ಬುದ್ಧಿಮಾಂದ್ಯೆ ಸಹಿತ ಮಹಿಳೆಯರ ಮೇಲೆ ತಂಡದಿಂದ ಹಲ್ಲೆ
ಪುತ್ತೂರು: ಬುದ್ಧಿಮಾಂದ್ಯೆ ಸಹಿತ ಮೂವರು ಮಹಿಳೆಯರ ಮೇಲೆ ಅವರ ಸಂಬಂಧಿಕ ತಂಡವೇ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಬಂಬಿಲ ಮಂಜುನಾಥ ನಗರ ಎಂಬಲ್ಲಿ ನಡೆದಿದೆ.
ಪಾಲ್ತಾಡಿ ಗ್ರಾಮದ ಬಂಬಿಲ ಮಂಜುನಾಥನಗರ ನಿವಾಸಿ ಅಮ್ಮುಶೆಟ್ಟಿ ಅವರ ಪುತ್ರಿ ಸುಭಾಷಿಣಿ (27), ಅವರ ಸಹೋದರಿಯರಾದ ಗಿರಿಜಾ (45) ಮತ್ತು ರಾಜೀವಿ (31) ಹಲ್ಲೆಗೊಳಗಾದವರು. ಹಲ್ಲೆಗೊಳಗಾದ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ ಸಹೋದರ ಸೋಮಪ್ಪ ಶೆಟ್ಟಿ ಮನೆಯ ಸಮೀಪವೇ ಪ್ರತ್ಯೇಕ ಮನೆ ಮಾಡಿಕೊಂಡು ಪತ್ನಿ ಲೀಲಾವತಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದು, ಸೋಮವಾರ ತನ್ನ ಸಹೋದರ ಸೋಮಪ್ಪ ಶೆಟ್ಟಿ ಮತ್ತು ಅವರ ಪತ್ನಿ ಲೀಲಾವತಿ ಜಗಳವಾಡಿಕೊಂಡಿದ್ದರು. ಬಳಿಕ ಸೋಮಪ್ಪ ಶೆಟ್ಟಿ ತನ್ನ ಮನೆಗೆ ಬಂದಿದ್ದರು. ಈ ಕಾರಣಕ್ಕಾಗಿ ಅತ್ತಿಗೆ ಲೀಲಾವತಿ ಅವರು ಪುತ್ರ ಸತ್ಯಪ್ರಕಾಶ್ ಮತ್ತು ಸ್ಥಳೀಯನೇ ಆದ ಆತನ ಸ್ನೇಹಿತ ಸಂತೋಷ್ ಕುಮಾರ್ ಎಂಬವರನ್ನು ಸೇರಿಸಿಕೊಂಡು ಬಂದು ತಮ್ಮ ಮೂವರ ಮೇಲೆ ಹಲ್ಲೆ ನಡೆಸಿರುವುದಾಗಿ ಸುಭಾಷಿಣಿ ಆರೋಪಿಸಿದ್ದಾರೆ.
ಹಲ್ಲೆಗೊಳಗಾದವರ ಪೈಕಿ ರಾಜೀವಿ ಅವರು ಬುದ್ಧಿಮಾಂದ್ಯೆಯಾಗಿದ್ದು, ಆಕೆಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ಆರೋಪಿಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು 'ನಿಮ್ಮನ್ನು ಈ ಮನೆಯಿಂದಲೇ ಓಡಿಸುವುದಾಗಿ' ಬೆದರಿಕೆಯೊಡ್ಡಿದ್ದಾಗಿ ಸುಭಾಷಿಣಿ ದೂರಿದ್ದಾರೆ.
