, ಬೇಲೆಕೇರಿ ಕಿರು ಬಂದರುಗಳಿಗೆ ರು. 8.40 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಕಿರು ಬಂದರು ಮೂಲಕ 6.1 ಲಕ್ಷ ಮೆಟ್ರಿಕ್ ಟನ್ ಸರಕು ಆಮದು-ರಫ್ತು ಮಾಡಿ ರು. 7.48 ಕೋಟಿ ಆದಾಯ ಗಳಿಸಲಾಗಿದೆ. ಕಾರವಾರ ಬಂದರಿನಲ್ಲಿ 161 ಮೀಟರ್ ಉದ್ದದ ಧಕ್ಕೆಯನ್ನು ರು. 11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಲ್ಪೆ ಬಂದರಿನಲ್ಲಿ 100 ಮೀಟರ್ ಉದ್ದದ ಧಕ್ಕೆಯನ್ನು ರು. 4.95 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಚಿವ ಚಿಂಚನಸೂರ್ ಶುಕ್ರವಾರ ಇಲ್ಲಿನ ಬಂದರು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಬಂದರು ಅಭಿವೃದ್ಧಿ ಸಲುವಾಗಿ ಕರ್ನಾಟಕ ಮೆರಿಟೈಮ್ ಮಂಡಳಿ ಸ್ಥಾಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ರಾಜ್ಯ ಸರ್ಕಾರ ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಯಾನಕ್ಕೆ ರು. 50 ಕೋಟಿ ವೆಚ್ಚದಲ್ಲಿ ಮಂಗಳೂರಲ್ಲಿ ಜೆಟ್ಟಿ ನಿರ್ಮಾಣಕ್ಕೆ ಒಪ್ಪಂದ ಬಾಕಿ ಇದೆ. ಇದನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಸ್ಥಾಪನೆಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಕಾರವಾರ ಬಂದರನ್ನು ಸೀಬರ್ಡ್‌ಗೆ ಹಸ್ತಾಂತರಿಸುವ ವಿಚಾರ ಇತ್ಯರ್ಥವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಖಾಸಗಿ ಸಹಭಾಗಿತ್ವ: ಕಾರವಾರ ಬಂದರಿನ 2ನೇ ಹಂತದ ಅಭಿವೃದ್ಧಿ ಯೋಜನೆಯನ್ನು ರು. 1500 ಕೋಟಿ ವೆಚ್ಚದಲ್ಲಿ ಡಿ-ಬೂಸ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಹೊನ್ನಾವರ ಬಂದರನ್ನು ರು. 511 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಮೆಸಸ್ ಹೊನ್ನಾವರ ಪೋರ್ಟ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಕಿ ಬಂದರಿನಲ್ಲಿ ರು. 46 ಕೋಟಿ ವೆಚ್ಚದಲ್ಲಿ 2 ಮಿಲಿಯನ್ ಟನ್ ಸರಕು ಸಾಮರ್ಥ್ಯದ ಕ್ಯಾಪ್ಟಿವ್ ಜೆಟ್ಟಿ ನಿರ್ಮಿಸಲು ರೇಣುಕಾ ಶುಗರ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪಾವನಕುರ್ವೆಯ ಬಸವರಾಜ ದುರ್ಗ ದ್ವೀಪದಲ್ಲಿ ಕ್ಯಾಪ್ಟಿವ್ ಬಂದರು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ತದಡಿ ಬಂದರನ್ನು ರು. 3 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೈಗಾರಿಕೆ ಇಲಾಖೆ ಮುಂದಡಿ ಇಟ್ಟಿದೆ ಎಂದರು.
ಬಂದರು ಇಲಾಖೆ ಅಧಿಕಾರಿ ಕ್ಯಾಪ್ಟನ್ ಮೋಹನ್ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.