ದಕ್ಷಿಣ ಕನ್ನಡ

ಡಿಸೆಂಬರ್‌ಗೆ ತುಳು ವಚನ ಸಂಪುಟ ಬಿಡುಗಡೆ: ಡಾ.ಎಂ.ಎಂ ಕಲಬುರ್ಗಿ

Published On :

ಮಂಗಳೂರು: ಶರಣರ 2,500 ವಚನಗಳನ್ನು ತುಳುವಿಗೆ ಅನುವಾದ ಮಾಡುವ ಯೋಜನೆ ಪ್ರಗತಿಯಲ್ಲಿದ್ದು, 2014ರ ಡಿಸೆಂಬರ್‌ನಲ್ಲಿ ಈ ಸಂಪುಟ ಬಿಡುಗಡೆಗೊಳಿಸಲಾಗುವುದು ಎಂದು ಬೆಂಗಳೂರು ಬಸವ ಸಮಿತಿ ನಿರ್ದೇಶಕ ಡಾ.ಎಂ.ಎಂ. ಕಲಬುರ್ಗಿ ಹೇಳಿದ್ದಾರೆ.
 ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರದ ನೆರವಿನಿಂದ ವಚನ ಸಾಹಿತ್ಯ, ಬಹುಭಾಷಾ ಅನುವಾದ ಯೋಜನೆ ಆರಂಭಿಸಲಾಗಿದೆ. ಮೊದಲನೆಯ ಹಂತದಲ್ಲಿ ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಲಿ, ಪಂಜಾಬಿ, ಸಂಸ್ಕೃತ, ಉರ್ದು ಭಾಷೆಗಳಿಗೆ ಅನುವಾದ ಮಾಡಿದ್ದು, 2013ರಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಿಡುಗಡೆಗೊಳಿಸಿದ್ದರು ಎಂದರು.
 ಎರಡನೇ ಹಂತದಲ್ಲಿ ಒಟ್ಟು ಹತ್ತು ಭಾಷೆಗಳಿಗೆ ಅನುವಾದ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ತುಳು ಭಾಷೆ ಕೂಡ ಸೇರಿಕೊಂಡಿದೆ. ಸಿಂಧಿ, ಗುಜರಾತಿ, ರಾಜಸ್ಥಾನಿ, ಕಾಶ್ಮೀರಿ, ಒರಿಯಾ, ಕೊಂಕಣಿ, ಮೈಥಿಲಿ, ಸಂತಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಅನುವಾದ ಮಾಡಲಾಗುತ್ತಿದೆ ಎಂದರು.
 ತುಳು ಅನುವಾದದಲ್ಲಿ 2,500 ಲೋಕಮಾನ್ಯ ವಚನಗಳನ್ನು ಆರಿಸಿಕೊಳ್ಳಲಾಗಿದೆ. ಅನುವಾದ ಮಾಡಲು ಸರಳವಾಗಿರುವ ಹಾಗೂ ಸಾಹಿತ್ಯಕವಾಗಿರುವ ವಚನಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ 'ವಚನ್‌' ಎಂಬ ಶೀರ್ಷಿಕೆ ಇಡಲಾಗಿದೆ. ಕರ್ನಾಟಕ ಸರ್ಕಾರದಿಂದ ಯೋಜನೆಗಾಗಿ ರು. 1 ಕೋಟಿ ಅನುದಾನ ಸಿಕ್ಕಿದೆ ಎಂದರು.
 ಇದೇ ಸಂದರ್ಭ ವಚನಗಳ ತುಳು ಅನುವಾದ ಯೋಜನೆ ಪ್ರಧಾನ ಸಂಪಾದಕ ಡಾ.ಬಿ.ಎ. ವಿವೇಕ ರೈ ಮಾತನಾಡಿ, ತುಳು ಅನುವಾದ ಕೆಲಸದಲ್ಲಿ ಒಟ್ಟು 10 ಮಂದಿ ತುಳು ಸಾಹಿತಿಗಳು, ತಜ್ಞರು ತೊಡಗಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಕೆಲಸ ಪ್ರಾರಂಭಿಸಿದ್ದು, ಶೇ. 60 ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಈ ಪ್ರಯುಕ್ತ ಮೇ 10 ಮತ್ತು 11 ರಂದು ನಗರದಲ್ಲಿ ತುಳು ಅನುವಾದಕರ ಕಮ್ಮಟ ಹಮ್ಮಿಕೊಳ್ಳಲಾಗಿದೆ ಎಂದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ತುಳು ಅನುವಾದಕರಾದ ಮುಂಬೈ ಡಾ. ಸುನೀತಾ ಶೆಟ್ಟಿ, ಡಾ. ವಾಮನ ನಂದಾವರ, ಡಾ. ವಸಂತ ಕುಮಾರ್ ಪೆರ್ಲ, ಮುದ್ದು ಮೂಡುಬೆಳ್ಳೆ, ಎನ್.ಪಿ. ಶೆಟ್ಟಿ, ಜಿ.ಪಿ. ಕುಸುಮಾ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಟಿ.ಎ.ಎನ್. ಖಂಡಿಗೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.