ಮೋದಿ ಸುತ್ತ ಸುತ್ತುತ್ತಿದ್ದ ಪ್ರಚಾರವೀಗ ಆಸ್ತಿ ತೆರಿಗೆಯತ್ತ
ಕಾಂಗ್ರೆಸ್ ಜನಾರ್ದನ ಪೂಜಾರಿ, ಬಿಜೆಪಿ ನಳಿನ್ ಕುಮಾರ್ ಕಟೀಲ್, ಆಪ್ನಿಂದ ವಾಸುದೇವ
ಟಿ ಜಿತೇಂದ್ರ ಕುಂದೇಶ್ವರ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮನೆ ಮನೆ ಭೇಟಿ, ಆರೋಪ, ಪ್ರತ್ಯಾರೋಪ ಮೂಲಕ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದೆ.
ಇಲ್ಲಿ ಪ್ರಚಾರದ ಮುಖ್ಯ ವಿಷಯ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಆರು ತಿಂಗಳಿಂದಲೂ ಮೋದಿ ಸುತ್ತಲೂ ಪ್ರಚಾರ ಸುತ್ತುತ್ತಿದೆ. ಮೋದಿ ಅಭಿವೃದ್ಧಿ ಕುರಿತು ಬಿಜೆಪಿ ಪ್ರಚಾರ ಮಾಡಿದರೆ ಕಾಂಗ್ರೆಸ್ ಮೋದಿ ಅಡಳಿತ ಕುರಿತ ಟೀಕೆ, ಪತ್ನಿ ಕುರಿತ ವಿಚಾರಗಳನ್ನೇ ಮುಂದಿಟ್ಟುಕೊಂಡು ಆರೋಪ, ಪ್ರತ್ಯಾರೋಪ, ಪ್ರಚಾರದಲ್ಲಿ ತೊಡಗಿವೆ.
ಮೋದಿ ಸಮಾವೇಶ, ಚಾಯ್ಪೆ ಚರ್ಚಾ ಇತ್ಯಾದಿ ಬಹಿರಂಗ ಪ್ರಚಾರ ಕಾರ್ಯಕ್ರಮಗಳಲ್ಲಿ ಮುಂದಿದೆ. ಇವರಿಗೆ ಜತೆಯಾಗಿ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಆರ್ಎಸ್ಎಸ್ ಸಾಥ್ ನೀಡುತ್ತಿವೆ.
ಕಾಂಗ್ರೆಸ್ಗೆ ಪ್ರೈಮರೀಸ್ ಚುನಾವಣೆಯಿಂದಾಗ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿದದ್ದೇ ಗೊತ್ತಾಗಿರಲಿಲ್ಲ. ಕಾರ್ಯಕರ್ತರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರಿಂದ ಜನಾರ್ದನ ಪೂಜಾರಿ ಅವರಿಗೆ ಒಂದು ಥರಾ ಪೂರ್ವಭಾವಿ ಪರೀಕ್ಷೆ ತೇರ್ಗಡೆಯಾದ ಅನುಭವ ನೀಡಿದೆ. ಪಾದಯಾತ್ರೆ, ಮನೆ ಮನೆ ಭೇಟಿ ನೀಡುತ್ತಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅತಿ ಹೆಚ್ಚು ಸಂಸದರ ನಿಧಿ ಬಳಕೆ ಮಾಡಿದ ವಿಚಾರವನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸಿಗರು ನಳಿನ್ ಕುಮಾರ್ ಜಾತಿ ಶೆಟ್ಟಿ ಎಂಬುದನ್ನು ಹೆಚ್ಚಿನ ಒತ್ತು ನೀಡಿ ಉಲ್ಲೇಖಿಸುವ ಮೂಲಕ ಬಿಲ್ಲವ ಜಾತಿ ಮತಗಳು ತಮಗೇ ಬೀಳಲಿ ಎಂಬ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ.
ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಪ್ರೇರಿತವಾಗಿ ರೌಡಿ ಶೀಟರ್ ಪಟ್ಟಿ ದಾಖಲಿಸುವ ಕುರಿತು, ಕಲ್ಲಡ್ಕ ಕಾಂಗ್ರೆಸ್ ಸಭೆಯಲ್ಲಿ ಕಲ್ಲುತೂರಾಟದಲ್ಲಿ ಬಹುಸಂಖ್ಯಾತರ ಮೇಲೆ ಕೇಸ್, ಪೊಲೀಸರ ವರ್ಗಾವಣೆ ವಿಚಾರಗಳು ಪ್ರಚಾರದಲ್ಲಿ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ಆಂತರಿಕ ಚುನಾವಣೆ ಸಂದರ್ಭ ಎತ್ತಿನಹೊಳೆ ಸದ್ದು ಮಾಡಿದ್ದು ಬಿಟ್ಟರೆ ಕಾಂಗ್ರೆಸ್ ಮತ್ತು ಬಿಜೆಪಿ ಎತ್ತಿನಹೊಳೆ ವಿಚಾರವನ್ನು ಬದಿಗಿಟ್ಟಿದೆ.
