ರಾಜಕೀಯ ಪಕ್ಷಗಳ 'ಶಾಶ್ವತ ಚುನಾವಣೆ ನಿಧಿ'ಗಾಗಿ ಎತ್ತಿನಹೊಳೆ ಯೋಜನೆ: ಟೀಕೆ
ಉಡುಪಿ: ಎತ್ತಿನಹೊಳೆ, ನೇತ್ರಾವತಿ ನದಿ ತಿರುವು ಯೋಜನೆಯು ರಾಜ್ಯದ ರಾಜಕೀಯ ಪಕ್ಷಗಳ 'ಶಾಶ್ವತ ಚುನಾವಣಾ ನಿಧಿ' ಸಂಗ್ರಹ ಮಾಡುವುದಕ್ಕಾಗಿ ಆರಂಭಿಸಲಾಗಿರುವ ಯೋಜನೆ ಎಂದು ರಾಜ್ಯ ರೈತ ಸಂಘ ಉಪಾಧ್ಯಕ್ಷ ವಿಜಯಕುಮಾರ್ ಹೆಗ್ಡೆ ಆರೋಪಿಸಿದ್ದಾರೆ.
ಎತ್ತಿನಹೊಳೆ ಅಥವಾ ನೇತ್ರಾವದಿ ನದಿ ತಿರುವು ಯೋಜನೆ ಜಾರಿಗೊಂಡರೆ ಕರಾವಳಿ ಜಿಲ್ಲೆಗಳಿಗೆ ಎಂತಹ ಅಪಾಯ ಕಾದಿದೆ ಎಂಬುದನ್ನು ಹೆಗ್ಡೆ ತಮ್ಮ ನಿವಾಸದಲ್ಲಿ ಮಾದರಿಯೊಂದನ್ನು ರಚಿಸಿ ವಿವರಣೆ ನೀಡಿದರು.
ಒಂದೆಡೆ ಹತ್ತಿಪ್ಪತ್ತು ವರ್ಷ ಕಳೆದರೂ ಪೂರ್ಣಗೊಳ್ಳದ (30 ವರ್ಷಗಳಿಂದಲೂ ನಡೆಯುತ್ತಿರುವ ನೂರಾರು ಕೋಟಿ ರು. ವ್ಯಯವಾದರೂ ಪೂರ್ಣಗೊಳ್ಳದ ಉಡುಪಿ ಜಿಲ್ಲೆಯ ವಾರಾಹಿ ನೀರಾವರಿ ಯೋಜನೆಯಂತೆ) ಈ ಯೋಜನೆಗೆ ಬಿಡುಗಡೆಯಾಗಲಿರುವ ನೂರಾರು ಕೋಟಿ ರು.ಗಳನ್ನು ಲೂಟಿ ಮಾಡುವುದಕ್ಕೆ, ಇನ್ನೊಂದೆಡೆ ಕಾಲುವೆ ನಿರ್ಮಾಣ ಭೂಸ್ವಾಧೀನದಲ್ಲಿ ಮತ್ತು ಕಾಡಿನ ಮರಗಳನ್ನು ಕಡಿಯುವ ಕಾರ್ಯದಲ್ಲಿ ಕೋಟ್ಯಂತರ ಅವ್ಯವಹಾರ ನಡೆಸುವುದಕ್ಕಾಗಿಯೇ ಈ ಯೋಜನೆಯಲ್ಲಿ ನಮ್ಮ ರಾಜಕಾರಣಿಗಳು ಭಾರಿ ಆಸಕ್ತಿ ತೋರಿಸುತ್ತಿದ್ದಾರೆಯೇ ಹೊರತು, ನೀರಿಲ್ಲದ ಜಿಲ್ಲೆಗಳಿಗೆ ನೀರು ಹರಿಸುವುದಕ್ಕಲ್ಲ ಎಂದವರು ಆರೋಪಿಸಿದರು.
ವರದಿ 'ತಿರುವು'!: ನೀರಾವರಿ ತಜ್ಞ ದಿ. ಪರಮಶಿವಯ್ಯ ವರದಿಯಲ್ಲಿ ನದಿ ತಿರುವು ಎಂಬ ಯೋಜನೆ ಇಲ್ಲವೇ ಇಲ್ಲ. ಅದರಲ್ಲಿ ಕರಾವಳಿಯಲ್ಲಿ ಹರಿಯುವ ನದಿಗಳ ಹೆಚ್ಚುವರಿ ನೀರನ್ನು ಇಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಿ ಬೇರೆ ಜಿಲ್ಲೆಗಳಿಗೆ ಪೂರೈಕೆ ಮಾಡಬಹುದು ಎಂದವರು ಹೇಳಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಆ ವರದಿಯನ್ನು ತಿರುಚಿ ಕೇವಲ ಕೋಟ್ಯಂತರ ರು. ಅವ್ಯವಹಾರಕ್ಕಾಗಿಯೇ ನದಿ ತಿರುವು ಯೋಜನೆ ಜಾರಿಗೊಳಿಸುತ್ತಿದ್ದಾರೆ ಎಂದು ವಿಜಯಕುಮಾರ್ ಹೆಗ್ಡೆ ಹೇಳಿದರು.
ಪಶ್ಚಿಮ ಘಟ್ಟದಲ್ಲಿರುವ ಸಣ್ಣ ನದಿಗಳ ನೀರನ್ನು ಈ ಯೋಜನೆಯಲ್ಲಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಈ ಸಣ್ಣ ನದಿಗಳಿಂದಲೇ ಕರಾವಳಿ ಜಿಲ್ಲೆಯ ಹತ್ತಾರು ಜೀವನದಿಗಳಿಗೆ ನೀರು ಹರಿದು ಬರುತ್ತಿದೆ. ಈ ಸಣ್ಣ ನದಿಗಳಿಂದಲೇ ನೀರು ಹರಿದು ಬಾರದಿದ್ದರೆ ದೊಡ್ಡ ನದಿಯಲ್ಲಿ ನೀರಿನ ತೀವ್ರ ಆಭಾವವಾಗಿ ಜನಜೀವನ, ಕೃಷಿ, ಪ್ರಕೃತಿ, ಪರಿಸರ ಸಂಪೂರ್ಣ ನಾಶವಾಗಲಿದೆ. ಬೇರೆ ಜಿಲ್ಲೆಯ ಜನರ ಬದುಕು ಹಸನುಗೊಳಿಸಲು ಕರಾವಳಿ ಜಿಲ್ಲೆಯ ಜನರ ಬದಕನ್ನು ಹಾಳು ಮಾಡುವುದು ಈ ಯೋಜನೆಯಾಗಿದೆ. ಆದ್ದರಿಂದ ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಗೊಳ್ಳಬಾರದು ಎಂದರು.
ರೈತರಿಗೆ ಸರಿಯಾದ ಮಾಹಿತಿ ನೀಡುವ ಕೆಲಸವನ್ನು ರೈತ ಸಂಘ ಮಾಡುತ್ತಿದೆ ಎಂದವರು ಹೇಳಿದರು. ರೈತ ಸಂಘದ ನಾಯಕ ಶಶಿಧರ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

