ದಕ್ಷಿಣ ಕನ್ನಡ

ಕುಬ್ಜತೆಯನ್ನು ಹಿಮ್ಮೆಟ್ಟಿಸಿ ಸಾಧನೆ ತೋರಿದ ಉಪನ್ಯಾಸಕಿ ಶರ್ಮಿಳಾ

Published On :

ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ಜೀವನದಲ್ಲಿ ಸಾಧನೆ ಮಾಡಲು, ಗುರಿ ಸಾಧಿಸಲು ಬೇಕಾಗಿರುವುದು ಛಲ, ಬುದ್ದಿಯ ಜತೆಗೆ ಆತ್ಮವಿಶ್ವಾಸ. ಇದಕ್ಕೆ ಸೌಂದರ್ಯ, ವ್ಯಕ್ತಿತ್ವ ಅಡ್ಡಿ ಬರೋದಿಲ್ಲ ಎಂಬುವುದಕ್ಕೆ ಉದಾಹರಣೆ ಬಲ್ಮಠ ಕಾಲೇಜಿನ ಪಿಯುಸಿ ತರಗತಿಯ ಮನಃಶಾಸ್ತ್ರ ಉಪನ್ಯಾಸಕಿ ಶರ್ಮಿಳಾ. ಇದರಲ್ಲನೋ ವಿಶೇಷ ಅಂತೀರಾ?
 ಇವರ ಎತ್ತರ 3.11 ಅಡಿ. ಮಹಿಳೆಯಾಗಿ ಇವರು ಸಾಧಿಸಿರುವ ಸಾಧನೆ ಅದ್ಭುತ. ಆಗ್ನೇಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಮನಃಶಾಸ್ತ್ರ ಅಧ್ಯಯನ ನಡೆಸಿದ ಇವರು ಕಳೆದ 2 ವರ್ಷಗಳಿಂದ ಬಲ್ಮಠ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 ಬಂಟ್ವಾಳ ಪಾಣೆಮಂಗಳೂರಿನಲ್ಲಿ ವಾಸಿಸುತ್ತಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಪದವಿಯಲ್ಲಿ ಶೇ. 78 ಅಂಕ ಪಡೆದು ಉನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ಎಂ.ಎಸ್ಸಿ ಮನಃಶಾಸ್ತ್ರದಲ್ಲಿ ಶೇ. 62 ಅಂಕ ಗಳಿಸಿ ಪ್ರಥಮ ದರ್ಜೆ ಪಾಸಾಗಿದ್ದಾರೆ.
ಕುಳ್ಳಗಿರುವ ಇವರಿಗೆ ದೈಹಿಕ ಶ್ರಮದ ಸಮಸ್ಯೆ ಹೊರತುಪಡಿಸಿದರೆ, ಆತ್ಮವಿಶ್ವಾಸದಲ್ಲಿ ಕೊರತೆ ಕಾಣುತ್ತಿಲ್ಲ. ವೇಗವಾಗಿ ನಡೆದಾಡಲು ಮತ್ತು ರಸ್ತೆ ದಾಟುವಾಗ, ಬಸ್ ಹತ್ತುವಾಗ, ಇಳಿಯುವಾಗ ಸಮಸ್ಯೆ ಎದುರಿಸುತ್ತಾರೆ. ವಾರದಲ್ಲಿ 10 ಗಂಟೆ ತರಗತಿ ನಡೆಸುತ್ತಿದ್ದು, ವಿದ್ಯಾರ್ಥಿಗಳು ಗದ್ದಲ ಹೆಚ್ಚು ಮಾಡಿದರೆ ಮೌನದಲ್ಲಿಯೇ ಉತ್ತರಿಸುತ್ತಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಶರ್ಮಿಳಾ ಅವರ ಜೀವನಗಾಥೆಯ ತುಣುಕು.