ಚರ್ವಿತ ಚರ್ವಣ ಪ್ರಚಾರಗಳು ನಡೆಯುತ್ತಿರುವಾಗಲೇ ಮಂಗಳೂರಲ್ಲಿ ಏಕಾಏಕಿ ಸ್ವಯಂಘೋಷಿತ ಆಸ್ತಿ ತೆರಿಗೆ ಮತ್ತು ಘನತ್ಯಾಜ್ಯ ವಿಲೇವಾರಿ ಕರ ಹೆಚ್ಚಳ ಮಾಡಿರುವುದು ಪ್ರಚಾರಕ್ಕೆ ಹೊಸ ದಿಕ್ಕು ನೀಡಿದೆ.
ಕಳೆದ ವರ್ಷ ಪಾಲಿಕೆ ಚುನಾವಣೆ ಉಸ್ತುವಾರಿ ವಹಿಸಿದ್ದ ವೇಳೆ ಬಿ.ಜನಾರ್ದನ ಪೂಜಾರಿ ತೆರಿಗೆಯನ್ನು ಮುಂದಿನ ಐದು ವರ್ಷಗಳ ಕಾಲ ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಅಂದು ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಶಾಸಕರು ಆಡಳಿತಾಧಿಕಾರಿ ತೆರಿಗೆ ಹೆಚ್ಚಳ ಮಾಡಿದ ನಿರ್ಣಯದ ನಡಾವಳಿಗೆ ಸಹಿ ಮಾಡಿರುವುದನ್ನು ಭಾನುವಾರ ಕನ್ನಡಪ್ರಭ ವಿಶೇಷ ವರದಿ ಮೂಲಕ ಬಹಿರಂಗಗೊಳಿಸಿತ್ತು.
ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದರೆ ನೀತಿ ಸಂಹಿತೆ ಉಲ್ಲಂಘನೆ, ಭರವಸೆ ನೀಡದಿದ್ದರೆ ಜನರಿಗೆ ವಂಚನೆ ಮಾಡಿದ ಆರೋಪ ಹೊತ್ತಿಕೊಳ್ಳಬೇಕಾದ ಪರಿಸ್ಥಿತಿ. ಆದರೂ ಮೇಯರ್ ಮತ್ತು ಕಾರ್ಪೊರೇಟರ್ಗಳನ್ನು ಕಾಂಗ್ರೆಸ್ ಕಚೇರಿಗೆ ಕರೆಯಿಸಿ ಪೂಜಾರಿ ಸುದ್ದಿಗೋಷ್ಠಿ ನಡೆಸಿ ಭರವಸೆ ನೀಡಿ, ಆಡಳಿತಾಧಿಕಾರಿಗಳೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಕೂಡಾ ಇದನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ವಂಚನೆ, ನೀತಿಸಂಹಿತೆ ಉಲ್ಲಂಘನೆ ಮಾಡಿದೆ ಎಂಬ ಆರೋಪ ಮಾಡುತ್ತಿದೆ. ಆದರೆ ಬಿಜೆಪಿ ಆಡಳಿತ ಇದ್ದಾಗ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಕಾಂಗ್ರೆಸ್ ಎತ್ತಿ ತೋರಿಸಿ ಟೀಕಿಸುತ್ತಿದೆ.
ಉಳಿದವರು ಕಂಡಂತೆ...: ಆಮ್ ಆದ್ಮಿ ಪಕ್ಷದವರು 15 ಸಾವಿರ ಸದಸ್ಯರನ್ನು ನೋಂದಾವಣೆ ಮಾಡುವ ಮೂಲಕ ಪ್ರಮುಖ ಪಕ್ಷಗಳನ್ನು ಚಿವುಟುತಿದ್ದಾರೆ. ಜತೆಗೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನ ಮಾಡಲೂ ಶ್ರಮಿಸುತ್ತಿದ್ದಾರೆ. ಆಪ್ ಅಭ್ಯರ್ಥಿ ವಿಮಾನ ನಿಲ್ದಾಣ ಪ್ರಾಧಿಕಾರ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ, ತಮ್ಮ ಮೇಲಿರುವ 'ಆಮ್ ಆದ್ಮಿ ಅಲ್ಲ' ಎಂಬ ಆರೋಪಕ್ಕೆ ಸ್ಪಷ್ಟನೆ ನೀಡುತ್ತಾ, ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಪಿಐಎಂ ಆಭ್ಯರ್ಥಿ ಯಾದವ ಶೆಟ್ಟಿ ಘೋಷಣೆಯಾಗಿದ್ದು ಮಾತ್ರ ಸಾಧನೆ. ಕಟ್ಟರ್ ಮತಗಳು ಬಿದ್ದರೆ ಸಾಕು ಎಂಬ ಅಲ್ಪತೃಪ್ತಿಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾರ್ಮಿಕ ಮುಖಂಡ ಸುದತ್ತ ಜೈನ್ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ತಮ್ಮ ಹೋರಾಟಗಳನ್ನು ನೋಡಿ ಮತ ನೀಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಕಳೆದ ಬಾರಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವ ಮಾಜಿ ಶಾಸಕ ಕೆ.ಕುಶಲ ಈ ಬಾರಿ ಲೋಕಸಭೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಜೆಡಿಎಸ್ ಇಲ್ಲಿ ಸ್ಪರ್ಧಿಸುವ ಉತ್ಸಾಹ ತೋರಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