ಬಿಸಿ ಹಾಲು ಬಿದ್ದು ಮಗುವಿಗೆ ಗಾಯ
ಉಪ್ಪಿನಂಗಡಿ: ಮನೆಯಲ್ಲಿ ಆಟವಾಡುತ್ತಿದ್ದ ಮಗು ರೇಮಶ್ (5) ಮೇಲೆ ಬಿಸಿ ಹಾಲು ಬಿದ್ದು, ಗಂಭೀರವಾಗಿ ಗಾಯಗೊಂಡ ಘಟನೆ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಕುದ್ಕೋಳಿ ಎಂಬಲ್ಲಿನ ನಿವಾಸಿ ಚೆನ್ನಪ್ಪ ಗೌಡ ಎಂಬವರ ಮಗನಾಗಿರುವ ರಮೇಶ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿಸಿ ಹಾಲನ್ನಿಟ್ಟ ಪಾತ್ರೆಗೆ ಬಿದ್ದು, ಸುಟ್ಟ ಗಾಯವನ್ನು ಪಡೆದು ಪುತ್ತೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಯುವಕನ ಮೇಲೆ ತಂಡದಿಂದ ಹಲ್ಲೆ
ಉಪ್ಪಿನಂಗಡಿ: ಇಲ್ಲಿನ ಬಾರ್ ರೆಸ್ಟೋರೆಂಟ್ ಬಳಿ ಯುವಕನೊಬ್ಬನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಹಣಕಾಸು ಸಂಸ್ಥೆಯೊಂದರ ಮಾಲೀಕ ಉಪ್ಪಿನಂಗಡಿ ಗಾಂಧೀಪಾರ್ಕ್ ಬಳಿಯ ನಿವಾಸಿ ವಿನಾಯಕ ಪೈ ಎಂಬವರ ಮೇಲೆ ಪ್ರಸಾದ್ ಪಚ್ಚಾಡಿ, ತಿಮ್ಮಪ್ಪ, ರೋಹಿತಾಕ್ಷ ಮತ್ತು ಬಾಲಕೃಷ್ಣ ಎಂಬವರು ತಲವಾರು ಮತ್ತು ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದರೆಂದೂ ಈ ಹಿಂದೆ ಉಪ್ಪಿನಂಗಡಿ ದೇವಾಲಯದ ಮತ್ತು ಖಾಸಗಿ ವ್ಯಕ್ತಿಯ ನಡುವೆ ಭೂವಿವಾದದ ಹಿನ್ನೆಲೆಯಲ್ಲಿ ಉಂಟಾದ ಸಂಘರ್ಷದಲ್ಲಿ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ ದ್ವೇಷದಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ವಿನಾಯಕ ಪೈ ದೂರಿದ್ದಾರೆ. ಗಾಯಾಳು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಪ್ರತಿ ದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರಸಾದ್ ಪಚ್ಚಾಡಿ ಎಂಬವರು ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಬಾರ್ ರೆಸ್ಟೋ ರೆಂಟ್ ಬಳಿ ನಿಂತಿದ್ದಾಗ ವಿನಾಯಕ ಪೈ ಮತ್ತು ಅವರ ಸಹಚರರಾದ ಗಣೇಶ್ ಭಟ್, ಪ್ರಕಾಶ್ ಭಟ್, ರವಳನಾಥ್ ಪ್ರಭು ಎಂಬವರು ಮರದ ರೀಪಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆಂದೂ ರಕ್ಷಿಸಲು ಬಂದ ರೋಹಿತಾಕ್ಷ, ತಿಮ್ಮಪ್ಪ, ಬಾಲಕೃಷ್ಣ ಎಂಬವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆಂದೂ ದೂರಿದ್ದಾರೆ. ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ವಿಜಯೋತ್ಸವ ಆಚರಿಸಿದ್ದಕ್ಕೆ ಅಸೂಯೆಗೊಂಡು ಈ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪಘಾತ: ಇಬ್ಬರಿಗೆ ಗಾಯ
ಪುತ್ತೂರು: ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಾಯಿ ಎಂಬಲ್ಲಿ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕಬಕ ಸಮೀಪದ ವಿದ್ಯಾಪುರ ನಿವಾಸಿ ಗೋಪಾಲ್ ಅವರ ಪುತ್ರ ಮಣಿಕಂಠ (30) ಮತ್ತು ಸಹ ಸವಾರ ರಿಝ್ವಾನ್ ಎಸ್. ಗಾಯಗೊಂಡವರು.
ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟೈಲ್ಸ್ ಕೆಲಸ ಮಾಡುತ್ತಿದ್ದ ಮಣಿಕಂಠ ಮತ್ತು ರಿಝ್ವಾನ್ ಅವರು ಉಪ್ಪಿನಂಗಡಿ ಕಡೆಗೆ ಕೆಲಸದ ನಿಮಿತ್ತ ಬೈಕ್ನಲ್ಲಿ ತೆರಳಿ ಹಿಂತಿರುಗಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

