ರಸ್ತೆ ದುರಸ್ತಿ ಕಡೆಗಣನೆ ವಿರೋಧಿಸಿ ನೋಟಾ ಚಲಾಯಿಸಲು ನಿರ್ಧಾರ
ಬೆಳ್ತಂಗಡಿ: ಮೂಲ ಸೌಕರ್ಯ ಸಿಗದಿರುವುದುನ್ನು ವಿರೋಧಿಸಿ ಅಲ್ಲಲ್ಲಿ ಚುನಾವಣಾ ಬಹಿಷ್ಕಾರ ಘೋಷಣೆಯಾಗುವುದು ಸಾಮಾನ್ಯ. ಆದರೆ, ಇಲ್ಲೊಂದು ಊರಿನವರು, ಮತದಾನರ ವಿಶೇಷ ಅಧಿಕಾರವಾದ 'ನೋಟಾ' ಮತ ಚಲಾಯಿಸಿ ತಮ್ಮೂರಿಗಾದ ಅನ್ಯಾಯ ವಿರೋಧಿಸಲು ಸಜ್ಜಾಗಿದ್ದಾರೆ.
ಎರಡು ದಶಕಗಳಿಂದ ದುರಸ್ತಿಯಾಗದೆ ಉಳಿದಿರುವ ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಯ ದುಃಸ್ಥಿತಿಗೆ ಕಾರಣವಾಗಿರುವ ಜನಪ್ರತಿನಿಧಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸಲಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಡಾಜೆ- ಕಲ್ಮಂಜ ಸರ್ವಋತು ರಸ್ತೆ ಹೋರಾಟ ಸಮಿತಿ ಸಲಹೆಗಾರ ನಾಮದೇವ ರಾವ್ ಮುಂಡಾಜೆ ಈ ವಿಚಾರ ತಿಳಿಸಿದರು.
ಹಲವು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಪಕ್ಷತೀತ ಹೋರಾಟ ನಡೆಸುತ್ತಾ ಬಂದಿದ್ದರೂ ನಮ್ಮ ಹೋರಾಟಕ್ಕೆ ಯಾರು ಬೆಲೆ ನೀಡಿಲ್ಲ.
ಶಾಸಕರು, ಸಂಸದರು, ಸಚಿವರಿಗೆ ನಿರಂತರ ಮನವಿ ಸಲ್ಲಿಸುತ್ತಾ ಬರುತ್ತಿದ್ದೇವೆ. ಆದರೂ ರಸ್ತೆ ಅಭಿವೃದ್ಧಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಾವುದೇ ಮುಖಂಡರಿಗೆ ನಮ್ಮ ಗ್ರಾಮಗಳಲ್ಲಿ ಬಂದು ಮತ ಯಾಚಿಸಲು ನೈತಿಕ ಹಕ್ಕೇ ಇಲ್ಲವಾಗಿದೆ ಎಂದರು.
ಮಾತುಕತೆಗೆ ಗಡುವು: ವಾರದೊಳಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ತಮ್ಮಲ್ಲಿಗೆ ಬಂದು ಮಾತುಕತೆ ನಡೆಸಲಿ. ಬಳಿಕ ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಮತದಾನ ತಿರಸ್ಕಾರ ಹಾಗೂ ಉಗ್ರ ಹೋರಾಟ ನಡೆಸಲು ಸಿದ್ದರಿದ್ದೇವೆ ಎಂದರು.
ಸರ್ವಋತು ರಸ್ತೆ ಹೋರಾಟ ಸಮಿತಿ ಸಂಚಾಲಕ ಮುಂಡಪ್ಪ, ಇಷ್ಟು ವರ್ಷಗಳಿಂದ ವಂಚಿಸುತ್ತಾ ಬಂದಿರುವ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ ಈ ಬಾರಿ ನಕರಾತ್ಮಕ ಮತದಾನದ ಮೂಲಕ ತಿರುಗೇಟು ನೀಡುತ್ತೇವೆ. ಈ ಬಾರಿ ನಮಗೆ ಯಾವುದೇ ಸಕರಾತ್ಮಕ ಉತ್ತರ ಸಿಗದಿದ್ದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಇದೇ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಅಧ್ಯಕ್ಷ ಹಾಗೂ ಮುಂಡಾಜೆ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ನಾಗರಾಜ ನಾಯ್ಕ್, ಕೋಶಾಧಿಕಾರಿ ಹಾಗೂ ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಸಾಂತಪ್ಪ ಗೌಡ, ಕಾನೂನು ಸಲಹೆಗಾರ ಶೈಲೇಶ್ ಠೋಸರ್, ಜನತಾದಳದ ತಾಲೂಕು ಪ್ರ. ಕಾರ್ಯದರ್ಶಿ ರಾಮಾಚಾರಿ, ಸದಸ್ಯರಾದ ಕೃಷ್ಣಪ್ಪ, ಜಗನ್ನಾಥ ಶೆಟ್ಟಿ, ಹರೀಶ್ ಗೌಡ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

