ಬಿ.ಸಿ.ರೋಡ್-ಕೈಕುಂಜೆ ರಸ್ತೆ ಕಾಮಗಾರಿ ನೆನೆಗುದಿಗೆ: ರಸ್ತೆ ತಡೆ
ಬಂಟ್ವಾಳ: ಬಿ.ಸಿ. ರೋಡ್ನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆವರೆಗೆ ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದ್ವಿಪಥ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಬಿ.ಸಿ. ರೋಡ್ ಹಾಗೂ ಕೈಕುಂಜೆ ಪರಿಸರದ ನಾಗರಿಕರು ಮಂಗಳವಾರ ದಿಢೀರ್ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಹಲವು ವರ್ಷಗಳಿಂದ ಡಾಮರು ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ. ರೋಡ್- ಕೈಕುಂಜೆವರೆಗೆಗಿನ ಸುಮಾರು ಅರ್ಧ ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಹಾಗೂ ಕಾಂಕ್ರೀಟಿಕರಣಗೊಳಿಸಲು ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಪುರಸಭೆ ಕಾಮಗಾರಿ ಕೈಗೊಂಡು ಗುತ್ತಿಗೆಯನ್ನು ಕೆಬಿಆರ್ ಇನ್ಫೋಟೆಕ್ ಸಂಸ್ಥೆಗೆ ನೀಡಲಾಗಿತ್ತು. ಒಂದು ಪಾರ್ಶ್ವದ ಕಾಂಕ್ರೀಟ್ ಕಾಮಗಾರಿ ಮುಗಿಸಿರುವ ಗುತ್ತಿಗೆ ಸಂಸ್ಥೆ ಇನ್ನೊಂದು ಬದಿಯ ಕಾಮಗಾರಿ ಸ್ಥಗಿತಗೊಳಿಸಿತ್ತು. ಅರ್ಧಂಬರ್ಧ ಕಾಮಗಾರಿ ನಡೆಸಿದ್ದನ್ನು ಖಂಡಿಸಿ ಸ್ಥಳೀಯರು ಇತ್ತೀಚೆಗೆ ರಸ್ತೆತಡೆ ಮಾಡಿದ್ದರು.
ಕಾಮಗಾರಿ ಪುನರ್ ಆರಂಭಿಸುವುದಾಗಿ ಭರವಸೆ ನೀಡಿ ಎರಡು ವಾರ ಸಮೀಪಿಸುತ್ತಾ ಬಂದರೂ ಕೆಲಸ ಆರಂಭವಾಗುವ ಯಾವುದೇ ಲಕ್ಷಣ ಕಾಣಿಸದೆ ಬೇಸತ್ತ ಸ್ಥಳೀಯ ನಾಗರಿಕರು ಮತ್ತೆ ಪ್ರತಿಭಟನೆ ನಡೆಸಿದರು. 2013ರ ಆಗಸ್ಟ್ 16 ರಿಂದ 2014 ಮೇ 31 ಕಾಮಾಗಾರಿ ಅವಧಿಯಾಗಿದೆ. ಆದರೆ ಅವಧಿ ಮುಗಿಯುತ್ತಾ ಬಂದರೂ ಇನ್ನೊಂದು ಬದಿಯ ಕಾಂಕ್ರೀಟ್ ಕಾಮಗಾರಿ, ಚರಂಡಿ ಕಾಮಗಾರಿ ಆರಂಭವಾಗದೇ ಇರುವುದು ವಿಪರ್ಯಾಸ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ತಹಸೀಲ್ದಾರ್ ಮಲ್ಲೇಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬುಧವಾರ ಬೆಳಗ್ಗೆ ಕಾಮಗಾರಿ ಆರಂಭಿಸಲು ಗುತ್ತಿಗೆ ಸಂಸ್ಥೆಗೆ ಸೂಚಿಸಿಲಾಗಿದೆ. ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪುರಸಭಾ ಸದಸ್ಯ ಸುಗುಣ ಕಿಣಿ, ಪ್ರಮುಖರಾದ ಸುಷ್ಮಾ, ರಮೇಶ್ ಸಾಲ್ಯಾನ್, ರಾಮಚಂದ್ರ ರಾವ್, ಶಾಂತರಾಮ ಕೈಕುಂಜಾ, ಮಾಧವ ಕುಲಾಲ್, ವಿಶ್ವನಾಥ ಎನ್.ಆರ್., ಶಶಿಧರ ಕೈಕುಂಜಾ, ರೋನಾಲ್ಡ್ ಡಿಸೋಜಾ, ಯಾದವ ಅಗ್ರಬೈಲು, ಸುಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

