ಮಂಗಳೂರು ಪ್ರತ್ಯೇಕ ವಿಭಾಗ: ಕೊಂಕಣ ರೇಲ್ವೆ ಹೆಗಲಿಗೆ?
ಮಂಗಳೂರು: ಮಂಗಳೂರಿಗೆ ಪ್ರತ್ಯೇಕ ರೇಲ್ವೆ ವಿಭಾಗ ರಚನೆ ಕುರಿತು ಕೊಂಕಣ ರೇಲ್ವೆ ಮುಖ್ಯಸ್ಥರಾಗಿದ್ದ ಇ.ಶ್ರೀಧರನ್ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಕ್ಕೆ ಈಗ ಮರುಜೀವ ಬಂದಿದೆ. ಕೇಂದ್ರ ಈ ಬಾರಿಯ ರೇಲ್ವೆ ಬಜೆಟ್ನಲ್ಲಿ ಮಂಗಳೂರಿಗೆ ಪ್ರತ್ಯೇಕ ರೇಲ್ವೆ ವಿಭಾಗ ಘೋಷಿಸಿದರೆ, ಅದರ ಹೊಣೆಗಾರಿಕೆಯನ್ನು ಕೊಂಕಣ ರೇಲ್ವೆ ನಿಗಮ ವಹಿಸಿಕೊಳ್ಳಲು ಮುಂದೆ ಬಂದಿದೆ.
ಮಂಗಳೂರಿನಲ್ಲಿ ಮಂಗಳವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಮಂಗಳೂರು ಪ್ರತ್ಯೇಕ ವಿಭಾಗ ರಚನೆ ಬಗ್ಗೆ ಎರಡನೆ ಸುತ್ತಿನ ಸಭೆ ನಡೆಯಿತು. ಈ ಸಭೆಯಲ್ಲಿ ಕೊಂಕಣ ರೇಲ್ವೆ ಪ್ರಾದೇಶಿಕ ಅಧಿಕಾರಿ ಬಿಂದು ಮುರಳೀಧರ್, ಅಧಿಕಾರಿ ವಿನಯ ಕುಮಾರ್, ರೇಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ ಮತ್ತಿತರರು ಸಭೆಯಲ್ಲಿದ್ದರು.
ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಮಂಗಳೂರಿಗೆ ಬಂದಾಗ ಪ್ರಥಮ ಹಂತದ ಸಭೆ ನಡೆದಿತ್ತು. ಕೇರಳ ಲಾಬಿಯಿಂದ ಮಂಗಳೂರನ್ನು ಮುಕ್ತಗೊಳಿಸುವ ಸಲುವಾಗಿ ಪ್ರತ್ಯೇಕ ವಿಭಾಗ ರಚನೆಗೆ ಸ್ವತಃ ರೇಲ್ವೆ ಸಚಿವ ಡೀವಿ ಆಸಕ್ತಿ ತಳೆದಿದ್ದು, ಇದಕ್ಕೆ ಬೇಕಾದ ಪೂರ್ವಸಿದ್ಧತೆ ಮಾಡುವಂತೆ ಕೊಂಕಣ ರೇಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು ವಿಭಾಗ ಘೋಷಣೆಯಾದರೆ ಬೇಕಾಗುವ ಬಜೆಟ್, ಎಲ್ಲೆಲ್ಲಿ ಅಭಿವೃದ್ಧಿಯ ಅಗತ್ಯವಿದೆ, ಆದ್ಯತೆ ಮೇರೆಗೆ ಸ್ಥಳೀಯರಿಗೆ ಉದ್ಯೋಗ, ಕನ್ನಡ ಬಲ್ಲವರ ನೇಮಕ, ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳಿಗೆ ಚಾಲನೆ, ಹೊಸ ರೈಲು ಓಡಿಸಲು ಚಿಂತನೆ ಇತ್ಯಾದಿ ವಿಚಾರಗಳನ್ನು ಕೊಂಕಣ ರೇಲ್ವೆ ಅಧಿಕಾರಿಗಳು ಸಭೆಯ ಮುಂದಿಟ್ಟಿದ್ದಾರೆ.
ಮಂಗಳೂರು-ಹಾಸನ ರೇಲ್ವೆ ಅಭಿವೃದ್ಧಿ ನಿಗಮ(ಎಚ್ಎಂಆರ್ಡಿಸಿ)ವನ್ನು ಕೊಂಕಣ ರೇಲ್ವೆಯಲ್ಲಿ ವಿಲೀನಗೊಳಿಸುವುದು. ಮಂಗಳೂರಿನಿಂದ ಸುಬ್ರಹ್ಮಣ್ಯ ವರೆಗೆ ಇಲೆಕ್ಟ್ರಿಕ್ ರೈಲು ಮಾರ್ಗ, ಮಂಗಳೂರು ಸೆಂಟ್ರಲ್ ನಿಲ್ದಾಣ ವಿಶ್ವದರ್ಜೆ ಕಾಮಗಾರಿ, ಈ ನಿಲ್ದಾಣಕ್ಕೆ 4 ಮತ್ತು 5ನೇ ಫ್ಲ್ಯಾಟ್ಫಾರಂ ರಚನೆಗೆ ರೂಪುರೇಷೆ ಸಿದ್ಧಪಡಿಸುವುದಾಗಿ ತಿಳಿಸಿದ್ದಾರೆ.
ಬಾಂಡ್ ಮೂಲಕ ಸಂಗ್ರಹ: ಮಂಗಳೂರು ವಿಭಾಗ ರಚನೆಯಾದರೆ ಬಾಂಡ್ ಮೂಲಕ ಮೊತ್ತ ಸಂಗ್ರಹಿಸಿ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನೂ ನಿಗಮ ಮುಂದಿಟ್ಟಿದೆ. ಹೊಸ ವಿಭಾಗವನ್ನು ನಿಗಮದ ಬದಲು ಬೇರೆ ವಲಯಕ್ಕೆ ವಹಿಸಿದರೆ ರೇಲ್ವೆ ಇಲಾಖೆ ಹಣ ಹೂಡಿಕೆ ಮಾಡಬೇಕು. ಆದರೆ ನಿಗಮದಲ್ಲಿ ಈ ತಾಪತ್ರಯ ಇಲ್ಲ ಎಂಬುದನ್ನು ಮನದಟ್ಟು ಮಾಡಲಾಗಿದೆ. ಕೊಂಕಣ ರೇಲ್ವೆಯಲ್ಲಿರುವ ಅತ್ಯಾಧುನಿಕ ತಾಂತ್ರಿಕತೆ ಬಳಸಿ ತ್ವರಿತಗತಿಯಲ್ಲಿ ಮಂಗಳೂರು ವಿಭಾಗ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಇದಲ್ಲದೆ ಹಾಸನ ವರೆಗೆ ಮಂಗಳೂರು ವಿಭಾಗಕ್ಕೆ ಸೇರಿಸಿದರೆ ಶಿರಾಡಿ ಘಾಟ್ ಪ್ರದೇಶವನ್ನೂ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂಬುದನ್ನೂ ನಿಗಮ ಪ್ರಸ್ತಾಪಿಸಿದೆ. ಅಲ್ಲದೆ ಮುಂಬೈನಲ್ಲಿರುವ ಕಾರ್ಪೊರೇಟ್ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಲು ಸಿದ್ಧ ಎಂಬ ಮಾತನ್ನೂ ನಿಗಮದ ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

