ಬಂಟ್ವಾಳ ತಾ.ಪಂ. ಮೀಸಲು ಪ್ರಕಟ: ಗದ್ದುಗೆಗೆ ಭಾರಿ ಪೈಪೋಟಿ ನಿರೀಕ್ಷೆ
ಬಂಟ್ವಾಳ: ಇಲ್ಲಿನ ತಾಲೂಕು ಪಂಚಾಯಿತಿ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟು ಸರ್ಕಾರ ಆದೇಶ ಹೊರಡಿಸಿದೆ.
ಒಟ್ಟು 33 ಸದಸ್ಯ ಬಲದ ಬಂಟ್ವಾಳ ತಾ.ಪಂ.ನಲ್ಲಿ ಬಿಜೆಪಿ 17, ಕಾಂಗ್ರೆಸ್ 16 ಸ್ಥಾನಗಳನ್ನು ಹೊಂದಿದೆ. ಈಗಿನ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್, ಉಪಾಧ್ಯಕ್ಷ ಆನಂದ ಶಂಭೂರು ಅಧಿಕಾರದ ಅವಧಿ ಜೂ.9ಕ್ಕೆ ಸಮಾಪನಗೊಳ್ಳಲಿದೆ.
3ನೇ ಅವಧಿಗೆ ಪ್ರಕಟಗೊಂಡ ಅಧ್ಯಕ್ಷ ಹುದ್ದೆಯ ಮೀಸಲಾತಿಗೆ ಬಿಜೆಪಿಯಿಂದ ತಾಲೂಕು ಪಂಚಾಯಿತಿನ ಹಾಲಿ ಉಪಾಧ್ಯಕ್ಷ ಆನಂದ ಶಂಭೂರು, ಸದಸ್ಯರಾದ ವಸಂತ ಅಣ್ಣಳಿಕೆ, ಯಶವಂತ, ರಮೇಶ್ ಕುಡುಮೇರು, ಹರೀಶ್ ದೇವಸ್ಯ ಅರ್ಹರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿರುವುದರಿಂದ ಎಲ್ಲಾ ಮಹಿಳಾ ಸದಸ್ಯರು ಇದಕ್ಕೆ ಅರ್ಹತೆ ಹೊಂದಿದ್ದಾರೆ.
ಕಸರತ್ತು ನಡೆದಿತ್ತು: 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಂಗಡಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಲಲಿತಾ ಶಿವಪ್ಪ ನಾಯ್ಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಇದ್ದು, ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ನಾನಾ ಕಸರತ್ತು ನಡೆಸಿತ್ತು. ಕೊನೆ ಕ್ಷಣದಲ್ಲಿ ಕಡೇಶ್ವಾಲ್ಯ ಕ್ಷೇತ್ರದ ಸದಸ್ಯೆ ಗೈರು ಹಾಜರಾದ ಹಿನ್ನೆಲೆಯಲ್ಲಿ, ಆಯ್ಕೆ ಪ್ರಕ್ರಿಯೆಯಲ್ಲೂ ಸಮಾನ ಮತಗಳಿಕೆ ಇದ್ದ ಕಾರಣದಿಂದ ನಡೆದ ಅದೃಷ್ಟಚೀಟಿಯ ಆಟದಲ್ಲಿ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯ ಆನಂದ ಶಂಭೂರುಗೆ ಒಲಿದಿತ್ತು.
ಹೀಗೆ ಗೈರುಹಾಜರಾಗಿದ್ದ ಸದಸ್ಯೆ ಬಳಿಕ ತಾ.ಪಂ. ಸಭೆಗೆ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಗೊಂಡು ಉಪ ಚುನಾವಣೆ ನಡೆದು ಇಲ್ಲಿ ಬಿ.ಜೆ.ಪಿ. ಗೆಲವು ಸಾದಿಸಿ ತನ್ನ ಅಧಿಕಾರವನ್ನು ಭದ್ರ ಪಡಿಸಿಕೊಂಡಿದೆ.
ಪೈಪೋಟಿ ನಿರೀಕ್ಷೆ...: ಆಡಳಿತ ಪಕ್ಷ ಬಿಜೆಪಿಯಲ್ಲಿ ಎರಡನೇ ಅವಧಿಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಹಾಲಿ ಉಪಾಧ್ಯಕ್ಷ ಆನಂದ ಶಂಭೂರು ಸಹಿತ ವಸಂತ ಅಣ್ಣಳಿಕೆ, ರಮೇಶ್ ಕುಡುಮೇರು, ಯಶವಂತ, ಹರೀಶ್ ದೇವಸ್ಯ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅನ್ವಯ ಅರ್ಹರಾಗಿರುವುದರಿಂದ ಈ ಬಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಎಲ್ಲಾ ಮಹಿಳಾ ಸದಸ್ಯೆಯರು ಅರ್ಹರಾಗಿರುವುದರಿಂದ ಪೈಪೋಟಿ ನಡೆಯಲೂಬಹುದು.
ಈ ನಡುವೆ, ಒಂದು ಸ್ಥಾನದ ಕೊರತೆಯಿಂದಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿರುವ ಕಾಂಗ್ರೆಸ್ ಕೂಡ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರ ಹೆಣೆಯುವ ಸಾಧ್ಯತೆ ಇದೆ. ಪಕ್ಷಗಳೊಳಗಿನ ಪೈಪೋಟಿಯೂ ಇಲ್ಲಿ ಎಲ್ಲರ ನಿರೀಕ್ಷೆಗಳನ್ನೂ ಸುಳ್ಳಾಗಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

