ದಕ್ಷಿಣ ಕನ್ನಡ

ಯಕ್ಷಗಾನ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅಸ್ವಸ್ಥ

Published On :

ಬಂಟ್ವಾಳ/ ಮಂಗಳೂರು: ಯಕ್ಷಗಾನದ ಹಿರಿಯ ಕಲಾವಿದ, ಹೊಸನಗರ ಮೇಳದ ಪ್ರಧಾನ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅವರಿಗೆ ಗುರುವಾರ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿದ್ದು, ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ ಬೆಳಗ್ಗೆ ಕುಂದಾಪುರದ ಯಕ್ಷಗಾನ ಮುಗಿಸಿ, ತಲ್ಲೂರಿಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಇವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡುಬಂದಿದೆ ಎನ್ನಲಾಗಿದೆ.
 ಬುಧವಾರ ಸಂಜೆ ವೇಳೆಗೆ ತೀವ್ರವಾದ ತಲೆನೋವು ಇವರನ್ನು ಬಾಧಿಸಿದ್ದು, ರಾತ್ರಿ ಯಕ್ಷಗಾನ ಪ್ರದರ್ಶನವಿದ್ದ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ರಾತ್ರಿಯ ಯಕ್ಷಗಾನ ಪ್ರದರ್ಶನದಲ್ಲಿ ಚೆನ್ನಪ್ಪ ಶೆಟ್ಟಿಯವರು ವೇಷ ಧರಿಸಿ ಪಾತ್ರವನ್ನೂ ನಿರ್ವಹಿಸಿದ್ದರು. ಗುರುವಾರ ಬೆಳಗ್ಗೆ ಕುಂದಾಪುರದಿಂದ ರಾತ್ರಿಯ ತ್ರಿಪುರ ಪಥನ ಯಕ್ಷಗಾನ ಪ್ರದರ್ಶನಕ್ಕಾಗಿ ತಲ್ಲೂರಿಗೆ ತೆರಳುತ್ತಿದ್ದಾಗ ಮತ್ತೆ ತೀವ್ರ ತಲೆನೋವು ಕಾಣಿಸಿಕೊಂಡು, ವಾಂತಿಯೂ ಆದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ವೈದ್ಯರ ಪರೀಕ್ಷೆ ನಡೆಸಿ, ಮೆದುಳಿಗೆ ಸಂಬಂಧಿಸಿದ ಕಾಯಿಲೆ ಉಲ್ಭಣಗೊಂಡು ಅವರು ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆ ಬಗ್ಗೆ ಸೂಚನೆ ನೀಡಿ, ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚೆನ್ನಪ್ಪ ಶೆಟ್ಟಿಯವರನ್ನು ಪರೀಕ್ಷಿಸಿದ ವೈದ್ಯರು, ಬ್ರೈನ್‌ಟ್ಯೂಮರ್ ಇದೆ ಎಂದಿದ್ದರು. ಇದೀಗ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರು ಯಕ್ಷರಂಗದ ಮೆರು ಕಲಾವಿದ ಎಂಬ ಕೀರ್ತಿಗೆ ಪಾತ್ರರಾದವರು.
ಅತ್ಯುತ್ತಮ ಅರ್ಥಧಾರಿ, ವಾಗ್ಮಿ ಎಂಬ ಹಿರಿಮೆ ಇವರಿಗಿದೆ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರು ಸಾತ್ವಿಕ ಪಾತ್ರಗಳಿಗೆ ಹೆಸರಾಗಿದ್ದು, ರಾಮ, ಕೃಷ್ಣ, ಬ್ರಹ್ಮ, ದೇವಿ ಹೀಗೆ ಯಾವುದೇ ಪಾತ್ರಗಳಿಗೂ ಜೀವ ತುಂಬುವ ಸಾಮರ್ಥ್ಯ ಇವರಲ್ಲಿದೆ.
ಈ ಹಿಂದೆ ಪೆರ್ಡೂರು, ಕಟೀಲು, ಎಡನೀರು, ಕದ್ರಿ ಮೇಳ ಸೇರಿದಂತೆ ಹಲವು ಯಕ್ಷಗಾನ ಸಂಸ್ಥೆಗಳಲ್ಲಿ ಗಣನೀಯ ಪಾತ್ರಗಳನ್ನು ನಿರ್ವಹಿಸಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಕಳೆದ ಕೆಲವು ವರ್ಷಗಳಿಂದ ಹೊಸನಗರ ಮೇಳದ ಪ್ರಮುಖ ಕಲಾವಿದರಾಗಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.