ನಿಮ್ಮ ಸಾಧನೆಗೆ ಪ್ರೇರಣೆ ಯಾರು?
ನಾನು ಇಷ್ಟು ದೊಡ್ಡ ಸಾಧನೆ ತಲುಪಲು ನನ್ನ ಅಮ್ಮನೇ ಪ್ರೇರಣೆ. ನಿನ್ನಿಂದ ಕಲಿಯಲು, ಕೆಲಸ ಮಾಡಲು ಸಾಧ್ಯವಿದೆ. ಜನರ ಮಾತಿಗೆ ಕಿವಿಕೊಡ್ಬೇಡ ಎಂಬ ಅಮ್ಮನ ಮಾತೇ ನನಗೆ ಸೂರ್ತಿ. ಪಿಯುಸಿಯಲ್ಲಿ ಕಲಿಯುತ್ತಿರುವಾಗ ನನ್ನಲ್ಲಿ ಆತ್ಮವಿಶ್ವಾಸ ಬೆಳೆಸಿದವರು, ನನಗೆ ವೇದಿಕೆ ಸೃಷ್ಟಿಸಿಕೊಟ್ಟವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ. ಇವರಿಂದಾಗಿ ನಾನು ರಂಗನಾಟಕ, ಬೀದಿ ನಾಟಕಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.
ಇತರರಿಗೆ ನಿಮ್ಮ ಸಲಹೆ ಏನು?
ದೈಹಿಕ ಸೌಂದರ್ಯಕ್ಕೆ ಬೆಲೆ ಕೊಡಬೇಡಿ. ಆತ್ಮವಿಶ್ವಾಸ ಬೆಳೆಸಿಕೊಂಡು ಬುದ್ಧಿಶಕ್ತಿ ಉಪಯೋಗಿಸಿ ಗುರಿ ಸಾಧಿಸಲು ಸಾಧ್ಯವಿದೆ. ದೈಹಿಕ ಸಮಸ್ಯೆ ದೌರ್ಭಾಗ್ಯ ಅಲ್ಲ. ಬುದ್ಧಿಶಕ್ತಿಗೆ ಆತ್ಮವಿಶ್ವಾಸವೆಂಬ ಪೌಷ್ಟಿಕತೆ ನೀಡಿದರೆ ನಾವು ಎಲ್ಲರಂತೆ ಬದುಕು ಸಾಗಿಸಲು ಸಾಧ್ಯವಿದೆ.
ಮುಂದಿನ ಗುರಿ ಯಾವುದು?
ಅಬ್ದುಲ್ ಕಲಾಂ ಅವರು, '2020ರಲ್ಲಿ ದೇಶ ಅಭಿವೃದ್ಧಿ ಸಾಧಿಸುತ್ತದೆ' ಎಂಬುದಾಗಿ ಹೇಳಿದ್ದಾರೆ. ಆದರೆ ಈಗಲೂ ರಸ್ತೆ ಬದಿಯಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಅವರಿಗೆ ತಮ್ಮೊಳಗಿನ ಪ್ರತಿಭೆ ತಿಳಿದಿಲ್ಲ. ಇದನ್ನು ಅನಾವರಣಗೊಳಿಸಿ, ಬದುಕು ರೀತಿಯನ್ನು ಕಲಿಸಿಕೊಡಬೇಕು. ಈ ಮೂಲಕ ಸಮಾಜ ಸೇವೆ ಮಾಡಬೇಕೆಂಬ ಆಕಾಂಕ್ಷೆಯಿದೆ.
ನಿಮ್ಮ ಹವ್ಯಾಸ?
ಸಂಗೀತ ಅದರಲ್ಲೂ ಗಝಲ್ ಎಂದರೆ ಇಷ್ಟ. ಹರಿಹರನ್, ಜಗ್‌ಜೀತ್‌ಸಿಂಗ್ ಇವರ ಗಝಲ್‌ಗಳು ಇಷ್ಟ. ಸಂಗೀತ ಕ್ಲಾಸಿಗೆ ಹೋಗಿದ್ದು, ಭಾವಗೀತೆ, ಗಝಲ್ ಹಾಡುತ್ತೇನೆ. ಡ್ರಾಯಿಂಗ್, ನಾಟಕ, ಓದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.