ಬ್ಯಾರಿ ಸಾಹಿತ್ಯ ಅಕಾಡೆಮಿ ನೇಮಕದಲ್ಲಿ ಭಾರೀ ಕಿತಾಪತಿ!
ಮಂಗಳೂರು: ಎರಡು ಹೆಸರಿಟ್ಟುಕೊಂಡ ಒಬ್ಬನೇ ವ್ಯಕ್ತಿಗೆ ಎರಡು ಸದಸ್ಯತ್ವ! ಬ್ಯಾರಿ ಸಾಹಿತ್ಯ ರಚನೆ ಒತ್ತಟ್ಟಿಗಿರಲಿ, ಬ್ಯಾರಿ ಸಾಹಿತ್ಯ ಕಾರ್ಯಕ್ರಮಗಳಿಗೂ ಹಾಜರಾಗದವರಿಗೂ ಅವಕಾಶ! ಸಚಿವರ, ಶಾಸಕರ ಹಿಂಬಾಲಕರಾಗಿರುವುದೇ ಸದಸ್ಯತ್ವಕ್ಕೆ ಅರ್ಹತೆ! ಇದು ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರ ವಿಶೇಷ!
ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕಾರ್ಯಕ್ರಮಗಳಿಗೆ ಎಂ.ಸಿ. ಮಾಡುವ ಹಮೀದ್ ಕಲ್ಲಡ್ಕ ಬ್ಯಾರಿ ಸಾಹಿತ್ಯ ರಚಿಸಿಲ್ಲ. ಕಾಂಗ್ರೆಸ್ ಪಕ್ಷದ ಕೆಲಸ ಮಾಡುತ್ತಿರುವ ಒಬ್ಬ ಉದ್ಯಮಿ. ಹಮೀದ್ ಕಲ್ಲಡ್ಕ ವಾಸ ಗೋಳ್ತಮಜಲಲ್ಲಿ. ಬಂಟ್ವಾಳದ ಅಬ್ದುಲ್ ಹಮೀದ್ ಮತ್ತು ಉಳ್ಳಾಲ ಹಮೀದ್ ಕಲ್ಲಡ್ಕ ಹೆಸರಲ್ಲಿ ಅರ್ಜಿ ಕಳುಹಿಸಿದರು. ಅಕಾಡೆಮಿ ನೇಮಕಗೊಂಡವರ ಅದೇಶ ಮಂಗಳೂರಿನ ರಿಜಿಸ್ಟ್ರಾರ್ಗೆ ತಲುಪಿದಾಗ ಈ ಇಬ್ಬರು ಹಮೀದ್ ಹೆಸರಿನ ವಿಳಾಸ ಹುಡುಕಲು ರಿಜಿಸ್ಟ್ರಾರ್ ಉಮರಬ್ಬ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಮೀದ್ ಕಲ್ಲಡ್ಕ ಅವರೇ ಬಂಟ್ವಾಳದ ಅಬ್ದುಲ್ ಹಮೀದ್ ಎಂಬುದು ವಿಚಾರಣೆ ಬಳಿಕ ಸ್ಪಷ್ಟವಾಯಿತು.
'ಎರಡೂ ಹೆಸರಿನ ವ್ಯಕ್ತಿ ಒಬ್ಬರೇ, ಪ್ರಸ್ತಾವ ಕಳುಹಿಸುವಾಗ ಎರಡು ವಿಳಾಸದಲ್ಲಿ ಹೋಗಿರಬೇಕು. ಉಳ್ಳಾಲದಲ್ಲಿ ಹುಡುಕಾಡಿದಾಗ ಅಂಥ ವಿಳಾಸ ಇರಲೇ ಇಲ್ಲ. ಬಂಟ್ವಾಳದಲ್ಲಿಯೂ ಸಿಗಲಿಲ್ಲ. ಕೊನೆಗೆ ಕಲ್ಲಡ್ಕ ಗೊಳ್ತಮಜಲು ನಿವಾಸಿ ಎಂಬುದು ತಿಳಿಯಿತು. ಈ ವಿಚಾರ ನಮ್ಮ ಇಲಾಖೆಗೂ ಕರೆ ಮಾಡಿ ತಿಳಿಸಿದೆ' ಎಂದು ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಹೇಳುತ್ತಾರೆ.
