ದಕ್ಷಿಣ ಕನ್ನಡ

ಬಿಪಿಎಲ್ ನವೀಕರಣಕ್ಕೆ ನೀತಿ ಸಂಹಿತೆ ಅಡ್ಡಿಯಿಲ್ಲ

Published On :

ಪುತ್ತೂರು: ಈಗಾಗಲೇ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳು ಈ ಪಡಿತರ ಚೀಟಿಯನ್ನು ನವೀಕರಣಗೊಳಿಸಲು ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಪುತ್ತೂರು ತಹಸೀಲ್ದಾರ್ ಕುಳ್ಳೇಗೌಡ ಹೇಳಿದ್ದಾರೆ.
ತಾ.ಪಂ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಭೆಯಲ್ಲಿ ಅವರು ಮಾತನಾಡಿದರು.
ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಮಾಡಿಸುವವರಿಗೆ ಚುನಾವಣೆ ಮುಗಿದ ಬಳಿಕ ಅವಕಾಶ ನೀಡಲಾಗುವುದು. ಆದರೆ ನವೀಕರಣಕ್ಕೆ ಈಗಲೂ ಅವಕಾಶವಿದೆ. ಅದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಾರದು. ಈ ಬಗ್ಗೆ ಅರ್ಜಿಗಳನ್ನು ಸಂಬಂಧಪಟ್ಟ ಗ್ರಾ.ಪಂ. ಹಾಗೂ ತಾಲೂಕಿನ ಜನಸ್ನೇಹಿ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದರು.
ಬಾಲ್ಯವಿವಾಹ ಸೂಚನೆ ಸಿಕ್ಕಿದರೆ ತಿಳಿಸಿ: ತಾಲೂಕಿನ ಯಾವುದೇ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ ಸ್ಥಳೀಯರು ತಮ್ಮ ಗಮನಕ್ಕೆ ತರುವಂತೆ ಪ್ರಭಾರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯ ಸಲಹೆ ನೀಡಿದರು.
ಶಿರಾಡಿ ಬಾಲ್ಯ ವಿವಾಹ ಪ್ರಕರಣ: ಇತ್ತೀಚೆಗೆ ಶಿರಾಡಿಯಲ್ಲಿ ನಡೆದ ಬಾಲ್ಯ ವಿವಾಹದಲ್ಲಿ ವಿವಾಹವಾದವರು ಈತನಕ ಪತ್ತೆಯಾಗಿಲ್ಲ. ಅವರ ಮನೆಯರು ಯಾವುದೇ ಮಾಹಿತಿ ನೀಡುತ್ತಿಲ್ಲ. ತಹಸೀಲ್ದಾರ್, ಶಿಶು ಅಭಿವೃದ್ಧಿ ಇಲಾಖೆಯಿಂದ ಅಲ್ಲಿಗೆ ತೆರೆಳಿದರೂ ಯಾವುದೇ ಮಾಹಿತಿ ದೊರೆಯದ ಕಾರಣ ಮುಂದೆ ತನಿಖೆ ನಡೆಸಿ ಅವರಿಗೆ ವಾರಂಟ್ ಆಗುವ ಸಾಧ್ಯತೆ ಇದೆ ಎಂದು ಸುಕನ್ಯ ತಿಳಿಸಿದರು.
ಸಮಿತಿ ರಚನೆ: ವರದಕ್ಷಿಣೆ ಕಿರುಕುಳ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾದಕ ವಸ್ತು ಸೇವನೆ ತಡೆ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಸಮಿತಿ, ಭಾಗ್ಯಲಕ್ಷ್ಮೀ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಕಾಯ್ದೆ ಸಮಿತಿ, ಬಾಲ್ಯ ವಿವಾಹ ನಿಷೇಧ ಸಮಿತಿ, ಬಾಲ್ಯವಿವಾಹ ತಡೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ತಹಸೀಲ್ದಾರ್ ಅಧ್ಯಕ್ಷರಾಗಿದ್ದು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಪುರಸಭೆ ಅಧಿಕಾರಿ, ಉಪ ನೋಂದಣಾಧಿಕಾರಿ, ನಾಮನಿರ್ದೇಶನ ಸದಸ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ದೈಹಿಕ ಶಿಕ್ಷಣ ಪರಿವೀಕ್ಷಕ ಸಂದರ ಗೌಡ, ಕಾರ್ಮಿಕ ಇಲಾಖೆ ಅಧಿಕಾರಿ ಕೃಷ್ಣಮ್ಮ, ಸರಸ್ವತಿ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಭಾರತಿ ಎಚ್., ನ್ಯಾಯವಾದಿ ಜಗನ್ನಾಥ ರೈ, ತಾಲೂಕು ಅಂಗವಿಕಲರ ಪುನರ್ವಸತಿ ಸಮನ್ವಯಾಧಿಕಾರಿ ನವೀನ್ ಕುಮಾರ್, ಮಹಿಳಾ ಸಾಂತ್ವನ ಕೇಂದ್ರದ ಮಾಲತಿ, ದೀಪಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.