ಒಳಗೆ ನೇಗಿಲಯೋಗಿ ಹಾಡು, ಹೊರಗೆ ರೈತನ ಗೋಳು
ಆಯನೂರು: ಸಭಾಂಗಣದ ಒಳಗೆ ನೇಗಿಲ ಯೋಗಿಯ ನೋಡಲ್ಲಿ... ಹಾಡು ಅನುರಣಿಸುತ್ತಿತ್ತು, ಸಭಾಂಗಣದ ಹೊರಗೆ ಮಾತ್ರ ರೈತನಾಗಿದ್ದೇ ತಪ್ಪು ಎಂಬ ಗೋಳು ಮೇರೆ ಮೀರಿತ್ತು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯನೂರಿನಲ್ಲಿ ಭಾನುವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿವಿಧ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿರುವ ಉಳುಮೆ ಭೂಮಿ ಹೊಂದಿರುವ ರೈತರ ಬಾಯಲ್ಲಿ ಶಪಿಸುವ ಮಾತುಗಳು ಬಂದರೆ, ಕಣ್ಣಲ್ಲಿ ನೀರು, ಮುಂದೇನೆಂಬ ಆತಂಕದ ಛಾಯೆ ಆವರಿಸಿತ್ತು.
ಈ ಮಧ್ಯೆ ರೈತರ ದನಿಯಾಗಿ ಜಾತ್ಯತೀತ ಜನತಾದಳ ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದು ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನ ಸದಸ್ಯರು ಸಿಎಂ ಭಾಷಣ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿ ವಿರೋಧಿ ಘೋಷಣೆ ಕೂಗಿದ್ದರ ಹೊರತಾಗಿ ಕಾರ್ಯಕ್ರಮವೇನೋ ಬಿಗಿ ಬಂದೋಬಸ್ತ್‌ನಡುವೆ ಸಸೂತ್ರವಾಗಿ ನೆರವೇರಿತು.
ರೈತರ ಕಣ್ಣೀರು ಒರೆಸುವ ಯಾವೊಂದು ಪ್ರಯತ್ನವೂ ಈ ಸಂದರ್ಭದಲ್ಲಿ ನಡೆಯಲಿಲ್ಲ. ಇನ್ನೊಂದೆಡೆ ಭೂಮಿ ಕಳೆದುಕೊಳ್ಳುವ ರೈತರು ಬಂಧನ ಭೀತಿಯಿಂದಾಗಿ ಪ್ರತಿಭಟನೆಗೂ ಮುಂದೆ ಬರಲಿಲ್ಲ.
ವೇದಿಕೆಯಲ್ಲೂ ಸಹ 10-15 ನಿಜವಾದ ಭೂ ರಹಿತರನ್ನು ಕಾಪಾಡುವ ಭರವಸೆಯಷ್ಟೇ ಸಿಕ್ಕಿತು.
ಕರೆದು ಮಾತನಾಡಲಿಲ್ಲ: ಸಾರ್ವಜನಿಕ ಉದ್ದೇಶಕ್ಕಾಗಿ ಯೋಜನೆಗಳು ಅನುಷ್ಠಾನವಾಗುವುದು ಸರಿ.
ಹಾಗೆಂದು ಉಳುಮೆ ಮಾಡುವ ರೈತನ ಊಟದ ತಟ್ಟೆಯನ್ನೇ ಕಸಿದುಕೊಂಡರೆ ಹೇಗೆ ಸಾರ್ ಎಂದು ರೈತ ನಾನ್ಯಾನಾಯ್ಕ್ ಪ್ರಶ್ನಿಸುತ್ತಾರೆ.
ನಿಮ್ಮ ಜಮೀನಿನಲ್ಲಿ ಸರ್ಕಾರಿ ಯೋಜನೆಗಳು ಅನುಷ್ಠಾನವಾಗುತ್ತಿವೆ, ನೀವು ಸಹಕರಿಸಿ ಎಂದು ಕೇಳುವ ಒಂದೇ ಒಂದು ದೊಡ್ಡತನವನ್ನು ಮೆರೆಯಲಿಲ್ಲ. ನಾಯಕರೆನೆಸಿಕೊಂಡವರು ಮಾನವೀಯತೆಯನ್ನೇ ಮರೆತರು. ಇವರಿಗೆ ರೈತರು ತುತ್ತುಣುವಾಗ ಶಾಪ ಹಾಕಿದರೆ ಹೇಗಿರುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದು, ರೈತ ಷಣ್ಮುಖಪ್ಪ.