ಇನ್ನುಳಿದ ಸದಸ್ಯರಾದ ಇದಿನಬ್ಬ ಬ್ಯಾರಿ, ಅಬ್ಬಾಸ್ ಕಿರುಗೊಂಡ ಚಿಕ್ಕಮಗಳೂರು ಬ್ಯಾರಿ ಒಕ್ಕೂಟದ ಸದಸ್ಯರು. ಬ್ಯಾರಿ ಸಾಹಿತ್ಯ ರಚನೆಯಲ್ಲಿ ಇವರ ಹೆಸರಿಲ್ಲ. ಜೊಹರಾ ಎಂಬವರು ಕೃಷ್ಣಾಪುರ ಪಿಯು ಕಾಲೇಜ್ ಪ್ರಾಂಶುಪಾಲೆ. ಯಾವುದೇ ಸಾಹಿತ್ಯದಲ್ಲಿ ಕೊಡುಗೆ ಇಲ್ಲ. ವಿಶೇಷ ಅರ್ಹತೆ ಎಂದರೆ, ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ಅಧ್ಯಕ್ಷರಾಗಿರುವ ಕಾಲೇಜ್ನ ಪ್ರಾಂಶುಪಾಲೆ ಆಗಿರುವುದು!
ಹಮೀದ್ ಪಡುಬಿದ್ರಿ ಉಡುಪಿಯಲ್ಲಿ ಮತ್ತು ಬದ್ರುದ್ದೀನ್ ಕೆ.ಮಾಣಿ ಬೆಂಗಳೂರಲ್ಲಿ ಪತ್ರಕರ್ತರು, ಬ್ಯಾರಿ ಭಾಷೆ ಸಾಹಿತ್ಯಕ್ಕೆ ಇದುವರೆಗೆ ಕೊಡುಗೆ ಕುರಿತು ಯಾರಿಗೂ ತಿಳಿದಿಲ್ಲ.
ಅಕಾಡೆಮಿ ಅಧ್ಯಕ್ಷರು ಬಿ.ಎ.ಮೊಹಮ್ಮದ್ ಹನೀಫ್ ಸಾಹಿತಿ ಹೌದು, ಆದರೆ, ಕನ್ನಡದಲ್ಲಿ ಪುಸ್ತಕ ಬರೆದವರು, ಎಲ್ಲಕ್ಕಿಂತ ಹೆಚ್ಚಾಗಿ ರಮಾನಾಥ ರೈಗಳ ಖಾಸಾ ಆದ್ಮಿ. ಬ್ಯಾರಿ ಸಾಹಿತ್ಯ ರಚಿಸಿಲ್ಲ ಎನ್ನುವುದು ಕೊರತೆ ಇದ್ದರೂ ಅಖಿಲ ಭಾರತ ಬ್ಯಾರಿ ಪರಿಷತ್ ಸ್ಥಾಪಕಾಧ್ಯಕ್ಷರು ಮತ್ತು ಉತ್ತಮ ಸಂಘಟಕರು.
ಅರ್ಹರ ಸಾಲು: ಮಹಮ್ಮದ್ ಬಡ್ಡೂರು, ಇಬ್ರಾಹಿಂ ತಣ್ಣೀರುಬಾವಿ, ಮೊಹಮ್ಮದ್ ಕುಳಾಯಿ, ಖಾಲಿದ್ ತಣ್ಣೀರುಬಾವಿ, ಷರೀಫ್ ನಿರ್ಮುಂಜೆ ಮೊದಲಾದ ಖ್ಯಾತ ಬ್ಯಾರಿ ಸಾಹಿತಿಗಳು ಇನ್ನೂ ಸದಸ್ಯರೇ ಆಗಿಲ್ಲ. ಇಂಥ ವಿಚಾರನ್ನು ಮುಂದಿಟ್ಟುಕೊಂಡು ಉಮರ್ ಯು.ಎಚ್. ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಹುಸೇನ್ ಕಾಟಿಪಳ್ಳ ಘೋಷಣೆಯಾದ ದಿನವೇ ಸದಸ್ಯತ್ವ ತಿರಸ್ಕಾರ ಮಾಡಿದ್ದರು.
