ಕಾಣಿಯೂರು ಕಾಲೇಜ್ ಕಡತ ಸ್ಥಳಾಂತರಕ್ಕೆ ತಡೆ
ಪುತ್ತೂರು: ಕಳೆದ ಹಲವು ಸಮಯಗಳಿಂದ ವಿವಾದಕ್ಕೀಡಾಗಿದ್ದ ಕಾಣಿಯೂರು ಪ್ರಥಮ ದರ್ಜೆ ಕಾಲೇಜ್ ಕಡತ ಸ್ಥಳಾಂತರಕ್ಕೆ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದ ಘಟನೆ ಭಾನುವಾರ ನಡೆದಿದೆ.
ವಿವಾದಿತ ಕಾಣಿಯೂರು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರಕ್ಕೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಮತ್ತು ಇತರ ಅಧಿಕಾರಿಗಳು ಬಂದಾಗ ಕಾಣಿಯೂರು ಮತ್ತು ಬೆಳಂದೂರು ಗ್ರಾಮಸ್ಥರ ಪರ ವಿರೋಧ ಪ್ರತಿಭಟನೆ ನಡೆದು, ಆತಂಕದ ವಾತಾವರಣ ನಿರ್ಮಾಣಗೊಂಡಿತು.
ಸುಮಾರು ಮುಕ್ಕಾಲು ಗಂಟೆ ವಾಹನಗಳನ್ನು ಅಡ್ಡಗಟ್ಟಿದ ಗ್ರಾಮಸ್ಥರು, ಅಧಿಕಾರಿಗಳನ್ನು ಮುಂದೆ ಹೋಗಲು ಬಿಡಲಿಲ್ಲ. ಬಳಿಕ ಡಿವೈಎಸ್ಪಿ ನೇತೃತ್ವದ ತಂಡ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಎರಡೂ ಪ್ರದೇಶಗಳಲ್ಲಿ ಸಂಸದರು, ಶಾಸಕರು ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಕೊನೆಗೂ ಅಧಿಕಾರಿಗಳು ತಮ್ಮ ನಿಲುವು ಸಡಿಲಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಕಾಣಿಯೂರು ಕಾಲೇಜ್ಗೆ ಶನಿವಾರ ಭೇಟಿ ನೀಡಿದ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಸಿದ್ದರಾಮು ಮತ್ತು ಮಾಜಿ ಜಂಟಿ ನಿರ್ದೇಶಕ ಯೋಗಾನಂದ ಕಡತ ಪರಿಶೀಲನೆ ನಡೆಸಿ, ವರ್ಗಾವಣೆಗೆ ಸೂಚನೆ ನೀಡಿದ್ದರು. ಈ ಮಾಹಿತಿ ಅರಿತು ತಕ್ಷಣವೇ ಕಾಲೇಜ್ಗೆ ಆಗಮಿಸಿದ ಸುಳ್ಯ ಶಾಸಕ ಅಂಗಾರ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದು, ಜನವಿರೋಧದ ನಡುವೆ ಅಧಿಕಾರಿಗಳು ಕಾಲೇಜು ಸ್ಥಳಾಂತರಗೊಳಿಸಿದರೆ ಮುಂದೆ ನಡೆಯುವ ಅನಾಹುತಗಳಿಗೆ ಜವಾಬ್ದಾರರಾಗಬೇಕಾದೀತು ಎಂದು ಎಚ್ಚರಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಬ್ಬರೂ ಶಾಸಕರ ಮಾತಿಗೆ ಒಪ್ಪಿ ಕಡತ ಪರಿಶೀಲನೆ ಸ್ಥಗಿತಗೊಳಿಸಿ ಹಿಂತಿರುಗಿದ್ದರು.
ಕಾಣಿಯೂರಿನಲ್ಲಿ ಪ್ರತಿಭಟನೆ
ನಂತರ ಕಾಲೇಜು ಕಡತ ಸ್ಥಳಾಂತರಕ್ಕೆ ಅಧಿಕಾರಿಗಳು ಭಾನುವಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಲೇಜು ಬಳಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸೇರುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಶಾಸಕ ಅಂಗಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲು, ಜನಪ್ರತಿನಿಧಿಗಳೂ ಕಡತ ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಿದರು. ಸಂಸದ ನಳಿನ್ ಕುಮಾರ್, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ, ತಾ.ಪಂ. ಅಧ್ಯಕ್ಷೆ ಪುಲಸ್ಯ ರೈ, ತಾ.ಪಂ. ಸದಸ್ಯ ಬಾಬು ಮಾದೋಡಿ ಸೇರಿದಂತೆ ನೂರಾರು ಮಂದಿ ಕಾಲೇಜು ಕಡತ ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಿದರು.
ಇಂದಿನಿಂದ ಕಾಲೇಜು ಪ್ರಾರಂಭ: ಸಿದ್ದರಾಜು
ಸರ್ಕಾರದ ಆದೇಶದಂತೆ ಕಾಣಿಯೂರು ಪ್ರಥಮ ದರ್ಜೆ ಕಾಲೇಜು ಸೋಮವಾರದಿಂದ ಬೆಳಂದೂರಿನಲ್ಲಿ ಕಾರ್ಯಾಚರಿಸಲಿದೆ. ಭಾನುವಾರದ ಕಾರ್ಯಾಚರಣೆ ಕುರಿತು ಶನಿವಾರವೇ ಪ್ರಾಂಶುಪಾಲರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಇದೀಗ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನಾಪತ್ತೆ ದೂರು ನೀಡಲಾಗಿದೆ. ಎಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಹೇಳಿದರು.
ಬೆಳಂದೂರಲ್ಲಿ ಪ್ರತಿಭಟನೆ
ಕಾಣಿಯೂರಿನಿಂದ ಬರಿಗೈಲಿ ವಾಪಾಸಾದ ಸಹಾಯಕ ಆಯುಕ್ತ ಸೇರಿದಂತೆ ಅಧಿಕಾರಿಗಳ ತಂಡವನ್ನು ಬೆಳಂದೂರು ಗ್ರಾಮಸ್ಥರು ತಡೆದು ಪ್ರತಿಭಟಿಸಿದರು. ಸರ್ಕಾರದ ಆದೇಶವನ್ನು ಪಾಲಿಸಲೇ ಬೇಕು. ಇಂದೇ ಜಾರಿಗೆ ತರುವಂತೆ ಒತ್ತಾಯಿಸಿ ಸುಮಾರು ಮುಕ್ಕಾಲು ಗಂಟೆ ಕಾಲ ರಸ್ತೆ ತಡೆ ನಡೆಸಿದರು. ಪೊಲೀಸ್ ಅಧಿಕಾರಿಗಳ ಮನವಿಗೂ ಸ್ಪಂದಿಸದ ಪ್ರತಿಭಟನಾಕಾರರು ಕಾಲೇಜು ಸ್ಥಳಾಂತರಕ್ಕೆ ಪಟ್ಟು ಹಿಡಿದರು. ಎರಡೂ ಕಡೆಗಳಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