ಇತ್ತ ಸರ್ಕಾರಿ ಶಾಲೆ ಆವರಣದಲ್ಲಿ ಸಂಭ್ರಮದ ವಾತಾವರಣವಾದರೆ, ರೈತ ಮಹಿಳೆ ಪಾಪಿ ಬಾಯಿ ಕಣ್ಣಲ್ಲಿ ಕಣ್ಣೀರು ತುಂಬಿ ಬಂದಿತ್ತು. ಅವರಿಗೆ ತಮ್ಮ ಜಮೀನು ಹೀಗೆ ಕಳೆದುಕೊಳ್ಳುವುದರ ಬಗ್ಗೆ ಆತಂಕವಿತ್ತು. ಈಕೆಗೆ ಹಿಂದೆ ಮುಂದೆ ಯಾರಿಲ್ಲ. ಈಕೆಗೆ ಇರುವ 2.5 ಎಕರೆ ಜಮೀನೇ ಅಪ್ಪ, ಅಮ್ಮ, ಗಂಡ ಮಕ್ಕಳು ಎಲ್ಲಾ.
ಕನ್ನಡಪ್ರಭ ಈಕೆಯನ್ನು ಮಾತನಾಡಿಸುವಾಗ, ಭಾವೋದ್ವೇಗಕ್ಕೆ ಒಳಗಾಗಿ, ಜಮೀನಿದ್ದರಷ್ಟೇ ಜೀವನ... ಯಾರಲ್ಲಿ ಹೇಳಿಕೊಳ್ಳಲಿ ಇದನ್ನು ಎಂದು ಬೇಸರಿಸಿದರು.
ಭದ್ರತೆ ಭೇದಿಸಿ ಕಪ್ಪುಪಟ್ಟಿ ಪ್ರದರ್ಶನ
ರೈತ ಹೋರಾಟದ ಮುನ್ನೆಚ್ಚರಿಕೆಯಿಂದ ಪೊಲೀಸ್ ಇಲಾಖೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಿತ್ತು. ಅಪಾರ ಪ್ರಮಾಣದಲ್ಲಿ ಪೊಲೀಸರು ಅಲ್ಲಿ ಬೀಡುಬಿಟ್ಟಿದ್ದರು.
ಮುಫ್ತಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಇಷ್ಟಾದರೂ ಸಹ ಪೊಲೀಸ್ ಭದ್ರಕೋಟೆಯನ್ನು ಬೇಧಿಸಿದ ಬಿಎಸ್‌ಆರ್ ಕಾಂಗ್ರೆಸ್‌ನ ಸದಸ್ಯರು ಸಿಎಂ ಭಾಷಣ ಆರಂಭಿಸುತ್ತಿದ್ದಂತೆ ರೈತರ ಹಿತ ಕಾಪಾಡುವಂತೆ ಘೋಷಣೆ ಕೂಗುತ್ತಾ ವೇದಿಕೆಯತ್ತ ನುಗ್ಗಲು ಮುಂದಾದರು. ಕಪ್ಪು ಪಟ್ಟಿ ಧರಿಸಿದ್ದ ಕಾರ್ಯಕರ್ತರು, ಬಿಜಿಪಿ ಸರ್ಕಾರದ ನಿಲುವನ್ನು ಈ ಸಂದರ್ಭದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಹಿಡಿದು ಬಂಧಿಸಿ ಕರೆದೊಯ್ದರು.
ಜೆಡಿಎಸ್‌ನಿಂದ ಮುಖ್ಯಮಂತ್ರಿಗೆ ಮನವಿ ಅರ್ಪಣೆ
ಭೂಮಿ ಕಳೆದುಕೊಳ್ಳುವ ರೈತರ ಪರವಾಗಿ ಹೋರಾಟದ ಹೊಣೆಹೊತ್ತುಕೊಂಡಿರುವ ಜೆಡಿಎಸ್ ಭಾನುವಾರ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಿತು. ಮನವಿ ಅರ್ಪಿಸುವ ಉದ್ದೇಶದಿಂದ ಪೊಲೀಸರು ಮುಂಚಿತವಾಗಿ ವ್ಯವಸೆ ಮಾಡಿದ್ದರು. ರಸ್ತೆ ಬದಿಯಲ್ಲಿ ಕಾದಿದ್ದ ರೈತರು, ಜೆಡಿಎಸ್ ಮುಖಂಡರು ಸಿಎಂಗೆ ಮನವಿ ಅರ್ಪಿಸಿ, ಜಮೀನು ವಶಪಡಿಸಿಕೊಳ್ಳದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶ್ರೀಕಾಂತ್, ಶಾರದಾ ಪೂರ್ಯಾನಾಯ್ಕ ಇದ್ದರು.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