ಬ್ಯಾರಿ ಭಾಷೆ ಕುರಿತ ಸಂಶೋಧನೆ ಇದುವರೆಗೆ ಯಾರೂ ಮಾಡಿಲ್ಲ. 1976ರಲ್ಲಿ ಸುಶೀಲಾ ಉಪಾಧ್ಯಾಯ ಮಾಪಿಳ್ಳೆ (ಬ್ಯಾರಿ)ಭಾಷೆ ಕುರಿತು ಮೊದಲ ಸಂಶೋಧನೆ ನಡೆಸಿ ಪಿ.ಎಚ್ಡಿ ಮಾಡಿದ್ದರು. ಆ ಬಳಿಕ ಸಂಶೋಧನೆಗಳೇ ನಡೆಸಲು ಪ್ರೋತ್ಸಾಹ ನೀಡಿಲ್ಲ. ಅಕಾಡೆಮಿ ಕೇವಲ ಅತೃಪ್ತರನ್ನು ತೃಪ್ತಿ ಪಡಿಸುವ ವೇದಿಕೆಯಾಗಿ, ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸೀಮಿತವಾಗಿದೆ.
'ಸರ್ಕಾರಕ್ಕೆ ಆಡಳಿತ ನಡೆಸುವ ಅರ್ಹತೆ ಇಲ್ಲ. ಇಂಥವರು ರಾಜಕೀಯದಲ್ಲಿರುವಾಗ ಅಕಾಡೆಮಿಗೆ ಏನು ಅರ್ಹತೆ ಇರಬಹುದು ಎಂದು ಖ್ಯಾತ ಸಾಹಿತಿ ಮಹಮ್ಮದ್ ಬಡ್ಡೂರ್ ಟೀಕಿಸಿದ್ದಾರೆ.
'ಮೊತ್ತ ಮೊದಲ ಬಾರಿ ಬ್ಯಾರಿ ಅಕಾಡೆಮಿ ಮಾಡಿ ಅದಕ್ಕೆ ಅಧ್ಯಕ್ಷರನ್ನು ಮಾಡಿದ ಕೀರ್ತಿ ಬಿಜೆಪಿಗೆ ಲಭಿಸಿದೆ. ಎಂ.ಬಿ. ಅಬ್ದುರಹೆಮಾನ್ ಎಂಬ ಸಮರ್ಥ ಸಂಘಟಕರನ್ನು ಅಧ್ಯಕ್ಷರನ್ನಾಗಿ ಮಾಡಿದರು, ಬಿಜೆಪಿಯವರೇ ಎಷ್ಟೋ ವಾಸಿ' ಎನ್ನುತ್ತಾರೆ ಉಮರ್ ಯು. ಎಚ್.
ಆದೇಶ ತಂದಾಗ..: ಬ್ಯಾರಿ ಆಕಾಡೆಮಿ ಆಗುತ್ತದೆ ಎಂದಾಗ ತುಂಬಾ ಖುಷಿಯಲ್ಲಿದ್ದೆವು. ಕೊಂಕಣಿ ಅಕಾಡೆಮಿ ಅಂದಿನ ಅಧ್ಯಕ್ಷ ಎರಿಕ್ ಒಝಾರಿಯೊ ನನ್ನ ಕರೆದು ಬುದ್ಧಿವಾದ ಹೇಳಿದರು. 'ಬ್ಯಾರಿ ಆಕಾಡೆಮಿ ಆಗುವುದಿಲ್ಲ, ಅದು ರಾಜಕೀಯ ಘೋಷಣೆ, ಬೆಂಗಳೂರಿಗೆ ಹೋಗಿ ಫೈಲ್ ಎಲ್ಲಿದೆ ಹುಡುಕಿ, ಸಚಿವರ ಟೇಬಲ್ಗೆ ತಂದು, ಮುಖ್ಯಮಂತ್ರಿ ಸಹಿ ಮಾಡಿದ ಬಳಿಕವೇ ಊರಿಗೆ ಬರಬೇಕು, ಇವತ್ತೇ ಹೊರಡು' ಎಂದು ಹೇಳಿದ್ದರು. 17 ದಿನ ಬೆಂಗಳೂರಲ್ಲಿದ್ದೆ, ಅಕಾಡೆಮಿ ಆದೇಶ ಪ್ರತಿ ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದೆ. ಆದರೆ ಮೂರೇ ದಿನದಲ್ಲಿ ಸರ್ಕಾರ ಉರುಳಿತ್ತು ಎನ್ನುತ್ತಾರೆ ಉಮರ್ ಯು.ಎಚ್.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

