ಚತುಷ್ಪಥ ಕಾಮಗಾರಿ ಪ್ರತಾಪ: ಹೆದ್ದಾರಿಲಿ ಅಪಘಾತ ಸರಮಾಲೆ
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್-ಕುಂದಾಪುರ ಚತುಷ್ಪಥ ಕಾಮಗಾರಿ 2010ರಲ್ಲಿ ಆರಂಭಗೊಂಡಿತು, ಕಾಮಗಾರಿ ಪೂರ್ಣಗೊಳ್ಳದೆ ಸಂಚಾರ ಅವ್ಯವಸ್ಥೆ ನಿರಂತರವಾಗಿದೆ. ಕಳೆದ 6 ತಿಂಗಳಿನಲ್ಲಿ ಈ ಭಾಗದಲ್ಲಿ ಸುಮಾರು 100 ಅಪಘಾತ ಸಂಭವಿಸಿದ್ದು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
2010ರಲ್ಲಿ ಆರಂಭಗೊಂಡ ಚತುಷ್ಪಥ ಕಾಮಗಾರಿಯನ್ನು ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡನ ನೇತೃತ್ವದ ನವಯುಗ್ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಿದ್ದು ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. 2014ರ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಕಾಮಗಾರಿ ಸಂಪೂರ್ಣ ನಿಂತಿದೆ.
ದಿಢೀರ್ ತಿರುವು: ಸುರತ್ಕಲ್ ಎನ್ಐಟಿಕೆಯಿಂದ ಆರಂಭಗೊಂಡ ರಸ್ತೆ ಕಾಮಗಾರಿ ಏಕಮುಖ ರಸ್ತೆ ಮುಕ್ಕದ ಜಂಕ್ಷನ್ ಬಳಿ ತಿರುವು ಪಡೆದಿದೆ. ಮಂಗಳೂರಿನಿಂದ ಉಡುಪಿ ಹಾಗೂ ಉಡುಪಿಯಿಂದ ಮಂಗಳೂರಿನ ಕಡೆಗೆ ಹೋಗುವ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸಬೇಕಾಗಿರುವುದರಿಂದ ಏಕಾಏಕಿ ತಿರುವು ಪಡೆಯುವ ಸಂದರ್ಭ ಅಪಘಾತಗಳು ನಡೆಯುತ್ತಿವೆ.
ಇದೇ ರೀತಿ ಪಡಪಣಂಬೂರು ಜಂಕ್ಷನ್ ಬಳಿ, ಮೂಲ್ಕಿಯ ಕೊಕ್ಕರ್ಕಲ್ ಬಳಿ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.
ಉಳಿದಂತೆ ಮುಕ್ಕ ಜಂಕ್ಷನ್, ಹಳೆಯಂಗಡಿ ಜಂಕ್ಷನ್,ಪಡಪಣಂಬೂರು ಜಂಕ್ಷನ್, ಕೊಲ್ನಾಡು ಬೈಪಾಸ್ ಹಾಗೂ ಕಾರ್ನಾಡು ಬೈಪಾಸ್ ಬಳಿ ಒಳ ರಸ್ತೆಗಳಿದ್ದು ಇಲ್ಲಿ ಒಳ ರಸ್ತೆಗೆ ಸಂಚರಿಸುವ ವಾಹನಗಳಿಗೆ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ ನಿರಂತರ ಅಪಘಾತಗಳು ನಡೆಯುತ್ತಿವೆ.
ಬೇಕಾಗಿದೆ ಸಂಚಾರಿ ಪೊಲೀಸ್: ಮೂಲ್ಕಿ ಹಳೆಯಂಗಡಿ ಪರಿಸರದಲ್ಲಿ ಟ್ರಾಫಿಕ್ ಪೊಲೀಸರ ಅಗತ್ಯವಿದೆ.
ಸಿಬ್ಬಂದಿ ಕೊರತೆ ಹಿನ್ನೆಲೆ ಪೊಲೀಸರು ಜಂಕ್ಷನ್ಗಳಲ್ಲಿ ಇಲ್ಲದಿರುವುದು ಕೂಡ ಅಪಘಾತಗಳಿಗೆ ಎಡೆಮಾಡಿ ಕೊಟ್ಟಿದೆ. ಅಲ್ಲಲ್ಲಿ ತಿರುವು ಪಡೆಯುವ ರಸ್ತೆಗಳನ್ನು ಏಕಮುಖ ವ್ಯವಸ್ಥೆ ಮಾಡಿಕೊಟ್ಟಲ್ಲಿ ಹಾಗೂ ಪೇಟೆ ಜಂಕ್ಷನ್ನಲ್ಲಿ ಟ್ರಾಫಿಕ್ ವ್ಯವಸ್ಥೆ ಮಾಡಿದಲ್ಲಿ ಹೆಚ್ಚಿನ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಇತ್ತೀಚೆಗೆ ಮೂಲ್ಕಿಗೆ ಭೇಟಿ ನೀಡಿದ ಸಂದರ್ಭ ಅವರ ಗಮನಕ್ಕೆ ತಂದಿದ್ದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಇನ್ನಷ್ಟು ಮಂದಿ ಅಪಘಾತಕ್ಕೆ ಸಿಲುಕುವ ಅಪಾಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

