ದಕ್ಷಿಣ ಕನ್ನಡ

ಸೊಸೆ ಕೊಲೆ ಆರೋಪಿ ಪತ್ತೆಗೆ ಎಎನ್‌ಎಫ್, ಪೊಲೀಸ್ ಜಂಟಿ ಕಾರ್ಯಾಚರಣೆ ಆರಂಭ

Published On :

ಸುಬ್ರಹ್ಮಣ್ಯ: ಬಾಳುಗೋಡಿನ ಉಪ್ಪುಕಳ ಎಂಬಲ್ಲಿ ಸೊಸೆಗೆ ಗುಂಡಿಕ್ಕಿ ಕೊಂದ ಆರೋಪಿ ಮಾವ ನಾಗಪ್ಪ ಗೌಡನ ಪತ್ತೆಗಾಗಿ ಪೊಲೀಸ್ ಹಾಗೂ ನಕ್ಸಲ್ ನಿಗ್ರಗ ದಳ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದೆ.
ಭಾನುವಾರ ಈ ಎರಡು ತಂಡ ಗೃಹರಕ್ಷಕ ದಳ ಹಾಗೂ ಸ್ಥಳಿಯ ಸಂಘಸಂಸ್ಥೆಗಳ ಮತ್ತು ಜನರ ಸಹಕಾರದೊಂದಿಗೆ ಉಪ್ಪುಕಳ ಕಾಡು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ.
ಆಸ್ತಿ ವಿಚಾರಕ್ಕೆ ಸಂಭಂದಿಸಿ ಹತ್ತು ದಿನಗ ಹಿಂದೆ ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಸೊಸೆ ವಿದ್ಯಾಳನ್ನು ಮನೆಯ ಅಂಗಳದಲ್ಲೇ ಗುಂಡಿಕ್ಕಿ ಕೊಂದ ಹಂತಕ ಮಾವ ನಾಗಪ್ಪ ಗೌಡ ಘಟನೆ ಬಳಿಕ ಕಾಡಿನಲ್ಲಿ ಕಣ್ಮರೆಯಾಗಿದ್ದಾನೆ.
ದಟ್ಟ ಕಾಡಿನಲ್ಲಿ ಆರೋಪಿಗಾಗಿ ಪೊಲೀಸ್ ಹಾಗೂ ಗೃಹರಕ್ಷಕ ಪಡೆ ಶೋಧ ಕಾರ್ಯ ನಡೆಸಿದರೂ ಆರೋಪಿ ಪತ್ತೆ ಸಾಧ್ಯವಾಗಿರಲಿಲ್ಲ.
ಕೃತ್ಯ ನಡೆಸಿದ ಬಳಿಕ ಕೋವಿಯೊಂದಿಗೆ ಪರಾರಿಯಾಗಿದ್ದ ಹಂತಕ ಘಟನೆಯ ಮರುದಿನ ಮಾನಡ್ಕ ಎಂಬಲ್ಲಿ ಯುವತಿಗೆ ಕಂಡು ಬಂದಿದ್ದು ಜೀವ ಬೆದರಿಕೆಯೊಡ್ಡಿ ಬಳಿಕ ಕಾಡಿನೊಳಗೆ ಕಣ್ಮರೆಯಾಗಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ.
ಕಾಡಿನೊಳಗಿನಿಂದ ಒಂದೆರಡು ಭಾರಿ ಗುಂಡಿನ ಸದ್ದು ಕೇಳಿ ಬಂದಿರುವುದು ಜನರಲ್ಲಿ ಆತಂಕ ಹೆಚ್ಚಿಸಿತ್ತು. ಬಳಿಕ ನಾಗಪ್ಪ ಗೌಡ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ.
ಮಡಿಕೇರಿ ಕಡೆಗೆ ತೆರಳಿರುವ ಶಂಕೆ ಇದ್ದರೂ ಕೆಲವರ ಪ್ರಕಾರ ಆತ ಕಾಡಿನಲ್ಲಿರದೆ ಉಪ್ಪುಕಳ ಪರಿಸರದ ಮನೆಗಳಲ್ಲಿ ಆಶ್ರಯ ಪಡೆಯುತ್ತಿರುವ ಸಾಧ್ಯತೆ ಹೆಚ್ಚಾಗಿದೆ.
ಭಾನುವಾರ ಬೆಳ್ತಂಗಡಿಯ ನಕ್ಸಲ್ ನಿಗ್ರಹ ಕೇಂದ್ರದ ದಳ, ಸುಬ್ರಹ್ಮಣ್ಯ ಹಾಗೂ ಸುಳ್ಯ ಠಾಣೆಗಳ ಪೊಲೀಸ್ ಸಿಬ್ಬಂದಿ ಮತ್ತು ಗೃಹ ರಕ್ಷಕದಳದವರು ಸ್ಥಳೀಯರ ಸಹಕಾರದೊಂದಿಗೆ ಸುಮಾರು 100 ಮಂದಿಯ ತಂಡ ನಾಲ್ಕು ಗುಂಪುಗಳಾಗಿ ಆರೋಪಿ ಪತ್ತೆಗಾಗಿ ಉಪ್ಪುಕಳ ಪರಿಸರದ ಕಾಡುಗುಡ್ಡಗಳಲ್ಲಿ ದಿನವಿಡೀ ಹುಡುಕಾಟ ನಡೆಸಿದೆ.
ಮಳೆ, ಜಿಗಣೆ ಕಾಟ: ಧಾರಕಾರ ಸುರಿಯುತ್ತಿದ್ದ ಮಳೆ ನಡುವೆ ಕಿರಿಭಾಗ ರಕ್ಷಿತಾರಣ್ಯದ ಕಂದಡಿ ಮಲೆ, ಹೊಸಮಲೆ, ಸಿದ್ದನಗುಡ್ಡೆ, ರತ್ನಾಪುರ, ಅಂಬಟಕಜೆ ಮುಂತಾದ ಕಾಡುಗಳಲ್ಲಿ ತಂಡ ಹುಡುಕಾಡಿದೆ. ಮಳೆಯೊಂದಿಗೆ ಜಿಗಣೆ ಕಾಟ ಮಧ್ಯೆ ಕಾರ್ಯಾಚರಣೆ ಕಷ್ಟವಾಗಿದ್ದರೂ ತಂಡ ಇಲ್ಲಿನ ಕಾಡು, ಬೆಟ್ಟಗಳಲ್ಲಿ ಶೋಧ ಕಾರ್ಯ ನಡೆಸಿದೆ.
ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಹಾಗೂ ಸುಬ್ರಹ್ಮಣ್ಯ ಸಬ್‌ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ತಂಡದ ನೇತೃತ್ವ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.