ಸತ್ಪಾತ್ರರಿಗೆ ಪ್ರಶಸ್ತಿ ನೀಡಿದಾಗ ಗೌರವ, ಮೌಲ್ಯ ಹೆಚ್ಚಳ: ಪುತ್ತಿಗೆ ಶ್ರೀ
ಉಡುಪಿ: ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ಅಪಾತ್ರರಿಗೆ ಸೇರುವುದು ಹೆಚ್ಚಾಗುತ್ತಿದೆ. ಸತ್ಪಾತ್ರರ ಕೈಗೆ ಪ್ರಶಸ್ತಿ ಸೇರಿದಾಗ ಪ್ರಶಸ್ತಿಯ ಗೌರವ ಉಳಿಯುವ ಜತೆಗೆ ಮೌಲ್ಯ ಹೆಚ್ಚುತ್ತದೆ ಎಂದು ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಬೆಂಗಳೂರು ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಮತ್ತು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರವಿವಾರ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಚಿದಾನಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಭಾಷಾ ವಿದ್ವಾಂಸ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಯು.ಪಿ. ಉಪಾಧ್ಯಾಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಪ್ರಶಸ್ತಿಯನ್ನು ಅತ್ಯಂತ ಸೂಕ್ತ ವ್ಯಕ್ತಿಗೆ ಆಯ್ಕೆ ಸಮಿತಿ ನೀಡಿರುವುದು ಸ್ವಾಗತಾರ್ಹವಾಗಿದೆ. ಅನೇಕರಿಗೆ ವಿದ್ವತ್ತಿನ ಜತಗೆ ಅಹಂಕಾರವೂ ಬರುತ್ತದೆ. ನಮ್ಮ ವಿದ್ವತ್ ವಿನಯದಲ್ಲಿ ಪರ್ಯಾವಸಾನವಾದಾಗ ನಿಜವಾದ ವಿದ್ವತ್ ನಾವು ಪಡೆಯುತ್ತೇವೆ ಎಂದರು.
ವಿನಯ ನಮ್ಮಲ್ಲಿ ಯಾವಾಗ ಬರುತ್ತದೆ ಎಂದರೆ ನಾವು ನಮ್ಮನ್ನು ಸಣ್ಣವ ಎಂದು ತಿಳಿದುಕೊಂಡಾಗ. ತಮ್ಮನ್ನು ತಾವು ಅಲ್ಪರೆಂದು ತಿಳಿದುಕೊಂಡಾಗ ನಿಜವಾದ ಜ್ಞಾನಿಗಳಾಗುತ್ತೇವೆ. ಯು.ಪಿ. ಉಪಾಧ್ಯಾಯರು ತುಳು ಭಾಷೆಗೆ ನೀಡಿದ ಸಂಶೋಧನಾ ಕಾಣಿಕೆಗಳು ತುಳು ನಾಡು ಇರುವವರೆಗೆ ಇರುತ್ತದೆ ಎಂದರು.
ವಿದ್ವಾಂಸರು ಹಾಗೂ ಹಿರಿಯಡ್ಕದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಅಭಿನಂದನಾ ಭಾಷಣ ಮಾಡಿ, ತುಳು ಭಾಷೆಗೆ ನಿಘಂಟನ್ನು ರಚಿಸಿರುವುದು ಯು.ಪಿ. ಉಪಾಧ್ಯಾಯರ ಜೀವ ಮಾನದ ಶ್ರೇಷ್ಠ ಸಾಧನೆಯಾಗಿದೆ. ಸಂಶೋಧಕನಿಗೆ ಬೇಡವಾದ ವಿಷಯಗಳೇ ಇಲ್ಲ. ಉಪಾಧ್ಯಾಯರು ಅನೇಕ ಶಾಸ್ತ್ರಗಳ, ಭಾಷೆಗಳ ಪೂರಕ ಅರಿವನ್ನು ಹೊಂದಿದ್ದರು. ಆಫ್ರಿಕಾದ ದೇಶವೊಂದಕ್ಕೆ ತೆರಳಿ ಅಲ್ಲಿ ನಮ್ಮ ಸಂಸ್ಕೃತಿಯ ಪ್ರಸಾರ ಮತ್ತು ಅಲ್ಲಿನ ಸಂಸ್ಕೃತಿಯ ಅಧ್ಯಯನ ಮಾಡಿದ್ದಾರೆ. ಅಧ್ಯಯನದ ಕುರಿತು ದ್ರಾವೀಡಿಯನ್ ಆ್ಯಂಡ್ ನೀಗ್ರೋ ಆಫ್ರಿಕನ್ ಎಂಬ ಪುಸ್ತಕ ರಚಿಸಿದರು. ತುಳು ಜಾನಪದ ಕ್ಷೇತ್ರದಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿ ತುಳು ಸಂಸ್ಕೃತಿಯ ಹಿರಿಮೆಯನ್ನು ದೇಶ ವಿದೇಶಗಳ ವಿದ್ವಾಂಸರು ಅರಿಯುವಂತೆ ಮಾಡಿದ್ದಾರೆ ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯ ಖಜಾಂಚಿ ಶಿವಕುಮಾರ್ ಉಪಸ್ಥಿತರಿದ್ದರು.
ಕನ್ನಡ ಶಕ್ತಿ ಕೇಂದ್ರದ ಸಂಚಾಲಕ ಗಾನಂ ಚಂದ್ರಶೇಖರ್ ಸ್ವಾಗತಿಸಿದರು, ಡಾ.ಎಸ್.ಎಲ್. ಶ್ರೀನಿವಾಸ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

