ನೀತಿ ಸಂಹಿತೆ ಉಲ್ಲಂಘನೆ ದೂರು; ಬಂಟ್ವಾಳ ಪುರಸಭೆಗೆ ದಿಢೀರ್ ದಾಳಿ
ಬಂಟ್ವಾಳ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಬಂಟ್ವಾಳ ಪುರಸಭೆಯಲ್ಲಿ ಪುರಸಭಾ ಸದಸ್ಯರೊಬ್ಬರ ಉಪಸ್ಥಿತಿಯಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಕಚೇರಿಗೆ ಹಠಾತ್ ದಾಳಿ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಗಣೇಶ್ ಪುರಸಭೆಯಲ್ಲಿ ಸಭೆ ನಡೆಸುತ್ತಿದ್ದು, ಇದು ನೀತಿಸಂಹಿತೆ ಉಲ್ಲಂಘನೆ ಎಂಬ ಬಗ್ಗೆ ಬಂಟ್ವಾಳ ತಹಸೀಲ್ದಾರರಿಗೆ ದೂರು ಹೋಗಿತ್ತು. ಈ ಮಾಹಿತಿ ಪಡೆದ ತಹಸೀಲ್ದಾರ್ ಪುರಸಭೆ ಮುಖ್ಯಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸದಂತೆ ಸೂಚಿಸಿ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಆದರೂ ಮುಖ್ಯಾಧಿಕಾರಿಯವರು ಗೌರವಧನದ ಆಧಾರದಲ್ಲಿ ದುಡಿಯುವ ಸುಮಾರು ನಲ್ವತ್ತು ಮಂದಿ ನೀರು ಸರಬರಾಜು ಮಾಡುವ ನೌಕರರ ಸಭೆಯನ್ನು ಮಧ್ಯಾಹ್ನ ಆಯೋಜಿಸಿದ್ದರು. ಮುಖ್ಯಾಧಿಕಾರಿ ಕಾರ್ಯ ನಿಮಿತ್ತ ಮಂಗಳೂರಿಗೆ ತೆರಳಿದ್ದು ಸಂಜೆ ವಾಪಸ್ ಬಂದಿದ್ದಾರೆ. ಅದುವರೆಗೂ ನೌಕರರು ಕಾದು ಕುಳಿತಿದ್ದು, ಸಂಜೆ ಸಭೆ ಆರಂಭಿಸಿದರು.
ಈ ಸಂದರ್ಭ ತಹಸೀಲ್ದಾರ್ಗೆ ಮತ್ತೆ ದೂರು ಹೋಗಿದ್ದು, ಪುರಸಭಾ ಸದಸ್ಯರೊಬ್ಬರು ಸಭೆಯಲ್ಲಿ ಉಪಸ್ಥಿತರಿದ್ದಾರೆ ಎಂಬ ದೂರು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಮಲ್ಲೇಸ್ವಾಮಿ, ಚುನಾವಣೆ ಶಾಖೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಚುನಾವಣಾ ಸಿಬ್ಬಂದಿ ಬಂದಾಗ ಅಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಅಧಿಕಾರಿಗಳೇ ಈ ಸಭೆಯನ್ನು ಆಯೋಜಿಸಿದ್ದಾರೆ ಮತ್ತು ಯಾವ ಪುರಸಭಾ ಸದಸ್ಯರೂ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂಬುದು ಖಚಿತಗೊಂಡಿತು ಎನ್ನಲಾಗಿದೆ.
ಬಂಟ್ವಾಳ ಪುರಸಭೆಯಲ್ಲಿ ನೀರಿನ ಸಮಸ್ಯೆ ಕುರಿತಾಗಿ ಅಧಿಕಾರಿಗಳೇ ಸಭೆ ನಡೆಸಿದ್ದು ಇದು ನೀತಿಸಂಹಿತೆ ಉಲ್ಲಂಘನೆಯಲ್ಲ. ಪುರಸಭಾ ಸದಸ್ಯರೊಬ್ಬರು ಸಭೆಯಲ್ಲಿ ಉಪಸ್ಥಿತರಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ ಎಂದು ತಹಸೀಲ್ದಾರ್ ಮಲ್ಲೇಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

